ETV Bharat / state

ಅಸಂಘಟಿತ ಕಾರ್ಮಿಕರಿಗೂ ಸಾಮಾಜಿಕ ಭದ್ರತೆ ಒದಗಿಸಲು ಕಾರ್ಮಿಕ ನೀತಿಯಲ್ಲಿ ಬದಲಾವಣೆಗೆ ಚಿಂತನೆ: ಶೋಭಾ ಕರಂದ್ಲಾಜೆ

ಅಸಂಘಟಿತ ಕಾರ್ಮಿಕರಿಗೂ ಸಾಮಾಜಿಕ ಭದ್ರತೆ ಒದಗಿಸಲು ಕಾರ್ಮಿಕ ನೀತಿಯಲ್ಲಿ ಬದಲಾವಣೆಗೆ ಚಿಂತನೆ ನಡೆದಿದೆ ಎಂದು ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಹೇಳಿದರು.

ಅಸಂಘಟಿತ ಕಾರ್ಮಿಕರಿಗೂ ಸಾಮಾಜಿಕ ಭದ್ರತೆ: ಶೋಭಾ ಕರಂದ್ಲಾಜೆ
ಅಸಂಘಟಿತ ಕಾರ್ಮಿಕರಿಗೂ ಸಾಮಾಜಿಕ ಭದ್ರತೆ: ಶೋಭಾ ಕರಂದ್ಲಾಜೆ (ETV Bharat)
author img

By ETV Bharat Karnataka Team

Published : July 12, 2025 at 5:46 PM IST

2 Min Read
Choose ETV Bharat

ಬೆಂಗಳೂರು: ಸಂಘಟಿತ ಕಾರ್ಮಿಕರಂತೆಯೇ ಅಸಂಘಟಿತ ವಲಯದ ಕಾರ್ಮಿಕರಿಗೂ ಸಾಮಾಜಿಕ ಭದ್ರತೆ ಒದಗಿಸಿಕೊಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪ್ರಸ್ತುತ ಚಾಲ್ತಿಯಲ್ಲಿರುವ ಕಾರ್ಮಿಕ ನೀತಿಗಳನ್ನು ಸಂಯೋಜಿಸಿ "ನಾಲ್ಕು ಕೋಡ್‌"ಗಳನ್ನಾಗಿ ರೂಪಿಸುವ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಿದೆ ಎಂದು ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಬಿ.ಪ್ಯಾಕ್ ಮತ್ತು ಸಿಜಿಐ ಸಹಯೋಗದಲ್ಲಿ ಶನಿವಾರ (ಜು.12) ನಗರದಲ್ಲಿ ಆಯೋಜಿಸಿದ್ದ 'ಮಹಿಳೆಯರು ಮತ್ತು ಮಂಗಳಮುಖಿಯರಿಗೆ ಉಚಿತ ಆಟೋ ಚಾಲನಾ ತರಬೇತಿ' ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.

ಅಸಂಘಟಿತ ಕಾರ್ಮಿಕರಿಗೂ ಸಾಮಾಜಿಕ ಭದ್ರತೆ ಒದಗಿಸಲು ಕಾರ್ಮಿಕ ನೀತಿಯಲ್ಲಿ ಬದಲಾವಣೆಗೆ ಚಿಂತನೆ: ಶೋಭಾ ಕರಂದ್ಲಾಜೆ
ಅಸಂಘಟಿತ ಕಾರ್ಮಿಕರಿಗೂ ಸಾಮಾಜಿಕ ಭದ್ರತೆ ಒದಗಿಸಲು ಕಾರ್ಮಿಕ ನೀತಿಯಲ್ಲಿ ಬದಲಾವಣೆಗೆ ಚಿಂತನೆ: ಶೋಭಾ ಕರಂದ್ಲಾಜೆ (ETV Bharat)

ಬ್ರಿಟಿಷರ ಕಾಲದಲ್ಲಿ ರೂಪಿಸಲಾಗಿರುವ ಕಾರ್ಮಿಕ ನೀತಿಗಳನ್ನೇ ಈಗಲೂ ಅನುಸರಿಸಲಾಗುತ್ತಿದೆ. ಈಗ ಅವುಗಳನ್ನು ಒಟ್ಟುಗೂಡಿಸಿ 4 ಭಾಗಗಳನ್ನಾಗಿ ಮಾಡಲು ಚಿಂತಿಸಲಾಗಿದೆ. ಸಂಘಟಿತರಂತೆಯೇ ಅಸಂಘಟಿತ ಕಾರ್ಮಿಕರಿಗೂ ಸಾಮಾಜಿಕ ಭದ್ರತೆ ಒದಗಿಸುವುದು ಸೇರಿದಂತೆ ಹಲವು ಬದಲಾವಣೆ ತರುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ದೇಶದಲ್ಲಿ 10%ರಷ್ಟು ಜನರು ಮಾತ್ರ ಸಂಘಟಿತ ಉದ್ಯೋಗಿಗಳಿದ್ದು, 90%ರಷ್ಟು ಅಸಂಘಟಿತ ಕಾರ್ಮಿಕರಿದ್ದಾರೆ. ಪ್ರಮುಖವಾಗಿ ಕೃಷಿ, ಕೂಲಿ ಕಾರ್ಮಿಕರೂ ಹೆಚ್ಚಿದ್ದಾರೆ. ಇವರಿಗೂ ಆರ್ಥಿಕ ಹಾಗೂ ಸಾಮಾಜಿಕ ಭದ್ರತೆ ನೀಡುವ ಅವಶ್ಯಕತೆ ಇದ್ದು, ಪಿಎಫ್‌ನಂತಹ ಯೋಜನೆಗಳಿಗೆ ಇವರೂ ಒಳಗೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇಡಲಾಗಿದೆ ಎಂದು ಅವರು ತಿಳಿಸಿದರು.

