ಹುಬ್ಬಳ್ಳಿ: ಡಾ.ಬಿ.ಆರ್.ಅಂಬೇಡ್ಕರ್ ಸೋಲಿಗೆ ವೀರ ಸಾವರ್ಕರ್ ಕಾರಣ ಎಂದು ಸಿಎಂ ಹೇಳುತ್ತಿದ್ದಾರೆ. ಇದನ್ನು ಸಿಎಂ ಸಿದ್ದರಾಮಯ್ಯ ಸಾಬೀತು ಮಾಡಿದ್ರೆ ನಾನು ನನ್ನ ವಿಧಾನ ಪರಿಷತ್ ವಿರೋಧ ಪಕ್ಷದ ಸ್ಥಾನಕ್ಕೆ ರಾಜೀನಾಮೆ ನೀಡುವೆ. ಒಂದು ವೇಳೆ ಇದನ್ನು ಸಾಬೀತು ಮಾಡಲು ವಿಫಲವಾದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ರಾಜಕೀಯ ಸನ್ಯಾಸತ್ವ ಸ್ವೀಕಾರ ಮಾಡಬೇಕು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸವಾಲು ಹಾಕಿದರು.
ನಮ್ಮ ಸವಾಲು ಸ್ವೀಕರಿಸಿ: ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಪ್ರಿಯಾಂಕ್ ಖರ್ಗೆ ಅಂತಹವರ ಹೇಳಿಕೆಗಳಿಗೆ ಸಮರ್ಥಿಸಿ ಸಿಎಂ ಸಿದ್ದರಾಮಯ್ಯ ಮಾತನಾಡುವುದು ಬಹಳ ವಿಪರ್ಯಾಸದ ಸಂಗತಿ. ಇಂತಹ ಹಗುರವಾದ ಹೇಳಿಕೆಗಳನ್ನು ಸಿದ್ದರಾಮಯ್ಯ ಕೊಡಬಾರದಿತ್ತು, ಇದು ಅವರ ವ್ಯಕ್ತಿತ್ವಕ್ಕೆ ಗೌರವ ತರುವುದಿಲ್ಲ, ಸಿದ್ದರಾಮಯ್ಯ ನಾವು ಹಾಕಿದ ಸವಾಲನ್ನು ಸ್ವೀಕಾರ ಮಾಡಬೇಕು ಎಂದರು.
ಅಂಬೇಡ್ಕರ್ ಅವರ ಐದು ಕ್ಷೇತ್ರಗಳನ್ನು ಅಂತಾರಾಷ್ಟ್ರೀಯ ಸ್ಮಾರಕ ಮಾಡಿರುವುದು ಬಿಜೆಪಿ. ಅಷ್ಟೇ ಅಲ್ಲ ರಾಜ್ಯದಲ್ಲಿ ಅಂಬೇಡ್ಕರ್ ಭೇಟಿ ನೀಡಿದ ಧಾರವಾಡ, ಹಾಸನ, ಕೋಲಾರ, ಬೆಳಗಾವಿ ಸೇರಿದಂತೆ 7 ಜಿಲ್ಲೆಗಳಲ್ಲಿಯೂ ಸ್ಮಾರಕ ಮಾಡಲು ಪ್ರೇರಣೆ ನೀಡಿದ್ದು ಬಿಜೆಪಿ. ಆದರೂ ಕಾಂಗ್ರೆಸ್ ಸುಳ್ಳುಗಳನ್ನು ಸೃಷ್ಟಿಸುತ್ತಿದ್ದಾರೆ. ಜೊತೆಗೆ ನಿನ್ನೆ ಅಂಬೇಡ್ಕರ್ ಹೆಸರಲ್ಲಿ ಘೋಷಣೆಯಾದ ಪ್ರಶಸ್ತಿಯಲ್ಲಿಯೂ ರಾಜ್ಯ ಸರ್ಕಾರ ಗೊಂದಲ ಸೃಷ್ಟಿಸಿದೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಬಿಜೆಪಿಯಿಂದ ಬೆಲೆ ಏರಿಕೆ ವಿರೋಧಿಸಿ ಜನಾಕ್ರೋಶ ಆರಂಭ ಮಾಡಲಾಗಿದೆ. ಅಭಿವೃದ್ಧಿ ಶೂನ್ಯವಾಗಿದೆ. ಆಡಳಿತ ಸರ್ಕಾರ ಕೇವಲ ಗ್ಯಾರಂಟಿ ಮೂಲಕ ಐದು ವರ್ಷ ಪೂರೈಸಿದರೇ ಸಾಕು ಎಂಬ ಚಿಂತನೆಯಲ್ಲಿದೆ ಎಂದು ತಿಳಿಸಿದರು.
