ಬೆಳಗಾವಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇಂದು ಸಿಇಟಿ ಪರೀಕ್ಷೆ ಫಲಿತಾಂಶವನ್ನು ಪ್ರಕಟಿಸಿದ್ದು, ಇಂಜಿನಿಯರಿಂಗ್ ವಿಭಾಗದಲ್ಲಿ ಬೆಳಗಾವಿ ವಿದ್ಯಾರ್ಥಿ ರಾಜ್ಯಕ್ಕೆ 108ನೇ ರ್ಯಾಂಕ್ ಬರುವ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾನೆ. ಅದೇ ರೀತಿ ಜಿಲ್ಲೆಗೆ ಮೊದಲ ಸ್ಥಾನ ಪಡೆದಿದ್ದಾನೆ.
ಬೆಳಗಾವಿ ನಗರದ ಶಿವಬಸಪ್ಪ ಗಿರನ್ನವರ ಪಿಯು ಕಾಲೇಜಿನ ರಾಯೇಶ್ವರ ಪ್ರಕಾಶ ಅನ್ವೇಕರ್ 108ನೇ ರ್ಯಾಂಕ್ ಪಡೆದು ಸಾಧನೆ ಮೆರೆದ ವಿದ್ಯಾರ್ಥಿ. ದ್ವಿತೀಯ ಪಿಯುಸಿಯಲ್ಲಿ ಶೇ.96ರಷ್ಟು ಅಂಕ ಗಳಿಸಿದ್ದ ರಾಯೇಶ್ವರ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಶೇ.99.53ರಷ್ಟು ಅಂಕ ಪಡೆದಿದ್ದಾನೆ. ಶ್ರೀ ಚೈತನ್ಯ ಸೆಂಟರ್ ನಲ್ಲಿ ಸಿಇಟಿ ಕೋಚಿಂಗ್ ಪಡೆದಿದ್ದಾನೆ.
ರಾಯೇಶ್ವರ ತಂದೆ ಪ್ರಕಾಶ ಹೊಸಪೇಟೆಯ ಐಎಸ್ ಆರ್ ಸಕ್ಕರೆ ಕಾರ್ಖಾನೆಯಲ್ಲಿ ಎಚ್ಆರ್ ಅಗಿ ಕೆಲಸ ಮಾಡುತ್ತಿದ್ದರೆ, ತಾಯಿ ವರ್ಷಾ ಬೆಳಗಾವಿಯ ಶ್ರೀಚೈತನ್ಯ ಟೆಕ್ನೋ ಸ್ಕೂಲ್ ಉಪ ಪ್ರಾಂಶುಪಾಲರಾಗಿದ್ದಾರೆ. ಟಿಳಕವಾಡಿ ಫಸ್ಟ್ ಗೇಟ್ ಬಳಿಯ ಮನೆಯಲ್ಲಿ ರಾಯೇಶ್ವರ ಕುಟುಂಬ ವಾಸವಿದೆ.
ಈಟಿವಿ ಭಾರತ ಪ್ರತಿನಿಧಿ ರಾಯೇಶ್ವರ ಅನ್ವೇಕರ್ ಸಂಪರ್ಕಿಸಿದಾಗ ಜೆಇಇ ಪರೀಕ್ಷೆಗೆ ಹೆಚ್ಚು ಗಮನ ಕೊಟ್ಟಿದ್ದೆ. ಸಿಇಟಿಗೆ ಪರೀಕ್ಷೆಗೆ ಅಷ್ಟೊಂದು ಒತ್ತು ಕೊಟ್ಟಿರಲಿಲ್ಲ. ಹಾಗಾಗಿ, ಈ ಫಲಿತಾಂಶ ನಿರೀಕ್ಷೆ ಮಾಡಿರಲಿಲ್ಲ. ಆದರೂ ರಾಜ್ಯಕ್ಕೆ 108ನೇ ರ್ಯಾಂಕ್ ಬಂದಿರುವುದಕ್ಕೆ ತುಂಬಾ ಖುಷಿ ಆಗುತ್ತಿದೆ. ತಂದೆ-ತಾಯಿ, ಕಾಲೇಜಿನ ಪ್ರಾಧ್ಯಾಪಕರು ತುಂಬಾ ಪ್ರೋತ್ಸಾಹ ನೀಡಿದ್ದಾರೆ. ಈ ರ್ಯಾಂಕ್ ತಂದೆ-ತಾಯಿಗೆ ಅರ್ಪಿಸುತ್ತೇನೆ ಎಂದರು.
