ಶಿವಮೊಗ್ಗ: ಕಾಂತಾರ ಅಧ್ಯಾಯ-1 ಚಿತ್ರದ ಶೂಟಿಂಗ್ ವೇಳೆ ನಾಯಕ, ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ಇತರರಿದ್ದ ಸಣ್ಣ ಬೋಟ್ವೊಂದು ಮಗುಚಿ ಬಿದ್ದ ಘಟನೆ ಶನಿವಾರ ರಾತ್ರಿ ಜಿಲ್ಲೆಯ ಮಾಣಿಯ ಪಿಕಪ್ ಡ್ಯಾಂ ಹಿನ್ನೀರಿನಲ್ಲಿ ನಡೆದಿದೆ. ಘಟನೆಯಲ್ಲಿ ಯಾವುದೇ ಅಪಾಯ, ಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಬೋಟ್ನಲ್ಲಿ ಚಿತ್ರ ತಂಡದವರು ಚಿತ್ರೀಕರಣದಲ್ಲಿ ತೊಡಗಿದ್ದರು. ಹಿನ್ನೀರಿನ ದಡದ ಸಮೀಪದಲ್ಲೇ ಸುಮಾರು ಮೂರು ಅಡಿ ಅಳದಷ್ಟು ನೀರಿನಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಬೋಟ್ ಮಗುಚಿದ ಹಿನ್ನೆಲೆಯಲ್ಲಿ ರಿಷಬ್ ಶೆಟ್ಟಿ ಸೇರಿದಂತೆ ಇತರ ಎಲ್ಲರೂ ನೀರಿನಲ್ಲಿ ಬಿದ್ದಿದ್ದು, ಈಜಿ ದಡ ಸೇರಿದ್ದಾರೆ. ಸುಮಾರು 10ಕ್ಕೂ ಅಧಿಕ ಜನರು ಬೋಟ್ನಲ್ಲಿದ್ದರು ಎನ್ನಲಾಗಿತ್ತು. ಇದರ ಹೊರತುಪಡಿಸಿ, ಯಾರಿಗೂ ಯಾವುದೇ ಅಪಾಯವಾಗಿಲ್ಲ.
ಇದನ್ನೂ ಓದಿ: 'ಕಾಂತಾರ'ಗೆ ಹಲವು ವಿಘ್ನಗಳು: ಶೆಟ್ರ ಸಿನಿಮಾಗೆ ಏನಾಗ್ತಿದೆ? ಯಾರು, ಏನಂದ್ರು?
ಪಿಕಪ್ ಡ್ಯಾಂನ ಹಿನ್ನೀರಿನಲ್ಲಿ ದೊಡ್ಡ ಸೆಟ್ ಹಾಕಿ ಕಾಂತಾರ ಚಾಪ್ಟರ್-1 ಚಿತ್ರೀಕರಣ ನಡೆಯುತ್ತಿದೆ. ಕಳೆದ ಕೆಲ ದಿನಗಳಿಂದಲೂ ಚಿತ್ರ ತಂಡವು ಮಾಸ್ತಿಕಟ್ಟೆ ಸುತ್ತಮುತ್ತಲ ಹೋಂ ಸ್ಟೇನಲ್ಲಿ ವಾಸವಿದ್ದು, ಶೂಟಿಂಗ್ನಲ್ಲಿ ತೊಡಗಿಕೊಂಡಿದೆ.
