ಚಿತ್ರದುರ್ಗ : ಚಿತ್ರದುರ್ಗ ನಗರ ಠಾಣೆಯ ಪಿಎಸ್ಐ ಗಾದಿಲಿಂಗಪ್ಪ ಮೇಲೆ ಮಧುಗಿರಿ ಬಿಜೆಪಿ ಮುಖಂಡ ಹನುಮಂತೇಗೌಡ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಚಿತ್ರದುರ್ಗದ ತುರುವನೂರು ರಸ್ತೆಯಲ್ಲಿ ಶುಕ್ರವಾರ ತಡರಾತ್ರಿ ಹನುಮಂತೇಗೌಡ ಹಾಗೂ ಇತರರು ಗುಂಪಾಗಿ ನಿಂತಿದ್ದನ್ನು ಪ್ರಶ್ನಿಸಿದ್ದಕ್ಕೆ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಪಿಎಸ್ಐ ಉಲ್ಲೇಖಿಸಿದ್ದಾರೆ.
ತುರುವನೂರು ರಸ್ತೆಯ ಖಾಸಗಿ ಹೋಟೆಲ್ ಬಳಿ ಈ ಘಟನೆ ನಡೆದಿದೆ. ಪಿಎಸ್ಐ ಗಾದಿಲಿಂಗಪ್ಪ ಕೈಬೆರಳಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಮೇಲೆ ಹನುಮಂತೇಗೌಡ ಪ್ರತಿದೂರು : ಇತ್ತ, ಪೊಲೀಸರೇ ತಮ್ಮ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಹನುಮಂತೇಗೌಡ ಚಿತ್ರದುರ್ಗ ನಗರ ಠಾಣೆಯಲ್ಲಿ ಪ್ರತಿದೂರು ದಾಖಲು ಮಾಡಿದ್ದಾರೆ. ಪಿಎಸ್ಐ ಗಾದಿಲಿಂಗಪ್ಪ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಹನುಮಂತೇಗೌಡ ಕೂಡ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಗೆ ಮಾಜಿ ಶಾಸಕ ತಿಪ್ಪಾರೆಡ್ಡಿ ಅವರು ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದ್ದಾರೆ.
ಪಿಎಸ್ಐ - ಬಿಜೆಪಿ ಮುಖಂಡನ ಜಟಾಪಟಿ ವಿಡಿಯೋ ವೈರಲ್ : ಚಿತ್ರದುರ್ಗ ನಗರದಲ್ಲಿ ಪಿಎಸ್ಐ ಹಾಗೂ ಬಿಜೆಪಿ ಮುಖಂಡರ ನಡುವಿನ ಜಟಾಪಟಿಯ ದೃಶ್ಯ ವೈರಲ್ ಆಗಿದೆ. ಪಿಎಸ್ಐ ಗಾದಿಲಿಂಗಪ್ಪ ಹಾಗೂ ಹನುಮಂತೇಗೌಡ ಹೊಡೆದಾಡಿಕೊಂಡಿರುವುದು ದೃಶ್ಯದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: ಮೈಸೂರು : ನೀರಿನಲ್ಲಿ ಮುಳುಗಿ ತಾತ, ಇಬ್ಬರು ಮೊಮ್ಮಕ್ಕಳು ಸಾವು