ಚಿಕ್ಕಬಳ್ಳಾಪುರ: ತಡರಾತ್ರಿ ಯುವಕನನ್ನು ಅಟ್ಟಾಡಿಸಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಐಪಿಎಲ್ ಸಂಭ್ರಮಾಚರಣೆ ವೇಳೆ ನಡೆದ ಗಲಾಟೆ ಕೊಲೆಗೆ ಕಾರಣವಾಯ್ತಾ ಎಂಬ ಶಂಕೆ ಚಿಕ್ಕಬಳ್ಳಾಪುರ ನಗರದಲ್ಲಿ ವ್ಯಕ್ತವಾಗಿದೆ.
ಚಿಕ್ಕಬಳ್ಳಾಪುರ ನಗರದ ಬಿಬಿ ರಸ್ತೆಯ ಅಂಗಡಿಯೊಂದರ ಬೇಸ್ಮೆಂಟ್ನಲ್ಲಿ ಯುವಕನ ಶವ ಪತ್ತೆಯಾಗಿದೆ. ಮೃತ ಯುವಕ ಚಿಕ್ಕಬಳ್ಳಾಪುರ ನಗರದ ಅಂಬೇಡ್ಕರ್ ಕಾಲೊನಿಯ ಶ್ರೀಕಾಂತ್ ಎಂದು ತಿಳಿದುಬಂದಿದೆ. ಶವ ದೊರೆತ ಸ್ಥಳದ ಹಿಂದಿನ ರಸ್ತೆಯಲ್ಲಿ ರಕ್ತದ ಕಲೆಗಳು ಪತ್ತೆಯಾಗಿದ್ದು, ಕೊಲೆ ಮಾಡಿರುವ ದುಶ್ಕರ್ಮಿಗಳು ಶವವನ್ನು ಈ ಸ್ಥಳದಲ್ಲಿ ಎಸೆದು ಹೋಗಿದ್ದಾರೆ ಎಂದು ಪೊಲೀಸ್ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತ ಯುವಕನಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ವೆಲ್ಡಿಂಗ್ ಕೆಲಸ ಮಾಡುತ್ತಿದ್ದ. ಕಳೆದ ರಾತ್ರಿ ಮನೆಗೆ ಬಂದಿರಲಿಲ್ಲ, ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾನೆ.
ಮೃತನ ತಾಯಿ ಮೀನಾಕ್ಷಿ ಅವರು ಮಾತನಾಡಿ, ರಾತ್ರಿಯಾದರೂ ಮಗ ಮನೆಗೆ ಬಂದಿರಲಿಲ್ಲ. ಮುಂಜಾನೆ 4 ಗಂಟೆಗೆ ಹುಡುಕಾಡಿದೆ. ಬೆಳಗ್ಗೆ ಮಕ್ಕಳನ್ನು ಶಾಲೆಗೆ ಕಳುಹಿಸಲು ರೆಡಿ ಮಾಡುತ್ತಿದ್ದಾಗ ವಿಷಯ ತಿಳಿಯಿತು. ಅವನಿಗಿನ್ನೂ ಸಣ್ಣ ವಯಸ್ಸು, ಇಬ್ಬರು ಚಿಕ್ಕ ಮಕ್ಕಳಿದ್ದಾರೆ. ನನಗೆ ಗಂಡನಿಲ್ಲ, ಅವನನ್ನು ನಂಬಿ ಇಡೀ ಕುಟುಂಬ ಇತ್ತು" ಎಂದು ಅಳಲು ತೋಡಿಕೊಂಡರು.
ಸ್ಥಳಕ್ಕೆ ಚಿಕ್ಕಬಳ್ಳಾಪುರ ಎಸ್ಪಿ ಕುಶಾಲ್ ಚೌಕ್ಸೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕಟ್ಟಡ ಬೇಸ್ಮೆಂಟ್ನಲ್ಲಿ ಬೆಳಗ್ಗೆ ಶವ ಪತ್ತೆಯಾಗಿದೆ. ಶವದ ಗುರುತು ಪತ್ತೆಯಾಗಿದ್ದು, 29 ವರ್ಷದ ಶ್ರೀಕಾಂತ್ ಎಂದು ತಿಳಿದು ಬಂದಿದೆ. ಶವದ ಪಕ್ಕದಲ್ಲಿ ಕಲ್ಲು ಪತ್ತೆಯಾಗಿದೆ. ಕಲ್ಲಿನಿಂದ ಜಜ್ಜಿ ಸಾಯಿಸಲಾಗಿದೆ. ಸಾಕ್ಷ್ಯಾಧಾರಗಳನ್ನು ಕಲೆ ಹಾಕಲಾಗಿದೆ. ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮರಾಗಳ ದೃಶ್ಯಗಳನ್ನು ಪರಿಶೀಲನೆ ಮಾಡಲಾಗಿದೆ. ಮರಣೋತ್ತರ ಪರೀಕೆಗೆ ಶವವನ್ನು ಕಳುಹಿಸಲಾಗಿದೆ, ಶೀಘ್ರವೇ ಆರೋಪಿಗಳ ಪತ್ತೆ ಮಾಡಲಾಗುವುದು" ಎಂದು ತಿಳಿಸಿದರು.
ಇದನ್ನೂ ಓದಿ: ಕೊಪ್ಪಳ: ಸಿನಿಮಾ ಸ್ಟೈಲ್ನಲ್ಲಿ ಸುತ್ತುವರೆದು ವ್ಯಕ್ತಿಯ ಭೀಕರ ಕೊಲೆ, ಏಳು ಆರೋಪಿಗಳ ಬಂಧನ