ಚಾಮರಾಜನಗರ: ಶಾಲೆಯಲ್ಲಿ ಆಟವಾಡುವ ವೇಳೆ ಕಂಬಳಿ ಹುಳ ಮುಟ್ಟಿ ಮೂರನೇ ತರಗತಿಯ 13 ವಿದ್ಯಾರ್ಥಿಗಳಿಗೆ ತುರಿಕೆ ಕಾಣಿಸಿಕೊಂಡ ಘಟನೆ ಚಾಮರಾಜನಗರದ ಪಿಡಬ್ಲ್ಯೂಡಿ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಎಲ್ಲರನ್ನೂ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಗಿದೆ.
ಓರ್ವ ವಿದ್ಯಾರ್ಥಿಯ ಬ್ಯಾಗ್ಗೆ ಹತ್ತಿಕೊಂಡ ಕಂಬಳಿ ಹುಳು ತರಗತಿಯಲ್ಲಿದ್ದ ವೇಳೆ ಹರಿದಾಡಿದ್ದು, ಹಲವರಿಗೆ ತುರಿಕೆಯಾಗಿ ಗಾಯಗಳಾಗಿವೆ.
ವಿದ್ಯಾರ್ಥಿಯ ತಾಯಿ ಮಾಲತಿ ಮಾಧ್ಯಮದ ಜೊತೆಗೆ ಮಾತನಾಡಿ, "ಮಕ್ಕಳಿಗೆ ಹುಳ ಮುಟ್ಟಿ ತುರಿಕೆ ಆಗಿದೆ ಎಂದು ಶಾಲೆಯಿಂದ ಫೋನ್ ಮಾಡಿದ್ದರು. ಹೋಗಿ ನೋಡಿದ್ರೆ, ನಿಮ್ಮ ಮಗನಿಂದಾಗಿ 13 ವಿದ್ಯಾರ್ಥಿಗಳಿಗೆ ತುರಿಕೆ ಕಾಣಿಸಿಕೊಂಡಿದೆ ಅಂತ ಮೇಷ್ಟ್ರು ಹೇಳಿದ್ರು. ಶಿಕ್ಷಕರು ಹದಿಮೂರು ಮಕ್ಕಳನ್ನೂ ಆಸ್ಪತ್ರೆಗೆ ಕರೆದುಕೊಂಡು ಬಂದರು. ನಾನೂ ಜೊತೆಗೆ ಬಂದೆ. ಉಳಿದೆಲ್ಲಾ ವಿದ್ಯಾರ್ಥಿಗಳು ಚೆನ್ನಾಗಿದ್ದಾರೆ. ಮೂವರು ವಿದ್ಯಾರ್ಥಿಗಳಿಗೆ ಮಾತ್ರ ತುರಿಕೆ ಹೆಚ್ಚಾಗಿ, ಗಾಯವಾಗಿದೆ. ಮನೆಯಿಂದ ಹೋಗುವಾಗ ಚೆನ್ನಾಗೇ ಇದ್ದ, ಶಾಲೆಗೆ ಹೋದ ಮೇಲೆ ಹೀಗಾಗಿರುವುದು. ಅವನ ಜೊತೆಗೆ ನನ್ನ ಮಗಳು ಸೇರಿ ಇನ್ನಿಬ್ಬರು ಮಕ್ಕಳು ಹೋಗಿದ್ದಾರೆ. ಅವರಿಗೇನೂ ಆಗಿಲ್ಲ. ಸದ್ಯ ಗಾಯಕ್ಕೆ ಹಚ್ಚಲು ಮದ್ದು ಹಾಗೂ ಟಾನಿಕ್ ಕೊಟ್ಟಿದ್ದಾರೆ" ಎಂದು ತಿಳಿಸಿದರು.
ಇದನ್ನೂ ಓದಿ: ಹುಬ್ಬಳ್ಳಿ: ವಿದ್ಯಾರ್ಥಿ ಅಪಹರಿಸಿ ಮತ್ತೆ ತಂದು ಬಿಟ್ಟು ಹೋದ ದುಷ್ಕರ್ಮಿಗಳು - student kidnap case