RSS ನಿಷೇಧಿಸುವ ಶಕ್ತಿ ಕಾಂಗ್ರೆಸ್ಗೆ ಇಲ್ಲ- ಬಿ ವೈ ವಿಜಯೇಂದ್ರ; ಸಂಘದ ನಿಷೇಧ ಕನಸಿನ ಮಾತು-ಯತ್ನಾಳ್
ಸಚಿವ ಪ್ರಿಯಾಂಕ್ ಖರ್ಗೆ ಆರ್ಎಸ್ಎಸ್ ಚಟುವಟಿಕೆ ನಿಷೇಧಿಸುವ ಒತ್ತಾಯವನ್ನು ಮೂರ್ಖತನದ ಪ್ರದರ್ಶನ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಟೀಕಿಸಿದ್ದಾರೆ. ಇನ್ನು, ಆರ್ಎಸ್ಎಸ್ ನಿಷೇಧ ಕನಸಿನ ಮಾತು ಎಂದು ಶಾಸಕ ಯತ್ನಾಳ್ ಸವಾಲು ಹಾಕಿದ್ದಾರೆ.

Published : October 12, 2025 at 4:35 PM IST
ಬೆಂಗಳೂರು: ಜವಾಬ್ದಾರಿಯುತ ಸ್ಥಾನದಲ್ಲಿರುವ ಪ್ರಿಯಾಂಕ್ ಖರ್ಗೆಯವರು ಆರ್ಎಸ್ಎಸ್ ಚಟುವಟಿಕೆ ನಿಷೇಧದ ಕುರಿತು ಇಷ್ಟೊಂದು ಬೇಜವಾಬ್ದಾರಿಯಿಂದ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ ಎಂದರೆ, ಇದು ಅವರ ಮೂರ್ಖತನದ ಪ್ರದರ್ಶನ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿನ್ನೆಲೆ, ಕಾರ್ಯ ಚಟುವಟಿಕೆ ಕುರಿತು ಮಾಹಿತಿ ಕೊರತೆ ಇರುವವರು ಕೇವಲ ತಮ್ಮ ಪ್ರಚಾರದ ಚಟದಿಂದ ಮಾತನಾಡುವವರು ಇಂಥ ಹೇಳಿಕೆ ಕೊಡಲು ಸಾಧ್ಯ. ಹಿಂದೆ ಎರಡ್ಮೂರು ಬಾರಿ ಇದೇ ರೀತಿ ಆರ್ಎಸ್ಎಸ್ ಅನ್ನು ಕಾಂಗ್ರೆಸ್ ಪಕ್ಷ ನಿಷೇಧಿಸಿತ್ತು. ಅದೇ ಕಾಂಗ್ರೆಸ್ ಪಕ್ಷವು ನಿಷೇಧವನ್ನು ಹಿಂದಕ್ಕೆ ಪಡೆದ ಉದಾಹರಣೆ ದೇಶದ ಮುಂದಿದೆ. ಮತ್ತೊಮ್ಮೆ ಆರ್ಎಸ್ಎಸ್ ನಿಷೇಧಿಸುವ ಶಕ್ತಿ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ ಎಂದು ತಿಳಿಸಿದರು.
ಭಾರತ- ಚೀನಾ ಯುದ್ಧದ ಸಂದರ್ಭದಲ್ಲಿ ಆರ್ಎಸ್ಎಸ್ ಚಟುವಟಿಕೆಯನ್ನು ಗಮನಿಸಿ, ಶ್ಲಾಘಿಸಿ ಅಂದಿನ ರಿಪಬ್ಲಿಕ್ ಡೇ ಪರೇಡ್‍ನಲ್ಲಿ ಆರ್ಎಸ್ಎಸ್ಗೆ ಇದೇ ಕಾಂಗ್ರೆಸ್ ಪಕ್ಷ ಅವಕಾಶ ಮಾಡಿಕೊಟ್ಟಿತ್ತು ಎಂದು ಪ್ರಿಯಾಂಕ್ ಖರ್ಗೆಯವರಿಗೆ ನೆನಪಿಸಲು ಬಯಸುತ್ತೇನೆ. ಪ್ರಿಯಾಂಕ್ ಖರ್ಗೆಯವರು ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಂತೆ ಕಾಣುತ್ತಿದೆ. ಗಾಂಧಿ ಕುಟುಂಬವನ್ನು ಓಲೈಸುವ ನಿಟ್ಟಿನಲ್ಲಿ ಈ ರೀತಿ ಪತ್ರ ಬರೆದಂತೆ ಕಾಣುತ್ತಿದೆ ಎಂದು ವಿಶ್ಲೇಷಿಸಿದರು.
