ಬೆಂಗಳೂರು: ಮಹಿಳೆ ಮೇಲೆ ಅತ್ಯಾಚಾರವೆಸಗಿದ ಆರೋಪದಡಿ ಕಾಮಿಡಿ ಕಿಲಾಡಿ ರಿಯಾಲಿಟಿ ಶೋ ಖ್ಯಾತಿಯ ಮಡೆನೂರು ಮನು ವಿರುದ್ಧ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
33 ವರ್ಷದ ಸಹ ನಟಿ ನೀಡಿದ ದೂರಿನ ಮೇರೆಗೆ ಮನು ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕುಲದಲ್ಲಿ ಕೀಳ್ಯಾವುದೋ ಎಂಬ ಚಿತ್ರದಲ್ಲಿ ನಾಯಕನಾಗಿದ್ದು, ಈ ಚಿತ್ರ ಇದೇ ಶುಕ್ರವಾರ (ಮೇ 23) ಬಿಡುಗಡೆಯಾಗುತ್ತಿದೆ.
ದೂರಿನಲ್ಲಿ ಏನಿದೆ ? 2018ರಲ್ಲಿ ಪರಿಚಯವಾಗಿದ್ದ ಮನು ನಾಗರಬಾವಿಯಲ್ಲಿ ಬಾಡಿಗೆ ಮನೆ ಮಾಡಿಕೊಟ್ಟಿದ್ದರು. ಕಾರ್ಯಕ್ರಮದ ಸಲುವಾಗಿ 2022ರಲ್ಲಿ ಕಾಮಿಡಿ ಕಿಲಾಡಿ ಶೋ ಕಲಾವಿದರೊಂದಿಗೆ ನನ್ನನ್ನು ಶಿವಮೊಗ್ಗದ ಶಿಕಾರಿಪುರಕ್ಕೆ ಕರೆದೊಯ್ದಿದ್ದರು.
ಕಾರ್ಯಕ್ರಮ ಮುಗಿದ ಬಳಿಕ ರೂಮ್ನಲ್ಲಿ ಉಳಿದುಕೊಂಡಿದ್ದೆ. ಸಂಭಾವನೆ ನೀಡುವ ನೆಪದಲ್ಲಿ ನನ್ನ ರೂಮಿಗೆ ಬಂದ ಮನು ನನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾಳೆ.
ಇದಾದ ಕೆಲ ದಿನಗಳ ಬಳಿಕ ನನ್ನ ಮನೆಗೆ ಬಂದು ವಿರೋಧದ ನಡುವೆಯೂ ತಾಳಿ ಕಟ್ಟಿದ್ದು, ನಂತರ ಇದೇ ಮನೆಯಲ್ಲಿ ಹಲವು ಬಾರಿ ನನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ. ಗರ್ಭಿಣಿಯಾಗಿರುವುದನ್ನು ಅರಿತು ಗರ್ಭ ನಿರೋಧಕ ಮಾತ್ರೆ ನೀಡಿ ಗರ್ಭಪಾತ ಮಾಡಿಸಿದ್ದಾನೆ. ಅಲ್ಲದೆ ನನ್ನ ಖಾಸಗಿ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿದ್ದು, ಈ ಬಗ್ಗೆ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದ ಎಂದು ಮಹಿಳೆ ದೂರಿನಲ್ಲಿ ನಮೂದಿಸಿದ್ದಾಳೆ.
ಚಿತ್ರವೊಂದರ ನಾಯಕ ನಟನಾಗಿ ಅವಕಾಶ ಬಂದಿದ್ದರಿಂದಾಗಿ ಲಕ್ಷಾಂತರ ರೂಪಾಯಿ ಹಣ ನೀಡಿದ್ದೆ. ಅತ್ಯಾಚಾರ ಮಾಡಿ ಗರ್ಭಪಾತ ಮಾಡಿಸಿದ್ದಲ್ಲದೇ, ನನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ಧಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ಧಾರೆ.
ಇದನ್ನೂ ಓದಿ : ಬೆಳಗಾವಿ ಹೊರ ವಲಯದ ರೆಸಾರ್ಟ್ ನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ - GIRL GANG RAPED IN BELAGAVI