Bihar Election Results 2025

ETV Bharat / state

ಇನ್ಮುಂದೆ 5 ಕೆ.ಜಿ ಅಕ್ಕಿ ಬದಲು ಇಂದಿರಾ ಆಹಾರ ಕಿಟ್ ವಿತರಣೆ: ಸಂಪುಟ ಸಭೆ ತೀರ್ಮಾನ

ರಾಜ್ಯದಲ್ಲಿ ಇನ್ನುಮುಂದೆ ಅನ್ನಭಾಗ್ಯ ಯೋಜನೆಯ ಹೆಚ್ಚುವರಿ 5 ಕೆ.ಜಿ ಅಕ್ಕಿ ಬದಲಿಗೆ ಇಂದಿರಾ ಆಹಾರ ಕಿಟ್ ವಿತರಿಸಲು ಸಚಿವ ಸಂಪುಟ ಸಭೆ ನಿರ್ಧಾರ ಕೈಗೊಂಡಿದೆ.

cabinet-meeting-decides-to-distribute-indira-food-kits-instead-of-5-kg-rice-in-karnataka
ರಾಜ್ಯದಲ್ಲಿ ಇನ್ಮುಂದೆ 5 ಕೆ.ಜಿ ಅಕ್ಕಿ ಬದಲು ಇಂದಿರಾ ಆಹಾರ ಕಿಟ್ ವಿತರಣೆ (ETV Bharat)
author img

By ETV Bharat Karnataka Team

Published : October 9, 2025 at 4:44 PM IST

|

Updated : October 9, 2025 at 4:57 PM IST

2 Min Read
Choose ETV Bharat

ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ರಾಜ್ಯದ ಎಎವೈ ಮತ್ತು ಪಿಹೆಚ್‌ಹೆಚ್ ಪಡಿತರಕ್ಕೆ ಪರ್ಯಾಯವಾಗಿ ಫಲಾನುಭವಿಗಳಿಗೆ ಇಂದಿರಾ ಆಹಾರ ಕಿಟ್‌ಗಳನ್ನು (ಪೌಷ್ಠಿಕ ಆಹಾರದ ಕಿಟ್) ವಿತರಿಸಲು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಹೆಚ್ಚುವರಿಯಾಗಿ ನೀಡಲಾಗುವ 5 ಕೆ.ಜಿ ಅಕ್ಕಿಯ ಬದಲಾಗಿ ಪ್ರತಿ ಪಡಿತರ ಚೀಟಿಗೆ ಇಂದಿರಾ ಆಹಾರ ಕಿಟ್ ನೀಡಲು ತೀರ್ಮಾನಿಸಲಾಗಿದೆ.

ಅನ್ನಭಾಗ್ಯ ಯೋಜನೆಯಡಿ 5 ಕೆ.ಜಿ ಹೆಚ್ಚುವರಿ ಅಕ್ಕಿ ನೀಡಲು ಆಯವ್ಯಯದಲ್ಲಿ ಹಂಚಿಕೆ ಮಾಡಿರುವ 6,426 ಕೋಟಿ ರೂ. ಅನುದಾನದಲ್ಲಿ 6119.52 ಕೋಟಿ ರೂ. ವೆಚ್ಚದಲ್ಲಿ ಇಂದಿರಾ ಆಹಾರ ಕಿಟ್ (ಪೌಷ್ಠಿಕ ಆಹಾರ ಕಿಟ್) ಒದಗಿಸಲು ಬಜೆಟ್ ಮರುಹಂಚಿಕೆ ಮಾಡಲು ಅನುಮೋದನೆ ನೀಡಲಾಗಿದೆ. ಇಂದಿರಾ ಕಿಟ್​​ನಲ್ಲಿ 1 ಕೆ.ಜಿ ತೊಗರಿ ಬೇಳೆ, 1 ಲೀಟರ್​ ಅಡುಗೆ ಎಣ್ಣೆ, 1 ಕೆ.ಜಿ ಸಕ್ಕರೆ ಹಾಗೂ 1 ಕೆ.ಜಿ ಉಪ್ಪು ಇರಲಿದೆ. ಅನ್ನಭಾಗ್ಯ ಅಕ್ಕಿಯ ಅಕ್ರಮ ಸಾಗಾಟ, ಕಳ್ಳತನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆಹಾರ ಕಿಟ್ ನೀಡಲು ತೀರ್ಮಾನಿಸಲಾಗಿದೆ ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದರು.

ಈ ಬಗ್ಗೆ ಮಾತನಾಡಿರುವ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ, ಒಬ್ಬರು, ಇಬ್ಬರು ಮಾತ್ರ ಪಡಿತರದಾರರು ಇದ್ದರೆ ಅರ್ಧರ್ಧ ಕೆ.ಜಿ ಇರುವ ಕಿಟ್ ನೀಡಲಾಗುತ್ತದೆ. ಕುಟುಂಬದಲ್ಲಿ ಮೂರು ನಾಲ್ಕು ಮಂದಿ ಸದಸ್ಯರು ಇದ್ದರೆ ಒಂದೊಂದು ಕೆ.ಜಿಯ ಕಿಟ್ ನೀಡಲಾಗುತ್ತದೆ. ಐದಕ್ಕಿಂತ ಹೆಚ್ಚು ಮಂದಿ ಸದಸ್ಯರು ಇದ್ದರೆ ಒಂದೂವರೆ ಕೆ.ಜಿ ಇರುವ ಕಿಟ್ ವಿತರಣೆ ಮಾಡಲಾಗುತ್ತದೆ. 1,26,15,815 ಪಡಿತರ ಕಾರ್ಡ್‌ಗಳು ಇವೆ.‌ ಇದರಿಂದ 4,48,62,192 ಫಲಾನುಭವಿಗಳಿಗೆ ಅನುಕೂಲ ಆಗಲಿದೆ ಎಂದು ವಿವರಿಸಿದರು.

