ಚಾಮರಾಜನಗರ: ಜನಪ್ರಿಯ ಹುಲಿ ರಕ್ಷಿತಾರಣ್ಯಗಳಲ್ಲಿ ಒಂದಾದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಸಂಗಾತಿಯನ್ನು ಓಲೈಸಲು ನವಿಲೊಂದು ಗರಿಬಿಚ್ಚಿ ಕುಣಿದ ಚೆಂದದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.
ವನ್ಯಜೀವಿ ಛಾಯಾಗ್ರಾಹಕ ರವಿಶಂಕರ್ ಈ ದೃಶ್ಯವನ್ನು ಸೆರೆಹಿಡಿದಿದ್ದು ಗರಿಬಿಚ್ಚಿ ಪ್ರಿಯತಮೆಯ ಮುಂದೆ ಮಯೂರವೊಂದು ನರ್ತಿಸಿದೆ. ಸಂಗಾತಿ ಮುಂದೆ ನವಿಲಿನ ಕುಣಿತ ಕಂಡ ಪ್ರವಾಸಿಗರು ಕೂಡ ಮುದಗೊಂಡಿದ್ದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ಲಾಗುತ್ತಿದೆ.
ಬಂಡೀಪುರ ರಾಷ್ಟ್ರೀಯ ಅರಣ್ಯದ ಪೊದೆಯೊಂದರ ಪಕ್ಕದಲ್ಲಿ ನವಿಲು ಗರಿಬಿಚ್ಚಿ ಕೆಲಹೊತ್ತು ನೃತ್ಯ ಮಾಡುವ ಮೂಲಕ ಮುಂದೆ ನಿಂತಿದ್ದ ಸಂಗಾತಿಯನ್ನು ಓಲೈಸಲು ಮುಂದಾಗಿದೆ.
ಬಂಡೀಪುರ ಅಭಯಾರಣ್ಯಕ್ಕೆ ಇತ್ತೀಚೆಗೆ ಉತ್ತಮ ಮಳೆಯಾಗಿರುವ ಕಾರಣ ಒಣಗಿದ ಗಿಡಮರಗಳು ಹಸಿರಾಗಿವೆ. ಸಫಾರಿಗೆ ತೆರಳಿದ ಪ್ರವಾಸಿಗರಿಗೆ ಆನೆ, ಹುಲಿ, ಚಿರತೆ, ನವಿಲು, ಜಿಂಕೆ, ಕಾಡುಕೋಣ ಸೇರಿದಂತೆ ಇನ್ನಿತರ ವನ್ಯಪ್ರಾಣಿಗಳ ದರ್ಶನವಾಗುತ್ತಿದೆ. ಇದರಿಂದ ಪ್ರವಾಸಿಗರ ಸಂಖ್ಯೆಯೂ ಕೂಡ ಗಣನೀಯವಾಗಿ ಏರಿಕೆ ಕಾಣುತ್ತಿದೆ. ಜೊತೆಗೆ, ಅಭಯಾರಣ್ಯಕ್ಕೆ ಕಾಡ್ಗಿಚ್ಚಿನ ಆತಂಕವೂ ದೂರವಾಗಿದೆ.
ಹಸಿರು ವಾತಾವರಣದಲ್ಲಿ ನವಿಲಿನ ನೃತ್ಯ ಕಂಡ ಪ್ರವಾಸಿಗರು ಖುಷಿಯಾಗಿದ್ದಾರೆ.
ಇದನ್ನೂ ಓದಿ: Video - ರಸ್ತೆಬದಿ ಹಳ್ಳದಲ್ಲಿ ಗಜಪಡೆ ಕೂಲ್ ಕೂಲ್: ವಾಹನ ಸವಾರರು ಥಂಡಾ