ಬೆಂಗಳೂರು: ರಾಜ್ಯ ಸರ್ಕಾರ ಕೊನೆಗೂ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆಧಾರಿತ ಜಾತಿ ಗಣತಿ ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿದೆ.
ವಿಧಾನಸೌಧದಲ್ಲಿಂದು ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಜಾತಿ ಜನಗಣತಿ ವರದಿ ಲಕೋಟೆ ಓಪನ್ ಮಾಡಲಾಯಿತು. ಸಚಿವರ ಕೈಗೆ ಗಣತಿಯ ದತ್ತಾಂಶ ನೀಡಿದ ಬಳಿಕ ಸುದೀರ್ಘ ಚರ್ಚೆ ನಡೆಸಲಾಯಿತು.
ಸಂಪುಟ ಸಹೋದ್ಯೋಗಿಗಳ ಅಭಿಪ್ರಾಯ ಆಲಿಸಿದ ಸಿಎಂ ಸಿದ್ದರಾಮಯ್ಯ ಏ.17ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿರುವುದಾಗಿ ನಂತರ ಮಾಧ್ಯಮಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದರು.
ಜನ ಗಣತಿ ಸಮೀಕ್ಷಾ ವರದಿಯನ್ನು 2024ರ ಫೆಬ್ರವರಿಯಲ್ಲಿ ಮುಚ್ಚಿದ ಲಕೋಟೆಯಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಇದಾದ ನಂತರ ವರದಿ ಸೋರಿಕೆಯಾಗಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದವು.
ಜನಗಣತಿ ಸಮೀಕ್ಷಾ ವರದಿ:
ಬಾಕ್ಸ್ 1: 2015ರ ಸಮೀಕ್ಷೆಯ ಸಮಗ್ರ ವರದಿ
ಜಾತಿವಾರು ಜನಸಂಖ್ಯಾ ವಿವರ – 1 ಸಂಪುಟ
ಜಾತಿ ವರ್ಗಗಳ ಪ್ರಮುಖ ಲಕ್ಷಣಗಳು (ಪರಿಶಿಷ್ಟ ಜಾತಿ)– 1 ಸಂಪುಟ
ಜಾತಿ ವರ್ಗಗಳ ಪ್ರಮುಖ ಲಕ್ಷಣಗಳು (ಪರಿಶಿಷ್ಟ ಪಂಗಡಗಳು)– 1 ಸಂಪುಟ
ಜಾತಿ, ವರ್ಗಗಳ ಪ್ರಮುಖ ಲಕ್ಷಣಗಳು (ಎಸ್‌ಸಿಎಸ್‌ಟಿ ಬಿಟ್ಟು )– 7 ಸಂಪುಟಗಳು
ವಿಧಾನಸಭಾ ಕ್ಷೇತ್ರಗಳ ಜಾತಿವಾರು ಅಂಕಿಅಂಶಗಳು (2 ಸಿ.ಡಿಗಳು)
ಬಾಕ್ಸ್ 2: 2015ರ ಸಮೀಕ್ಷೆಯ ‘ದತ್ತಾಂಶಗಳ ಅಧ್ಯಯನ ವರದಿ–2024’
ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಮಾಹಿತಿಯ ಜಾತಿ, ವರ್ಗವಾರು (ಎಸ್‌ಸಿಎಸ್‌ಟಿ ಬಿಟ್ಟು )– 4 ಸಂಪುಟಗಳು
ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಮಾಹಿತಿಯ ಜಾತಿ, ವರ್ಗವಾರು (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು) – 1 ಸಂಪುಟ
ಜಿಲ್ಲಾ, ತಾಲೂಕುವಾರು, ಜಾತಿವಾರು ಕುಟುಂಬಗಳು ಹಾಗೂ ಜನಸಂಖ್ಯೆಯ ವರದಿ– 30 ಸಂಪುಟಗಳು
ಶಿಕ್ಷಣ, ಉದ್ಯೋಗ ಮತ್ತು ರಾಜಕೀಯ ಪ್ರಾತಿನಿಧ್ಯದ ಕುರಿತ ದ್ವಿತೀಯ ಮೂಲಗಳಿಂದ ಪಡೆದ ವಿವರಗಳು– 1 ಸಂಪುಟ
ಒಂದು ಬಾಕ್ಸ್ನಲ್ಲಿ 13 ಸಂಪುಟ ಇತ್ತು. ಇನ್ನೊಂದರಲ್ಲಿ 37 ಸಂಪುಟ. ಒಟ್ಟು 50 ಸಂಪುಟಗಳಿವೆ.
ದಿನಾಂಕ 29.02.2024 ರಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ರಾಜ್ಯಾಧ್ಯಂತ ಸಾಮಾಜಿಕ ಮತ್ತು ಶೈಕ್ಷಣಿಕ ವರದಿಯನ್ನು 54 ಮಾನದಂಡಗಳಿಗೆ ಅನುಗುಣವಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2015ರ ದತ್ತಾಂಶಗಳ ಅಧ್ಯಯನ 2024 ಮತ್ತು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2015ರ ಅಂಕಿ-ಅಂಶಗಳನ್ನು ಒಳಗೊಂಡ ವರದಿಗಳನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಗಿತ್ತು.
ರಾಜ್ಯದ 6.35 ಕೋಟಿ ಜನಸಂಖ್ಯೆಯಲ್ಲಿ 5.98 ಕೋಟಿ ಜನಸಂಖ್ಯೆ ಜನಗಣತಿಯಲ್ಲಿ ಒಳಗೊಂಡಿದೆ. 1.35 ಕೋಟಿ ಕುಟುಂಬಗಳು ಶೇಕಡಾ 94.17ರಷ್ಟು ಮಾಹಿತಿ ಸಂಗ್ರಹಣೆಯಲ್ಲಿ ಪಾಲ್ಗೊಂಡಿವೆ. 37 ಲಕ್ಷ ಕುಟುಂಬಗಳು ಸಮೀಕ್ಷೆಯಲ್ಲಿ ಪಾಲ್ಗೊಂಡಿಲ್ಲ ಎಂದು ಸಚಿವರು ವಿವರಿಸಿದರು.