ಯಾವುದೇ ದುರಂತ ಸಂಭವಿಲ್ಲ ಎಂದ ಹೊಂಬಾಳೆ: ಹೊಂಬಾಳೆ ಫಿಲ್ಮಂ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆದರ್ಶ್ ಅವರು ಈ ವರದಿಯನ್ನು ತಳ್ಳಿಹಾಕಿದ್ದು, ಕಾಂತಾರ -1 ರ ಚಿತ್ರಿಕರಣದ ವೇಳೆ ಯಾವುದೇ ದುರಂತ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಮಾಣಿ ಡ್ಯಾಂನ ಹಿನ್ನೀರಿನಲ್ಲಿ ನಾವು ಕಾಂತರ ಭಾಗ - 1 ಶೂಟಿಂಗ್ ನಡೆಸುತ್ತಿದ್ದೆವೆ. ನಮ್ಮ ಶೂಟಿಂಗ್ ಜಾಗದಿಂದ ಸ್ವಲ್ಪ ದೂರದಲ್ಲಿ ಒಂದು ಶಿಪ್ ಅನ್ನು ಬ್ಯಾಕ್ ಡ್ರಾಪ್ನಲ್ಲಿ ಹಾಕಿ ಕೊಂಡಿದ್ದೆವು. ನಿನ್ನೆ ಜೋರಾದ ಗಾಳಿ ಮಳೆಗೆ ಶಿಪ್ ಬಿದ್ದಿದೆ. ಆ ಜಾಗದಲ್ಲಿ ನಮ್ಮ ಚಿತ್ರ ತಂಡವರಾರು ಇರಲಿಲ್ಲ. ನಾವು ಶೂಟಿಂಗ್ ಮಾಡುವ ಜಾಗ ಅಲ್ಲಿಂದ ಸುಮಾರು ದೂರದಲ್ಲಿದೆ. ಶಿಪ್ ಬಿದ್ದಿರುವುದರಿಂದ ಯಾವುದೇ ತೂಂದರೆ ಆಗಿಲ್ಲ. ಇಂದು ನಮ್ಮ ಶೂಟಿಂಗ್ ಪ್ರಾರಂಭ ಮಾಡಿದ್ದೇವೆ ಎಂದರು.
ಜೊತೆಗೆ ನಮ್ಮ ಶೂಟಿಂಗ್ಗೆ ಬೇಕಾದ ಎಲ್ಲಾ ಅನುಮತಿಯನ್ನು ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಕೆಪಿಸಿ ಹಾಗೂ ಸ್ಥಳೀಯ ಗ್ರಾಮ ಪಂಚಾಯತಿಯಿಂದಲೂ ಸಹ ಪಡೆಯಲಾಗಿದೆ. ಹಾಗೆಯೇ ನೀರಿನ ಭಾಗದಲ್ಲಿ ನಮ್ಮದು ಯಾವುದೇ ಚಿತ್ರೀಕರಣ ಇಲ್ಲ, ಆದರೂ ನಮ್ಮ ಸುರಕ್ಷತೆಯ ದೃಷ್ಟಿಯಿಂದ ಸ್ಪೀಡ್ ಬೋಟ್, ಮುಳುಗು ತಜ್ಞರು ಸೇರಿದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಹೃದಯಾಘಾತದಿಂದ ಚಿತ್ರದ ಕಲಾವಿದ ಸಾವು: ಕಾಂತಾರ ಅಧ್ಯಾಯ-1 ಕಲಾವಿದನೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ಇತ್ತೀಚೆಗೆ (ಜೂನ್ 11) ಆಗುಂಬೆಯಲ್ಲಿ ನಡೆದಿತ್ತು. ಕೇರಳದ ತ್ರಿಶೂರ್ ಮೂಲದ ಹಾಸ್ಯ ಕಲಾವಿದ ನಿಜು ಕಲಾಭವನ್ (55) ಮೃತಪಟ್ಟವರು. ಜೂನ್ 11ರಂದು ಚಿತ್ರದ ಶೂಟಿಂಗ್ಗೆಂದು ಅವರು ಆಗಮಿಸಿದ್ದರು. ನಿಜು ಸೇರಿದಂತೆ ಇತರರಿಗೆ ಆಗುಂಬೆಯ ಮಿಥಿಲ ಹೋಂ ಸ್ಟೇನಲ್ಲಿ ಉಳಿದುಕೊಳ್ಳಲು ಚಿತ್ರತಂಡ ವ್ಯವಸ್ಥೆ ಮಾಡಿತ್ತು. ಆದರೆ ರಾತ್ರಿ ಹೋಂಸ್ಟೇನಲ್ಲಿ ನಿಜು ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಆಗ ತಕ್ಷಣವೇ ಅವರನ್ನು ಆಂಬ್ಯುಲೆನ್ಸ್ನಲ್ಲಿ ತೀರ್ಥಹಳ್ಳಿಯ ಜೆ.ಸಿ. ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ನಿಜು ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಶಿವಮೊಗ್ಗ: ಕಾಂತಾರ ಅಧ್ಯಾಯ -1ರ ಹಾಸ್ಯ ಕಲಾವಿದ ಹೃದಯಾಘಾತದಿಂದ ನಿಧನ