ಚಾಮರಾಜನಗರ: ಲಾಠಿ ಹಿಡಿದು ಬೆಳ್ಳಂಬೆಳಗ್ಗೆ ಸಿಟಿ ರೌಂಡ್ಸ್ ಮಾಡಿದ ಮಹಿಳಾ ಪಿಎಸ್ಐ ವರ್ಷಾ ಅಡ್ಡಾದಿಡ್ಡಿ ಪಾರ್ಕಿಂಗ್ ಮಾಡಿದವರಿಗೆ ಪಾಠ ಕಲಿಸಿದ್ದಾರೆ. ಸೋಮವಾರವಷ್ಟೇ ಕೊಳ್ಳೇಗಾಲ ಪಟ್ಟಣ ಠಾಣೆ ಪಿಎಸ್ಐ ಆಗಿ ಅಧಿಕಾರ ವಹಿಸಿಕೊಂಡಿರುವ ಪಿಎಸ್ಐ ವರ್ಷಾ, ಸಿಟಿ ರೌಂಡ್ಸ್ ಮಾಡಿ ಅಡ್ಡಾದಿಡ್ಡಿ ಪಾರ್ಕಿಂಗ್ ಮಾಡಿದ್ದ ಕಾರು, ಬೈಕ್ಗಳ ಗಾಳಿ ತೆಗೆಸಿ ಬುದ್ಧಿ ಕಲಿಸಿ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ಪಾರ್ಕಿಂಗ್ ಸ್ಥಳದಲ್ಲಿ ಮಾತ್ರ ವಾಹನ ಪಾರ್ಕ್ ಮಾಡಬೇಕು, ಎಲ್ಲೆಂದರಲ್ಲಿ ವಾಹನ ನಿಲ್ಲಿಸಿದರೇ ದಂಡದ ಜೊತೆ ಚಕ್ರಗಳ ಗಾಳಿಯನ್ನು ತೆಗೆಸಲಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಜೊತೆಗೆ, ಪುಟ್ಪಾತ್ಗಳ ಮೇಲೆ ನಾಮಫಲಕ ಇಡುವವರು, ಕಸದ ಡಬ್ಬಿ ಇಡುವ ಹೋಟೆಲ್ ಮಾಲೀಕರು, ಬೀದಿ ಬದಿ ವ್ಯಾಪರಿಗಳಿಗೂ ಎಚ್ಚರಿಕೆ ಕೊಟ್ಟಿದ್ದಾರೆ.
ಇದನ್ನೂ ಓದಿ;ಹೆಲ್ಮೆಟ್ ಹಾಕದವರಿಗೆ ಅಪಘಾತದ ದೃಶ್ಯ ತೋರಿಸಿ ಎಸ್ಪಿ ಕ್ಲಾಸ್ - Wear Helmet
ಕಾರ್ಯಾಚರಣೆ ಕುರಿತು ಕೊಳ್ಳೇಗಾಲ ಪಿಎಸ್ಐ ವರ್ಷಾ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿ, ಠಾಣೆಯಲ್ಲಿ ಹೆಚ್ಚು ಸಮಯ ಇರದೇ ಸಾರ್ವಜನಿಕರ ಸಮಸ್ಯೆ, ಕಾನೂನು ಸುವ್ಯವಸ್ಥೆ, ಟ್ರಾಫಿಕ್ ಸಮಸ್ಯೆ ತಿಳಿಯಲು ನಾನು ಹೆಚ್ಚು ಒತ್ತು ಕೊಡುತ್ತೇನೆ, ಈ ರೀತಿ ಕಾರ್ಯಾಚರಣೆ ನಾನು ಕೊಳ್ಳೇಗಾಲ ಠಾಣೆಯಲ್ಲಿದ್ದಷ್ಟು ದಿನವೂ ಮುಂದುವರೆಯಲಿದೆ ಎಂದರು.
ರಾತ್ರಿ 10.30ರ ನಂತರ ಎಲ್ಲಾ ಅಂಗಡಿ, ಬಾರ್ಗಳು ಮುಚ್ಚಿಸಲಾಗುತ್ತದೆ, ವಾಹನ ಸಂಚಾರಕ್ಕೆ ಕಿರಿಕಿರಿ ಉಂಟಾಗುವಂತೆ ಪಾರ್ಕಿಂಗ್ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇನೆ, ಜನಸ್ನೇಹಿ ಪೊಲೀಸ್ ವ್ಯವಸ್ಥೆ ಮಾಡಲಾಗುತ್ತದೆ ಹಾಗೂ ಅಕ್ರಮಗಳಿಗೆ ಕಡಿವಾಣ, ಕಾನೂನು ಸುವ್ಯವಸ್ಥೆಗೆ ಭಂಗ ಬರದ ರೀತಿ ಕ್ರಮ ಕೈಗೊಳ್ಳುತ್ತೇನೆ ಎಂದರು.
ಓದಿ: ಬೊಲೆರೋ ಕಳ್ಳತನ ಪ್ರಕರಣ ಬೆನ್ನತ್ತಿದ ಪೊಲೀಸರಿಗೆ ಸಿಕ್ಕ ಚಾಲಾಕಿ: ಖದೀಮನಿಂದ 11 ಬೈಕ್ ವಶ - Theft Case