ಯಾರಿಗೆ ಎಷ್ಟು ಆಹಾರ ಕಿಟ್, ವೆಚ್ಚವೇನು?: ರಾಜ್ಯದಲ್ಲಿರುವ ಪಡಿತರ ಫಲಾನುಭವಿಗಳನ್ನು ಅವರ ಸಂಖ್ಯೆಗೆ ಅನುಗುಣವಾಗಿ ಮೂರು ಭಾಗಗಳಾಗಿ ವಿಭಜಿಸಲಾಗುತ್ತಿದೆ. ಅದರಂತೆ 1-2 ಸದಸ್ಯರಿರುವ ಪಡಿತರ ಚೀಟಿದಾರರಿಗೆ ಅರ್ಧ ಕೆ.ಜಿಯಂತೆ ಆಹಾರ ಕಿಟ್ ನೀಡಲಾಗುತ್ತದೆ. ರಾಜ್ಯದಲ್ಲಿ ಈ ವರ್ಗಕ್ಕೆ ಬರುವ 53.22 ಲಕ್ಷ ಪಡಿತರದಾರರು ಇದ್ದಾರೆ. ಪ್ರತಿ ಆಹಾರ ಕಿಟ್ ದರ 203.75 ರೂ.ಗಳಂತೆ ಮಾಸಿಕ 66.36 ಕೋಟಿ ರೂ. ವೆಚ್ಚವಾಗಲಿದೆ.

ಇತ್ತ 3-4 ಸದಸ್ಯರಿರುವ ಪಡಿತರ ಚೀಟಿದಾರರಿಗೆ 1 ಕೆ.ಜಿಯಂತೆ ಆಹಾರ ಕಿಟ್ ವಿತರಿಸಲಾಗುತ್ತದೆ. ಈ ವರ್ಗದಲ್ಲಿ ಸುಮಾರು 2.26 ಕೋಟಿ ಫಲಾನುಭವಿಗಳಿದ್ದು, ಪ್ರತಿ ಕಿಟ್​​​ಗೆ 407.50 ರೂ.ಗಳಂತೆ ಮಾಸಿಕ 256.88 ಕೋಟಿ ರೂ. ವೆಚ್ಚವಾಗಲಿದೆ. ಇನ್ನು, 5 ಅದಕ್ಕಿಂತ ಹೆಚ್ಚಿಗೆ ಸದಸ್ಯರಿರುವ ಪಡಿತರದಾರರಿಗೆ 1.50 ಕೆ.ಜಿ.ಯಂತೆ ಆಹಾರ ಕಿಟ್ ನೀಡಲಾಗುತ್ತಿದೆ. ಈ ವರ್ಗದಲ್ಲಿ 1.69 ಕೋಟಿ ಫಲಾನುಭವಿಗಳಿದ್ದು, ಪ್ರತಿ ಕಿಟ್​​ಗೆ 611.25 ರೂ. ದರದಂತೆ ಮಾಸಿಕ 186.72 ಕೋಟಿ ರೂ. ವೆಚ್ಚವಾಗಲಿದೆ. ಆ ಮೂಲಕ 4.48 ಕೋಟಿ ಫಲಾನುಭವಿಗಳಿಗೆ ಮಾಸಿಕ ಒಟ್ಟು ಸುಮಾರು 509.96 ಕೋಟಿ ರೂ. ವೆಚ್ಚ ಆಗಲಿದೆ.

ಐದು ಕೆ.ಜಿ ಅಕ್ಕಿಗೆ 6,426 ಕೋಟಿ ರೂ. ವಾರ್ಷಿಕ ವೆಚ್ಚವಾಗುತ್ತದೆ. ಅದೇ ಇಂದಿರಾ ಆಹಾರ ಕಿಟ್​​ಗೆ ವಾರ್ಷಿಕ 6,119 ಕೋಟಿ ರೂ. ವೆಚ್ಚವಾಗಲಿದೆ. ಅದರಂತೆ ಆಹಾರ ಕಿಟ್ ವಿತರಣೆಯಿಂದ 306.48 ಕೋಟಿ ರೂ. ಉಳಿತಾಯವಾಗಲಿದೆ.

ಇದನ್ನೂ ಓದಿ: 'ನೀರಿದ್ದರೆ ನಾಳೆ' ಯೋಜನೆ: ಜಾಗೃತಿ ಅಭಿಯಾನಕ್ಕೆ ನಟ ವಶಿಷ್ಠ ಸಿಂಹ ರಾಯಭಾರಿ

Last Updated : October 9, 2025 at 4:57 PM IST