ಚಿಕ್ಕೋಡಿ (ಬೆಳಗಾವಿ): ಕಳೆದ ಕೆಲವು ದಿನಗಳ ಕಾಲ ಬಿಡುವು ನೀಡಿದ್ದ ಮಳೆ ಇದೀಗ ಮತ್ತೆ ಅಬ್ಬರಿಸುತ್ತಿದೆ. ರಾಜ್ಯಾದ್ಯಂತ ಧಾರಾಕಾರವಾಗಿ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಸೋಮವಾರ ರಾತ್ರಿ ಸುರಿದ ಮಳೆಗೆ ಕುಡಚಿ ಸುತ್ತಮುತ್ತಲಿನ ಜನ-ಜಾನುವಾರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಕುಡಚಿ ಪಟ್ಟಣದಲ್ಲಿ ಹಾಗೂ ಕೆಲವು ಗ್ರಾಮದಲ್ಲಿ ರಾತ್ರಿ ರಭಸದ ಮಳೆ ಸುರಿದಿದ್ದು, ಸುಕ್ಷೇತ್ರ ಮಾಯಕ್ಕ ದೇವಸ್ಥಾನನಕ್ಕೆ ತೆರಳುವ ಚಿಂಚಲಿ ಗ್ರಾಮ ಹಾಗೂ ಕುಡಚಿ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಕೆಳ ಹಂತದ ಸೇತುವೆ ಮುಳುಗಡೆಯಾಗಿದೆ. ಪರಿಣಾಮ ಸ್ಥಳೀಯರು ಸಂಕಷ್ಟ ಎದುರಾಗಿದೆ.
ಸತತ ಎರಡು ಗಂಟೆಗಳ ಕಾಲ ಬಿಟ್ಟು ಬಿಡದೇ ಮಳೆ ಸುರಿದಿದೆ. ವರುಣನ ಆರ್ಭಟಕ್ಕೆ ಕುಡಚಿ ಪಟ್ಟಣದ ನಿವಾಸಿಗಳು ತತ್ತರಿಸಿ ಹೋಗಿದ್ದಾರೆ. ಎಲ್ಲಿ ನೋಡಿದರಲ್ಲಿ ನದಿಯಂತೆ ಹರಿದು ಬರುತ್ತಿರುವ ಮಳೆ ನೀರನ್ನು ಕಂಡು ಆಘಾತ ವ್ಯಕ್ತಪಡಿಸುತ್ತಿದ್ದಾರೆ. ಭಾರೀ ಮಳೆಯಿಂದ ತಗ್ಗು ಪ್ರದೇಶಕ್ಕೆ ನೀರು ನುಗ್ಗಿದ್ದತರಿಂದ ಹಲವು ರಸ್ತೆಗಳು ಜಲಾವೃತಗೊಂಡಿವೆ. ಮಳೆ ಅವಾಂತರದಿಂದ ಬಹಳಷ್ಟು ಅಪಾಯ ಸೃಷ್ಟಿಯಾಗಿದೆ.

ಇದನ್ನೂ ಓದಿ: ಸವದತ್ತಿ ತಾಲೂಕಿನಲ್ಲಿ ಭಾರಿ ಮಳೆ: ನದಿಯಂತಾದ ಹೊಲ-ಗದ್ದೆಗಳು! - HEAVY RAIN IN SAVADATTI
ಸವದತ್ತಿ ತಾಲೂಕಿನ ಕೆಲ ಗ್ರಾಮಗಳಲ್ಲಿ ಭಾರಿ ಮಳೆಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಭಾನುವಾರ ಸವದತ್ತಿ ತಾಲೂಕಿನ ಹಾರುಗೊಪ್ಪ ಗ್ರಾಮದಲ್ಲಿ ಒಂದು ಗಂಟೆಗೂ ಅಧಿಕ ಕಾಲ ಮಳೆ ಸುರಿದಿದ್ದು, ಭಾರಿ ಮಳೆಗೆ ಇಲ್ಲಿನ ಗದ್ದೆಗಳು ಸಂಪೂರ್ಣ ಜಲಾವೃತವಾಗಿದ್ದವು. ರಸ್ತೆ ಮೇಲೆ ರಭಸವಾಗಿ ನೀರು ಹರಿದ ಪರಿಣಾಮ ಎರಡು ಗಂಟೆ ಕಾಲ ಸಂಚಾರ ಬಂದ್ ಆಗಿತ್ತು. ವಾಹನ ಸವಾರರು ಪರದಾಡಿದ ಘಟನೆ ನಡೆದಿತ್ತು.