ಬೆಂಗಳೂರು: ''ಗ್ಯಾರಂಟಿ ಯೋಜನೆಗಳನ್ನು ಕೊಟ್ಟು, ಬಳಿಕ ಬೆಲೆ ಏರಿಕೆ ಮಾಡಿ ಹತ್ತು ಕೈಗಳಲ್ಲಿ ಬಾಚಿಕೊಳ್ಳುತ್ತಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಯುಗಾದಿ ಹಬ್ಬದ ಬಳಿಕ ಹೋರಾಟ ಮಾಡಲಾಗುವುದು'' ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ''ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ಬಳಿಕ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದಾರೆ. ವಿದ್ಯುತ್, ನೀರು, ಹಾಲಿನ ದರ ಏರಿಸಿ ಸಾಮಾನ್ಯ ಜನರಿಗೆ ಶಾಕ್ ನೀಡಿದೆ. ಹಬ್ಬದ ಮುಗಿದ ಬಳಿಕ ಬಿಜೆಪಿ ಹೋರಾಟ ನಡೆಸಲಿದೆ'' ಎಂದರು.
''ರೈತರಿಗೆ ಬಾಕಿ ಸಬ್ಸಿಡಿ ಕೊಟ್ಟಿಲ್ಲ, ಹಾಲಿನ ದರ ಏರಿಸುವಂತೆ ರೈತರು ಹೇಳಿಲ್ಲ. ಹೀಗಿದ್ದರೂ ಹಾಲಿನ ದರ ಏರಿಕೆಗೆ ಮುಂದಾಗಿದೆ. ಪ್ರತಿ ಲೀಟರ್ ಹಾಲಿಗೆ ಸಬ್ಸಿಡಿ 5 ರೂ. ಇತ್ತು. 7 ರೂ. ಕೊಡುತ್ತೇವೆ ಎಂದಿದ್ದರು, ಆದರೆ ಕೊಟ್ಟಿಲ್ಲ. ಈ ಹಿಂದೆ ಕಾಂಗ್ರೆಸ್ ಸಹ ಹಿಂದೆ ರೈತರಿಗೆ ಬಾಕಿ ಕೊಡದೇ ಬಾಕಿ ಉಳಿಸಿತ್ತು. ಅದನ್ನು ಬಿಜೆಪಿ ಸರ್ಕಾರ ತೀರಿಸಿತ್ತು. ಈಗ ಬಿಜೆಪಿ ಅವಧಿಯಲ್ಲಿದ್ದ ಸಬ್ಸಿಡಿ ಬಾಕಿ ನಾವು ತೀರಿಸಿದ್ದೇವೆ ಎಂದು ಸುಳ್ಳು ಹೇಳಿದ್ದಾರೆ'' ಎಂದು ಅಶೋಕ್ ಆರೋಪಿಸಿದರು.
ಪೆನ್ಶನ್ ಹಣ ಕೊಡುವ ಯೋಗ್ಯತೆ ಇವರಿಗಿಲ್ಲ: ''ರಾಜ್ಯದಲ್ಲಿ 60 ವರ್ಷ ಕಾಂಗ್ರೆಸ್ ಆಳಿದೆ. ಇದುವರೆಗಿನ ಮುಖ್ಯಮಂತ್ರಿಗಳಲ್ಲಿ ಶೇ.65ರಷ್ಟು ಸಾಲ ಮಾಡಿದ್ದು ಸಿದ್ದರಾಮಯ್ಯ. ಬಜೆಟ್ನಲ್ಲಿ ಕಳ್ಳ ಲೆಕ್ಕ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಬೆಲೆ ಏರಿಕೆಯ ಫೆಸ್ಟಿವಲ್ ಮುಂದೆ ಕಾದಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ವಾರ್ಡ್ ಶುಲ್ಕ ಸೇರಿದಂತೆ ಎಲ್ಲ ದರ ಏರಿಕೆ ಆಗಿದೆ. ಬ್ರ್ಯಾಂಡ್ ಬೆಂಗಳೂರು ಹೋಗಿ ದುಬಾರಿ ಬೆಂಗಳೂರು ಬಂದಿದೆ. ವಿದ್ಯುತ್ ದರವನ್ನು ನಾವು ಏರಿಸಿಲ್ಲ, ಬದಲಾಗಿ ಕೋರ್ಟ್ ಆದೇಶ ಎಂದು ಸರ್ಕಾರ ಹೇಳುತ್ತಿದೆ. ಆದಾಗ್ಯೂ ಪೆನ್ಶನ್ ಮತ್ತು ಗ್ರಾಚ್ಯುಟಿಗೆ ಸರ್ಕಾರ ಕೊಡದೇ ಜನರಿಂದ ಕೊಡಿಸುತ್ತಿದಾರೆ. ಪೆನ್ಶನ್ಗೆ ಹಣ ಕೊಡುವ ಯೋಗ್ಯತೆ ಇವರಿಗಿಲ್ಲ'' ಎಂದು ಟೀಕಿಸಿದರು.