ದೇಶದಲ್ಲಿ ಕ್ವಿಕ್‌ ಕಾಮರ್ಸ್‌ ಅಡಿ ಉದ್ಯೋಗ ಸೃಷ್ಟಿ ಕಾರ್ಯ ವೇಗವಾಗಿ ನಡೆಯುತ್ತಿದೆ. ಪ್ರಸ್ತುತ ಸುಮಾರು 60 ಲಕ್ಷ ಜನರು ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು, ಮುಂದಿನ 10 ವರ್ಷಗಳಲ್ಲಿ ಇವರ ಸಂಖ್ಯೆ 25 ಕೋಟಿಯಾಗುವ ಸಾಧ್ಯತೆಯಿದೆ. ಎಲ್ಲವೂ ಆನ್‌ಲೈನ್‌ನಡಿಯಲ್ಲಿ ಸುಲಭವಾಗಿ ಲಭ್ಯವಾಗುವ ಕಾಲ ಬಂದಿದೆ. ಈಗ ಪ್ರಮುಖ ನಗರಗಳಲ್ಲಿ ಮಾತ್ರ ಕ್ವಿಕ್ ಕಾಮರ್ಸ್‌ ಇದ್ದು, ಮುಂದಿನ ದಿನಗಳಲ್ಲಿ ಟಯರ್‌ 2-3 ಸಿಟಿಗಳಿಗೂ ವಿಸ್ತರಣೆಯಾಗಲಿದೆ. ಹೀಗಾಗಿ ಈ ಎಲ್ಲಾ ಕಾರ್ಮಿಕರು ಸೇರಿದಂತೆ ಅಸಂಘಟಿತ ಕಾರ್ಮಿಕರನ್ನು "ಸೋಶಿಯಲ್‌ ಸೆಕ್ಯೂರಿಟಿ ಕೋಡ್‌" ಅಡಿಯಲ್ಲಿ ತರಲು ಮುಂದಾಗಿದ್ದೇವೆ ಎಂದು ಹೇಳಿದರು.

ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸುತ್ತಾ ಬರುತ್ತಿರುವುದು ಹೆಮ್ಮೆಯ ವಿಷಯ, ಮಹಿಳೆಯರನ್ನು ಆರ್ಥಿಕವಾಗಿ ಸದೃಢಗೊಳಿಸಲು ಬಿ.ಪ್ಯಾಕ್‌ ಮುಂದಾಗಿರುವುದು ಶ್ಲಾಘನೀಯ. ಮಹಿಳಾ ಆಟೋ ಚಾಲಕಿಯರ ಸಂಖ್ಯೆ ಹೆಚ್ಚಾದರೆ ಮಹಿಳೆಯರು ಇನ್ನಷ್ಟು ಧೈರ್ಯವಾಗಿ ರಾತ್ರಿ ಹಾಗೂ ಮುಂಜಾನೆ ಓಡಾಡಲು ಮುಂದಾಗಬಹುದು ಎಂದು ಅವರು ಹೇಳಿದರು.

ಅಸಂಘಟಿತ ಕಾರ್ಮಿಕರಿಗೂ ಸಾಮಾಜಿಕ ಭದ್ರತೆ: ಶೋಭಾ ಕರಂದ್ಲಾಜೆ
ಅಸಂಘಟಿತ ಕಾರ್ಮಿಕರಿಗೂ ಸಾಮಾಜಿಕ ಭದ್ರತೆ: ಶೋಭಾ ಕರಂದ್ಲಾಜೆ (ETV Bharat)

ಕಾರ್ಯಕ್ರಮದಲ್ಲಿ ಸಿಜಿಐ ಏಷಿಯಾ ಪೆಸಿಫಿಕ್ ಉಪಾಧ್ಯಕ್ಷೆ ಶ್ರೀವಿದ್ಯಾ ನಟರಾಜ್, ಸಾರಿಕಾ ಪ್ರಧಾನ್, ಸಿಎಸ್‌ಆರ್‌ ಮುಖ್ಯಸ್ಥರಾದ ಸುಧಾಕರ್ ಪೈ, ಬಿ.ಪ್ಯಾಕ್‌ ಸದಸ್ಯರಾದ ಮಿಮಿ ಪಾರ್ಥಸಾರಥಿ ಮತ್ತಿತರರು ಭಾಗಿಯಾಗಿದ್ದರು‌.

ಇದನ್ನೂ ಓದಿ: ಪೇಯ್ಡ್ ಪಾರ್ಕಿಂಗ್ : ಈಟಿವಿ ಭಾರತ ಫ್ಯಾಕ್ಟ್​​​ ಚೆಕ್​​ನಲ್ಲಿ ರಿಯಾಲಿಟಿ ಬಯಲು ; ಕ್ರಮದ ಭರವಸೆ ನೀಡಿದ ಹು-ಧಾ ಮೇಯರ್