ಸರ್ಕಾರದಿಂದ ಗೊಂದಲ ಸೃಷ್ಟಿಸುವ ಕೆಲಸ: ಜನ ಗಣತಿ ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ. ಅದು ಕೇಂದ್ರ ಸರ್ಕಾರಕ್ಕೆ ಮಾತ್ರ ಅವಕಾಶವಿದೆ. ಆದರೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯ ಪರಿಸ್ಥಿತಿ ಬಗ್ಗೆ ಅವಲೋಕಿಸಲು ಜಾತಿ ಗಣತಿ ಮಾಡಬೇಕು. ಆದರೆ, ಇದನ್ನೇ ಆಧಾರವಾಗಿಟ್ಟುಕೊಂಡು ಮೀಸಲಾತಿ ಕೊಡಲು ಮತ್ತು ಹೆಚ್ಚಿಸಲು ಸಾಧ್ಯವಿಲ್ಲ. ಇದು 10 ವರ್ಷದ ಹಿಂದಿನ ವರದಿಯಾಗಿದ್ದು, ಇದರಲ್ಲಿ ಲಿಂಗಾಯತರು, ಒಕ್ಕಲಿಗರು, ಪರಿಶಿಷ್ಟ ಜಾತಿಯಲ್ಲಿಯೂ ವಿಂಗಡಣೆ ಮಾಡಿದ್ದಾರೆ. ಇದರಿಂದ ಗೊಂದಲ ಸೃಷ್ಟಿಸಿ ತನ್ನ ವೋಟ್ ಬ್ಯಾಂಕ್ ಭದ್ರಪಡಿಸಿಕೊಳ್ಳಲು ಹೊರಟಿಸಿದೆ ಹೊರತು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಆದ್ದರಿಂದ ಇದು ಅಲ್ಪಾಯುಷಿ ಸರ್ಕಾರವಾಗಿದೆ ಎಂದು ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದ್ದಾರೆ.
ಸಿಎಂ ಹೇಳಿದ್ದೇನು?: ಅಂಬೇಡ್ಕರ್ ಅವರೇ ನನ್ನನ್ನು ಸೋಲಿಸಿದವರು ಸಾವರ್ಕರ್ ಮತ್ತು ಕಮ್ಯುನಿಸ್ಟ್ ನಾಯಕ ಎಸ್.ಎ ಡಾಂಗೆ ಎಂದು ಪತ್ರ ಬರೆದಿದ್ದರು ಎಂದು ಸೋಮವಾರ ಅಂಬೇಡ್ಕರ್ ಅವರ ಪ್ರತಿಮೆಗೆ ಗೌರವ ನಮನ ಸಲ್ಲಿಸಿದ ಬಳಿಕ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದರು.
ಇದನ್ನೂ ಓದಿ: ಮನುವಾದಿಗಳು ಈಗ ಅಂಬೇಡ್ಕರ್ ಅವರನ್ನು ತಮ್ಮ ಸ್ವಂತ ಎಂಬಂತೆ ಬಿಂಬಿಸಲು ಯತ್ನಿಸುತ್ತಿದ್ದಾರೆ: ಸಿಎಂ ಸಿದ್ದರಾಮಯ್ಯ
ಇದನ್ನೂ ಓದಿ: ಬೆಂಗಳೂರಲ್ಲಿ ಆಂಧ್ರ ಮಾದರಿ ಮೀರಿ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಲಾಗುವುದು: ಸಿಎಂ ಸಿದ್ದರಾಮಯ್ಯ