ರಾಜ್ಯವನ್ನೇ ವ್ಹೀಲ್ ಚೇರ್ಗೆ ತಂದಿದ್ದಾರೆ: ''ಕಳೆದ 20 ತಿಂಗಳಲ್ಲಿ ಸರ್ಕಾರ 20 ಆಟ ಆಡಿದೆ. 2 ಸಾವಿರ ಕೊಟ್ಟು 20 ಸಾವಿರ ವಸೂಲಿ ಮಾಡುತ್ತಿದೆ. ಸಿದ್ದರಾಮಯ್ಯ ಮಾತ್ರವಲ್ಲ ಇಡೀ ರಾಜ್ಯವನ್ನೇ ವ್ಹೀಲ್ ಚೇರ್ಗೆ ತಂದಿದ್ದಾರೆ. ಯಾವ ಮುಖ ಇಟ್ಟು ಎರಡು ವರ್ಷದ ಸಾಧನೆ ಮಾಡುತ್ತೀರಾ? ತೆರಿಗೆ ಹಾಕದೇ ಗ್ಯಾರಂಟಿ ಕೊಡುತ್ತೇವೆ ಅಂದಿದ್ದರು. ಈಗ ಶೇ.40ರಿಂದ 60ರಷ್ಟು ಕಮಿಷನ್ ಸರ್ಕಾರ ಆಗಿದೆ ಎಂದು ಗುತ್ತಿಗೆದಾರರು ಆರೋಪಿಸುತ್ತಿದ್ದಾರೆ. ಬಾಣಲೆಯಿಂದ ಬೆಂಕಿಗೆ ಜನ ಬಿದ್ದ ಹಾಗೆ ಆಗಿದೆ'' ಎಂದು ಕಿಡಿಕಾರಿದರು.
ಇದನ್ನೂ ಓದಿ: ಕಾಂಗ್ರೆಸ್ಸೇ ಒಂದು ಹನಿಟ್ರ್ಯಾಪ್ ಕಂಪನಿ: ಛಲವಾದಿ ನಾರಾಯಣಸ್ವಾಮಿ
ಕೇಂದ್ರ ನಾಯಕರು ತೀರ್ಮಾನ ಮಾಡುವರು: ಶಾಸಕರಾದ ಎಸ್.ಟಿ.ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಉಚ್ಚಾಟನೆ ಆಗಲಿದ್ದಾರೆ ಎಂದು ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅಶೋಕ್, ''ಈ ಬಗ್ಗೆ ಕೇಂದ್ರದ ನಾಯಕರು ತೀರ್ಮಾನ ಮಾಡಲಿದ್ದಾರೆ. ನಾವೆಲ್ಲಾ ಒಟ್ಟಿಗೆ ಕಾಂಗ್ರೆಸ್ ಎದುರಿಸಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಪಕ್ಷ ನಮ್ಮ ತಾಯಿ ಇದ್ದ ಹಾಗೆ, ಅದರ ವಿರುದ್ದ ಯಾವುದೇ ಹೇಳಿಕೆ ಕೊಡಬಾರದು'' ಎಂದು ಮನವಿ ಮಾಡುತ್ತೇವೆ ಎಂದರು.
ಸ್ವಾಮೀಜಿ ಎಚ್ಚರಿಕೆ ಆಶ್ಚರ್ಯ ತಂದಿದೆ: ಮತ್ತೆ ರೆಬಲ್ ನಾಯಕರ ಸಭೆ ವಿಚಾರ ಸಂಬಂಧ ಮಾತನಾಡಿದ ಅವರು, ''ಎಲ್ಲವನ್ನೂ ಕೇಂದ್ರದ ನಾಯಕರು ಗಮನಿಸುತ್ತಿದ್ದಾರೆ. ನನಗೆ ಸಭೆ ಬಗ್ಗೆ ಮಾಹಿತಿಯಿಲ್ಲ. ಉಚ್ಚಾಟನೆ ವಾಪಸ್ ಪಡೆಯುವುದು, ಕೇಳುವುದಕ್ಕೆ ಕಾರ್ಯಕರ್ತರಿಗೆ ಹಕ್ಕಿದೆ. ಪಕ್ಷದ ವಿರುದ್ದ ಯಾರೂ ಮಾತಾಡಬಾರದು. ಯತ್ನಾಳ್ ಉಚ್ಚಾಟನೆ ವಾಪಸ್ ಪಡೆಯಬೇಕು ಎಂದು ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿರುವುದು ಆಶ್ಚರ್ಯವಾಗಿದೆ. ನಮ್ಮದು ರಾಜಕೀಯ ಪಕ್ಷ, ಅವರದ್ದು ಮಠ. ಜಯಮೃತ್ಯುಂಜಯ ಸ್ವಾಮಿಜಿಗಳು ಇದರ ವಿಮರ್ಶೆ ಮಾಡಿಕೊಳ್ಳಬೇಕು'' ಎಂದರು.
ಇದನ್ನೂ ಓದಿ: ಕುಮಾರಸ್ವಾಮಿಗೆ ಹಾಲು ಒಕ್ಕೂಟ ವ್ಯವಸ್ಥೆ ಬಗ್ಗೆ ಗೊತ್ತಿಲ್ಲ, ತಮ್ಮ ಸಹೋದರನ ಬಳಿ ಮಾಹಿತಿ ಪಡೆಯಲಿ: ಡಿಕೆಶಿ