ಸುಳ್ಯ, ದಕ್ಷಿಣ ಕನ್ನಡ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೋರಂಬಡ್ಕದಲ್ಲಿ ನಡೆದ ಕೊರಗಜ್ಜ ದೈವದ ವಿಶೇಷ ಹರಕೆ ನೇಮೋತ್ಸವದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಭಾಗಿಯಾಗಿದ್ದರು.
ಈ ವೇಳೆ ಅವರು ಲೋಕಸಭೆ ಚುನಾವಣೆಗೂ ಮುನ್ನ ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗುವಂತೆ ಸಂಕಲ್ಪ ಮಾಡಿ ಪ್ರಸಾದ ಸ್ವೀಕರಿಸಲಾಗಿತ್ತು. ಅದನ್ನು ಈಗ ತೀರಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟರವರ ಮೂಲಕ ಪ್ರಧಾನಿ ನರೇಂದ್ರ ಮೋದಿಗೆ ದೈವ ನೀಡಿರುವ ಪ್ರಸಾದವನ್ನು ತಲುಪಿಸಲಾಗುತ್ತದೆ ಎಂದು ತಿಳಿದು ಬಂದಿದೆ.
ಸುಳ್ಯದ ಜಯನಗರದಲ್ಲಿರುವ ಶ್ರೀನಾಗಬ್ರಹ್ಮ ಆದಿಮೊಗೇರ್ಕಳ ದೈವಸ್ಥಾನ ಶ್ರೀಗುಳಿಗ ದೈವ ಹಾಗೂ ಕೊರಗಜ್ಜ ದೈವಸ್ಥಾನದಲ್ಲಿ ವಿಶೇಷ ಹರಕೆಯ ಹಿನ್ನೆಲೆಯಲ್ಲಿ ಶ್ರೀಕೊರಗಜ್ಜ ದೈವದ ನೇಮ ಮತ್ತು ಪರಿವಾರ ದೈವಗಳ ತಂಬಿಲ ಸೇವೆ ಕಾರ್ಯಕ್ರಮ ನಡೆಯಿತು.
ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವಂತೆ ಸಂಕಲ್ಪ ಮಾಡಿ ಬಿಜೆಪಿ ಜಯನಗರ ಬೂತ್ ಸಮಿತಿ ಹರಕೆ ಹೊತ್ತುಕೊಂಡಿತ್ತು. ಇದೀಗ ಬಿಜೆಪಿಯಿಂದ ಹರಕೆ ನೇಮೋತ್ಸವ ನಡೆದಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ನೇಮೋತ್ಸವದಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.
ಈ ವೇಳೆ ಸಂಸದ ಬ್ರಿಜೇಶ್ ಚೌಟ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಸೇರಿ ಹಲವು ಮಂದಿ ಬಿಜೆಪಿ ನಾಯಕರು ಉಪಸ್ಥಿತರಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಮೂಲಕ ಕೊರಗಜ್ಜ ದೈವದ ಪ್ರಸಾದವನ್ನು ಪ್ರಧಾನಿ ನರೇಂದ್ರ ಮೋದಿಗೆ ತಲುಪಿಸಲಾಗುತ್ತದೆ.
ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ಮಾಡಿದ ವಿಜಯೇಂದ್ರ: ಈ ನಡುವೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ರಾಜ್ಯ ಸರ್ಕಾರ ಮನುಷ್ಯತ್ವವನ್ನು ಕೂಡಾ ಕಳೆದುಕೊಂಡಿದೆ. ಮಂಗಳೂರಿನಲ್ಲಿ ನಡೆದ ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆಂದು ರಾಜ್ಯಪಾಲರ ಮೂಲಕ ಸರಕಾರಕ್ಕೆ ಒತ್ತಾಯ ಮಾಡಿದ್ದೆವು. ಆದರೆ, ಸಿದ್ದರಾಮಯ್ಯ ನೇತೃತ್ವದ ಬಂಡ ಸರಕಾರ ಈ ತನಕವೂ ಈ ನಿಟ್ಟಿನಲ್ಲಿ ತೀರ್ಮಾನಕ್ಕೆ ಬಂದಿಲ್ಲ ಎಂದು ಆರೋಪಿಸಿದರು.
ಗೃಹ ಸಚಿವರೂ ಮಂಗಳೂರು ಬಂದ ಸಂದರ್ಭದಲ್ಲಿ ಒಂದು ಕೋಮಿನವರ ಮಾತು ಕೇಳಿ ಮೃತ ಸುಹಾಸ್ ಶೆಟ್ಟಿ ಮನೆಗೆ ಭೇಟಿ ನೀಡಲಿಲ್ಲ, ಇದು ಸರ್ಕಾರಕ್ಕೆ ಶೋಭೆ ತರುವುದಿಲ್ಲ ಎಂದು ಆರೋಪಿಸಿದರು.
ಇದನ್ನು ಓದಿ: ಕ್ರೀಡಾಂಗಣಕ್ಕೆ ನುಗ್ಗಿ ಕೊಹ್ಲಿ ಅಪ್ಪಿಕೊಳ್ಳುವುದಾಗಿ ಚಾಲೆಂಜ್ ಹಾಕಿದ್ದ ಯುವಕ ಪೊಲೀಸ್ ವಶಕ್ಕೆ