ಚಿಕ್ಕೋಡಿ: ಐದು ವರ್ಷದ ಮಗುವನ್ನು ಕೊಂದ ಪ್ರಕರಣದಲ್ಲಿ ಅಪರಾಧಿ ಮಲತಂದೆಗೆ ಚಿಕ್ಕೋಡಿ 7ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ಒಂದು ಲಕ್ಷ 10 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.
ಪರಶುರಾಮ ಶ್ರೀಕಾಂತ್ ಜಾಧವ್ ಎಂಬವನೇ ಶಿಕ್ಷೆಗೆ ಗುರಿಯಾದವ. ರಾಯಭಾಗ ತಾಲೂಕಿನ ಯಂಡ್ರಾವ ಗ್ರಾಮದಲ್ಲಿ ತನ್ನ ಐದು ವರ್ಷದ ಮಗನಾದ ಮಹೇಶನನ್ನು ಕೊಲೆ ಮಾಡಿದ್ದಾನೆ ಎಂದು 2019ರಲ್ಲಿ ಮಗುವಿನ ಮೊದಲ ತಂದೆ ಅಶೋಕ ಬಾಗಡಿ ರಾಯಬಾಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಅನ್ವಯ ತನಿಖೆ ಕೈಗೊಂಡ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸುದೀರ್ಘ ವಿಚಾರಣೆ ನಡೆಸಿದ ಚಿಕ್ಕೋಡಿ ಕೋರ್ಟ್, ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಪರಶುರಾಮ ಜಾಧವ್ಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿದೆ.
ಘಟನೆ ವಿವರ: ದೂರುದಾರ ಅಶೋಕ ಬಾಗಡಿ ಹಾಗೂ ಲಕ್ಷ್ಮೀ ದಂಪತಿಯು ಪರಸ್ಪರ ಒಪ್ಪಿಗೆಯೊಂದಿಗೆ ವಿಚ್ಚೇದನ ಪಡೆದಿದ್ದರು. ಇವರಿಗೆ ಐವರು ಮಕ್ಕಳಿದ್ದರು. ಪತ್ನಿಯು ಪರಶುರಾಮ ಜಾಧವ್ ಜೊತೆಗೆ ಎರಡನೇ ಮದುವೆ ಮಾಡಿಕೊಂಡು, ಕೊನೆಯ ಐದು ವರ್ಷದ ಮಗ ಮಹೇಶನನ್ನು ತನ್ನೊಂದಿಗೆ ಕರೆದುಕೊಂಡು ಹೋಗಿದ್ದಳು. ಹೀಗಿರುವಾಗ, 2019ರ ಮೇ 4ರಂದು ಲಕ್ಷ್ಮೀ ಮನೆಯಲ್ಲಿ ಇಲ್ಲದಾಗ, ಆರೋಪಿ ಪರಶುರಾಮ ಮೊದಲನೆಯ ಗಂಡನಿಂದ ಜನಿಸಿರುವ ಮಗು ದೊಡ್ಡವನಾದ ಮೇಲೆ ತನ್ನ ಆಸ್ತಿಯಲ್ಲಿ ಪಾಲು ಕೊಡಬೇಕಾಗುತ್ತದೆ, ಹಾಗೂ ತಮ್ಮ ದಾಂಪತ್ಯಕ್ಕೆ ತೊಂದರೆ ಕೊಡುತ್ತಾನೆ ಎಂದು ತಿಳಿದು ಲಟ್ಟಣಿಗೆಯಿಂದ ಹೊಡೆದು ಕೊಲೆ ಮಾಡಿದ್ದ.
ಬಳಿಕ ಮನೆಗೆ ಬಂದ ಲಕ್ಷ್ಮೀಗೆ ಈ ವಿಚಾರ ಯಾರಿಗಾದರೂ ಹೇಳಿದರೆ ನಿನ್ನನ್ನೂ ಕೊಲೆ ಮಾಡುತ್ತೇನೆ ಎಂದು ಬೆದರಿಸಿದ್ದ. ಆದರೆ ಕೊಲೆ ಬಗ್ಗೆ ಹೇಗೋ ಮೃತಪಟ್ಟ ಬಾಲಕನ ಮೊದಲ ತಂದೆಗೆ ತಿಳಿಯುತ್ತಿದ್ದಂತೆ, ರಾಯಭಾಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ರಾಯಬಾಗ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 302, 509 ಅಡಿ ಪ್ರಕರಣ ದಾಖಲಾಗಿತ್ತು.
ಸರ್ಕಾರಿ ಅಭಿಯೋಜಕ ವೈ.ಜಿ.ತುಂಗಳ ಅವರು ಪ್ರಕರಣದಲ್ಲಿ ವಾದ ಮಂಡಿಸಿದ್ದರು.
ಇದನ್ನೂ ಓದಿ: ಮಠದಲ್ಲಿ 300 ಕೋಟಿ ಇದೆಯೆಂದು ಕನ್ನ ಹಾಕಿ 50 ಸಾವಿರ ದರೋಡೆ: 12 ಆರೋಪಿಗಳ ಬಂಧನ