ಮೈಸೂರು: ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಕಾಡು ಹಂದಿ ಬೇಟೆಯಾಡುತ್ತಿದ್ದ ಇಬ್ಬರು ಮಾವುತರನ್ನು ಅಮಾನತುಗೊಳಿಸಿ ನಾಗರಹೊಳೆ ಅಭಯಾರಣ್ಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ಎ.ಸೀಮಾ ಆದೇಶ ಹೊರಡಿಸಿದ್ದಾರೆ.
ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯ ಹುಣಸೂರು ವಿಭಾಗದ ದೊಡ್ಡ ಹರವೇ ಆನೆ ಶಿಬಿರದ ಮಾವುತರಾದ ಹೆಚ್.ಎನ್. ಮಂಜು ಮತ್ತು ಜೆ.ಡಿ. ಮಂಜು ಅಮಾನತಾದವರು. ಈ ಮಾವುತರಿಬ್ಬರು ಶಿಬಿರದ ವಸತಿಗೃಹದಲ್ಲಿ ಬಂದೂಕು ಇಟ್ಟುಕೊಂಡು ವನ್ಯ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದರೆ ಎಂಬ ಆರೋಪದ ಮೇರೆಗೆ ತನಿಖೆ ನಡೆಸಿದ ವೇಳೆ ಬಂದೂಕು ಪತ್ತೆಯಾಗಿದೆ.
ಈ ಬಗ್ಗೆ ವಿಚಾರಣೆ ನಡೆಸಿದಾಗ ಇಬ್ಬರು ಮಾವುತರು ನೇರಳಕಪ್ಪೆ ಗ್ರಾಮದ ಮಂಜು ಎಂಬುವನೊಂದಿಗೆ ಸೇರಿಕೊಂಡು ಈ ಬಂದುಕಿನಿಂದಲೇ ವನ್ಯ ಪ್ರಾಣಿಗಳನ್ನು ಬೇಟೆಯಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಹುಣಸೂರು ವನ್ಯಜೀವಿ ಉಪವಿಭಾಗದ ಎಸಿಎಫ್ ಲಕ್ಷ್ಮಿಕಾಂತ್ ಪ್ರಕರಣದ ತನಿಖೆ ನಡೆಸಿ ಸಲ್ಲಿಸಿದ ವರದಿ ಮೇರೆಗೆ ಡಿಸಿಎಫ್ ಪಿ.ಎ.ಸೀಮಾ ಮಾವುತರಿಬ್ಬರನ್ನು ಅಮಾನತುಗೊಳಿಸಿ ಆದೇಶಿಸಿದ್ದು, ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.
ಈ ಬಗ್ಗೆ ಈಟಿವಿ ಭಾರತ್ಗೆ ಮಾಹಿತಿ ನೀಡಿದ ಹುಣಸೂರು ವಿಭಾಗದ ಡಿಸಿಎಫ್ ಸೀಮಾ, "ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆಯ ನಾಗರಹೊಳೆ ಅಭಯಾರಣ್ಯದ ದೊಡ್ಡ ಹರವೇ ಆನೆ ಶಿಬಿರ ಮಾವುತರಾದ ಹೆಚ್.ಎನ್. ಮಂಜು ಹಾಗೂ ಜೆ.ಡಿ. ಮಂಜು ಇಬ್ಬರು ಅರಣ್ಯ ಇಲಾಖೆಯ ವಸತಿಗೃಹದಲ್ಲೇ ನಾಡ ಬಂದೂಕು ಇಟ್ಟುಕೊಂಡು ಪ್ರಾಣಿ ಭೇಟೆಯಾಡುತ್ತಿದ್ದರು. ಇದಕ್ಕೆ ಸ್ಥಳೀಯ ವ್ಯಕ್ತಿಯೊಬ್ಬರ ಸಹಕಾರ ಇತ್ತು ಎಂದು ಇಲಾಖೆ ತನಿಖೆ ವೇಳೆ ದೃಢಪಟ್ಟಿದೆ. ಈಗ ಇಬ್ಬರು ಮಾವುತರನ್ನು ಅಮಾನತು ಮಾಡಿ, ತನಿಖೆ ಮುಂದುವರೆಸಿದ್ದೇವೆ" ಎಂದರು.
ಇದನ್ನೂ ಓದಿ: ಸರ್ಕಾರಿ ಕಚೇರಿಯಲ್ಲಿ ಹುಟ್ಟುಹಬ್ಬ ಆಚರಣೆ: ಇಂಜಿನಿಯರ್ಗಳು ಸೇರಿ ಐವರು ಅಮಾನತು