ಇಂಜಿನಿಯರಿಂಗ್ ಎಲೆಕ್ಟ್ರಿಕಲ್ ಇಲ್ಲವೇ ಕಂಪ್ಯೂಟರ್ ಸೈನ್ಸ್ ಮಾಡುವ ವಿಚಾರ ಇದೆ. ಜೆಇಇ ಅಡ್ವಾನ್ಸ್ ಫಲಿತಾಂಶ ಬಂದ ಮೇಲೆ ಯಾವ ಕಾಲೇಜು ಸೇರಬೇಕು ಅಂತಾ ನಿರ್ಧರಿಸುವೆ. ಇಂಜಿನಿಯರಿಂಗ್ ಪದವಿ ಮುಗಿಸಿ ಮುಂದೆ ಯುಪಿಎಸ್ಸಿ ಪರೀಕ್ಷೆ ಎದುರಿಸುತ್ತೇನೆ. ಐಎಎಸ್ ಪಾಸ್ ಆಗುವುದು ನನ್ನ ಜೀವನದ ಅತೀ ದೊಡ್ಡ ಗುರಿ ಎಂದು ತನ್ನ ಭವಿಷ್ಯದ ಕನಸನ್ನು ರಾಯೇಶ್ವರ ಬಿಚ್ಚಿಟ್ಟರು.
ಕಡಿಮೆ ಸಮಯದಲ್ಲಿ ಗಮನವಿಟ್ಟು ಓದುವುದನ್ನು ರೂಢಿಸಿಕೊಳ್ಳಬೇಕು. ಓದುವಾಗ ಮನಸ್ಸಿನಲ್ಲಿ ಯಾವುದೇ ರೀತಿ ಒತ್ತಡ ಇರಬಾರದು. ಮುಕ್ತ ಮನಸ್ಸಿನಿಂದ ಓದಬೇಕು. ಎಷ್ಟು ಗಂಟೆ ಓದುತ್ತೇವೆ ಎನ್ನುವುದಕ್ಕಿಂತ ವಿಷಯವನ್ನು ಅರ್ಥೈಸಿಕೊಂಡು, ಮನಸ್ಸಲ್ಲಿ ಉಳಿಯುವಂತೆ ಇರಬೇಕು. ಕಾಲೇಜಿನಲ್ಲಿ ಪ್ರಾಧ್ಯಾಪಕರ ಪಾಠ ಲಕ್ಷ್ಯವಹಿಸಿ ಆಲಿಸಬೇಕು. ಏನಾದರೂ ಗೊಂದಲ ಇದ್ದರೆ ಅಲ್ಲಿಯೇ ಸರಿಪಡಿಸಿಕೊಳ್ಳಬೇಕು. ಚೈತನ್ಯ ಕಾಲೇಜಿನ ಎಲ್ಲಾ ಪ್ರಾಧ್ಯಾಪಕರು ತುಂಬಾ ಚನ್ನಾಗಿ ನಮ್ಮನ್ನು ಪರೀಕ್ಷೆಗೆ ತಯಾರಿ ಮಾಡಿದ್ದರು. ಇಂದು ಅದು ಫಲ ಕೊಟ್ಟಿದೆ ಎನ್ನುವುದು ರಾಯೇಶ್ವರ ಅಭಿಪ್ರಾಯ.
ಓದಿ: ಸಿಇಟಿ ಪರೀಕ್ಷಾ ಫಲಿತಾಂಶ ಪ್ರಕಟ: ವೃತ್ತಿಪರ ಕೋರ್ಸ್ಗಳಿಗೆ ಅರ್ಹತೆ ಪಡೆದ 2.75 ಲಕ್ಷ ವಿದ್ಯಾರ್ಥಿಗಳು