ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಯಾಣಿಕರ ಅನುಕೂಲಕ್ಕಾಗಿ ಏರ್ ಪೋರ್ಟ್ ನಿಂದ ತಮಿಳುನಾಡಿನ ಗಡಿಭಾಗದಲ್ಲಿರುವ ಅತ್ತಿಬೆಲೆಗೆ ಬಿಎಂಟಿಸಿ ಬಸ್ ಸೌಲಭ್ಯವನ್ನ ಕಲ್ಪಿಸಿದೆ. ನೂತನ ಮಾರ್ಗ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ ಎಂದು ಬಿಎಂಟಿಸಿ ಮೂಲಗಳು ತಿಳಿಸಿವೆ.
ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಪ್ರಯಾಣಿಕರು ಬೆಂಗಳೂರು ನಗರಕ್ಕೆ ಪ್ರಯಾಣಿಸಲು ಮತ್ತು ಬೆಂಗಳೂರು ನಗರದಿಂದ ಏರ್ ಪೋರ್ಟ್ಗೆ ಪ್ರಯಾಣಿಸಲು ಬಿಎಂಟಿಸಿ ವಾಯುವಜ್ರ ಸೇವೆಯನ್ನ ಆರಂಭಿಸಿದೆ. ಈಗಾಗಲೇ ನಗರದ ವಿವಿಧ ಭಾಗಗಳಿಗೆ ವಾಯುವಜ್ರ ಬಸ್ ಸೌಲಭ್ಯವಿದೆ. ನೂತನ ಮಾರ್ಗವಾಗಿ ಏರ್ ಪೋರ್ಟ್ ನಿಂದ ಅತ್ತಿಬೆಲೆ ಬಸ್ ನಿಲ್ದಾಣಕ್ಕೆ ಬಿಎಂಟಿಸಿ ಬಸ್ ಸೌಲಭ್ಯ ಆರಂಭಿಸಲಾಗಿದೆ. ಇದೇ ತಿಂಗಳ19 ರಿಂದ ನೂತನ ಮಾರ್ಗದಲ್ಲಿ ಬಸ್ ಸೌಲಭ್ಯ ಪ್ರಾರಂಭವಾಗುವ ಸಾಧ್ಯತೆ ಇದೆ.
78 ಕಿಮೀ ದೂರದ ಪ್ರಯಾಣ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅತ್ತಿಬೆಲೆ ಸುಮಾರು 78 ಕಿ.ಮೀಗಳ ಅಂತರವಿದ್ದು, ನಗರದ ಉತ್ತರದ ದಿಕ್ಕಿನಿಂದ ದಕ್ಷಿಣ ದಿಕ್ಕಿಗೆ ಪ್ರಯಾಣಿಸುವ ಅತಿ ಉದ್ದದ ವಾಯುವಜ್ರ ಮಾರ್ಗ ಇದಾಗಿದೆ. ಸುಮಾರು 3 ಗಂಟೆಗಳ ಪ್ರಯಾಣ ಇದಾಗಿದೆ ಎಂದು ಬಿಎಂಟಿಸಿ ಸಂಸ್ಥೆ ತಿಳಿಸಿದೆ.
ನೂತನ ಮಾರ್ಗ ಸಂಖ್ಯೆ ಕೆಐಎ-8ಹೆಚ್ ನಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡುವ ಬಿಎಂಟಿಸಿ ವಾಯುವಜ್ರ ಬಸ್ ಸಾದಹಳ್ಳಿ ಗೇಟ್, ಹೆಬ್ಬಾಳ, ನಾಗವಾರ ಜಂಕ್ಷನ್, ಟಿನ್ ಪ್ಯಾಕ್ಟರಿ, ದೊಡ್ಡಕನ್ನಲ್ಲಿ, ಮಾರತ್ ಹಳ್ಳಿ ಬ್ರಿಡ್ಜ್ , ಬೆಳ್ಳಂದೂರು ಗೇಟ್, ದೊಮ್ಮಸಂದ್ರ, ಸರ್ಜಾಪುರ, ಬಿದರಗುಪ್ಪೆ ಮಾರ್ಗವಾಗಿ ಅತ್ತಿಬೆಲೆ ಬಸ್ ನಿಲ್ದಾಣವನ್ನ ತಲುಪಲಿದೆ.