ಹೆಚ್. ಕಾಂತರಾಜ ನೇತೃತ್ವದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು 2015ನೇ ಸಾಲಿನಲ್ಲಿ ರಾಜ್ಯಾದ್ಯಂತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಏಪ್ರಿಲ್ 11, 2015 ರಿಂದ ಪ್ರಾರಂಭಿಸಿ, ಮೇ 30, 2015 ರಂದು ಪೂರ್ಣಗೊಳಿಸಲಾಗಿತ್ತು.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಜಾತಿ ಗಣತಿ ವರದಿ ಬಗ್ಗೆ ಏ.17ಕ್ಕೆ ತೀರ್ಮಾನ ಮಾಡುವುದಾಗಿ ಸ್ಪಷ್ಟಪಡಿಸಿದ್ದಾರೆ.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ–2015ರ (ಜಾತಿ ಜನಗಣತಿ) ದತ್ತಾಂಶಗಳ ಅಧ್ಯಯನ ವರದಿಯನ್ನು ಹಿಂದುಳಿದ ವರ್ಗಗಳ ಆಯೋಗವು 2024ರ ಫೆ.29ರಂದು ಮುಚ್ಚಿದ ಲಕೋಟೆಯಲ್ಲಿ ಸರ್ಕಾರಕ್ಕೆ ಸಲ್ಲಿಸಿತ್ತು. ಇದೀಗ ಸಚಿವ ಸಂಪುಟ ಸಭೆಗೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು 169 ಕೋಟಿ ರೂ. ವೆಚ್ಚದಲ್ಲಿ ಸಿದ್ಧಪಡಿಸಿರುವ ವರದಿಯನ್ನು ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಲಿದ್ದಾರೆ.
ಪ್ರಸ್ತಾವನೆಯಲ್ಲಿರುವ ಅಂಶಗಳು: ಜಸ್ಟೀಸ್ ಹೆಚ್.ಕಾಂತರಾಜ ನೇತೃತ್ವದ ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು 2015ರ ಏಪ್ರಿಲ್ 11ರಿಂದ ಮೇ 30ರವರೆಗೆ ರಾಜ್ಯದಾದ್ಯಂತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿತ್ತು. ಜಾತಿ ವಿವರವೂ ಒಳಗೊಂಡಂತೆ ಒಟ್ಟು 54 ಮಾನದಂಡಗಳಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತದ ಸಹಭಾಗಿತ್ವದಲ್ಲಿ ಸಮೀಕ್ಷೆ ನಡೆಸಿ ಮಾಹಿತಿ ಸಂಗ್ರಹಿಸಿ ಗಣಕೀಕರಣಗೊಳಿಸಲಾಗಿದೆ.
ಈ ಸಮೀಕ್ಷೆಯ ದತ್ತಾಂಶಗಳನ್ನು ಬಳಸಿಕೊಂಡು ಅಧ್ಯಯನ ವರದಿ ಸಲ್ಲಿಸುವಂತೆ ಕೆ. ಜಯಪ್ರಕಾಶ ಹೆಗ್ಡೆ ನೇತೃತ್ವದ ಆಯೋಗಕ್ಕೆ 2023ರ ಜುಲೈ 17ರಂದು ಸರ್ಕಾರ ಪತ್ರ ಬರೆದಿತ್ತು. ಅದರ ಅನ್ವಯ, ಕಾಂತರಾಜ ಆಯೋಗ ನಡೆಸಿದ್ದ ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಅಧ್ಯಯನ ವರದಿ–2024’ ಮತ್ತು ಸಮೀಕ್ಷೆಯ ಅಂಕಿಅಂಶಗಳನ್ನು ಒಳಗೊಂಡ ವರದಿಗಳನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಗಿತ್ತು.
ಹಿಂದುಳಿದ ವರ್ಗಗಳ ಆಯೋಗದ ಕಾಯ್ದೆ 1995ರ ಪ್ರಕಾರ, ಆಯೋಗವು ನೀಡುವ ಸಲಹೆಗಳಿಗೆ ಸರ್ಕಾರವು ಸಾಮಾನ್ಯವಾಗಿ ಬದ್ಧವಾಗಿರಬೇಕು. ಆದ್ದರಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಅರಿಯಲು ಹಾಗೂ ಯೋಜನೆಗಳನ್ನು ಸಮರ್ಪಕವಾಗಿ ರೂಪಿಸಿ ಅದರಂತೆ ಅನುಷ್ಠಾನಗೊಳಿಸಲು ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯ ಸಮಗ್ರ ಅಧ್ಯಯನ ವರದಿ ಅವಶ್ಯವಿದೆ ಎಂದು ಪ್ರಸ್ತಾವದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಮರ್ಥನೆ ನೀಡಿದೆ.
ಇದನ್ನೂ ಓದಿ: ಸಚಿವ ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿ ಚರ್ಚೆ ಸಾಧ್ಯತೆ: ಈ ಬಗ್ಗೆ ಸಚಿವರು ಹೇಳಿದ್ದೇನು?
ಇದನ್ನೂ ಓದಿ: 'ಜನಗಣತಿ, ಜಾತಿಗಣತಿ ತಕ್ಷಣ ಆರಂಭಿಸಿ': ಕೇಂದ್ರಕ್ಕೆ ಖರ್ಗೆ ಒತ್ತಾಯ