ಆರ್ಎಸ್ಎಸ್ 100 ವರ್ಷ ಪೂರೈಸಿದ ಈ ಶುಭ ಘಳಿಗೆಯಲ್ಲಿ ದೇಶಾದ್ಯಂತ ಚಟುವಟಿಕೆ, ಪಥ ಸಂಚಲನ ನಡೆಯುತ್ತಿದೆ. ಇಂಥ ಸಂದರ್ಭದಲ್ಲಿ ಪ್ರಿಯಾಂಕ್ ಖರ್ಗೆಯವರು ಪತ್ರದ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೆಲ್ಲದಕ್ಕೂ ಕಾಲ ಉತ್ತರ ಕೊಡಲಿದೆ ಎಂದರು.
ಪ್ರಿಯಾಂಕ್ ಖರ್ಗೆಯವರೇ, ನಿಮ್ಮ ಜಿಲ್ಲೆ ಶೈಕ್ಷಣಿಕವಾಗಿ ಹಿಂದುಳಿದಿರುವುದು, ಗೂಂಡಾಗರ್ದಿ ನಡೆಯುತ್ತಿರುವುದು, ನಿಮ್ಮ ಜಿಲ್ಲೆಯಲ್ಲಿ ಗುತ್ತಿಗೆದಾರನ ಆತ್ಮಹತ್ಯೆ ಆಗಿದೆ, ಬೆದರಿಸುವ ತಂತ್ರ ನಡೆಯುತ್ತಿದೆ. ಯಾವ ರೀತಿ ಮರಳು ಮಾಫಿಯ ನಡೆಯುತ್ತಿದ್ದು, ನೀವು ಸಚಿವರಾಗಿ ಇವೆಲ್ಲದರ ಕಡೆ ಗಮನ ಹರಿಸಿದರೆ ನಿಮ್ಮ ಜಿಲ್ಲೆಗೂ ಹೆಚ್ಚು ಅನುಕೂಲ. ರಾಜ್ಯಕ್ಕೂ ಅನುಕೂಲ ಆಗಬಹುದು ಎಂದು ಕಿವಿಮಾತು ಹೇಳಿದರು.
ಕಲಬುರಗಿ ಜಿಲ್ಲೆ ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿದೆ. ಕಲ್ಯಾಣ ಕರ್ನಾಟಕದಲ್ಲಿ 30 ರಿಂದ 35 ಸಾವಿರ ಶಿಕ್ಷಕರ ನೇಮಕಾತಿ ಆಗಿಲ್ಲವೆಂದು ನಿಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆಯವರು ಬಹಿರಂಗವಾಗಿ ಹೇಳಿದ್ದಾರೆ. ಅದರ ಬಗ್ಗೆ ಚಿಂತಿಸಬೇಕು. ಸಚಿವರಾಗಿ ಯಾವುದನ್ನು ಗಮನಿಸಬೇಕೋ ಅದನ್ನು ಗಮನಿಸದೇ ಈ ರೀತಿ ಉಡಾಫೆಯಾಗಿ ಮಾತನಾಡುವುದು ಶೋಭೆ ತರುವುದಿಲ್ಲ ಎಂದು ತಿರುಗೇಟು ನೀಡಿದರು.
ಸರ್ಕಾರಿ ಸ್ಥಳಗಳಲ್ಲಿ ನಡೆಸುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಾಖೆಗಳನ್ನು, ಪಥಸಂಚಲನ, ಬೈಠಕ್ ಗಳನ್ನು ನಿಷೇಧಿಸಬೇಕೆಂದು ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಮುಖ್ಯ ಮಂತ್ರಿಗಳಿಗೆ ಬರೆದಿದ್ದಾರೆ. ಜಗತ್ತಿನ ಅತ್ಯಂತ ದೊಡ್ಡ ಸ್ವಯಂಸೇವಕರ ಪಡೆ ಹೊಂದಿರುವ ಆರ್.ಎಸ್.ಎಸ್. ನ ನಿಷೇಧಕ್ಕೆ ಕರೆ ಕೊಟ್ಟಿರುವುದು ಇವರ ಬೌದ್ಧಿಕ ದಾರಿದ್ರ್ಯತನ… pic.twitter.com/aT0wp6z4KS
— Basanagouda R Patil (Yatnal) (@BasanagoudaBJP) October 12, 2025
ಸಂಘದ ನಿಷೇಧ ಕನಸಿನ ಮಾತು- ಯತ್ನಾಳ್: ಬಕ್ರೀದ್ ಸೇರಿದಂತೆ ಇತರ ಹಬ್ಬಗಳಲ್ಲಿ ಆಗುವ ಪ್ರಾಣಿಬಲಿಯನ್ನು ನಿಷೇಧಿಸಲಿ. ಸಂಘದ ನಿಷೇಧ ಕನಸಿನ ಮಾತು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸವಾಲು ಹಾಕಿದ್ದಾರೆ.
ಈ ಕುರಿತಂತೆ ಎಕ್ಸ್ ಪೋಸ್ಟ್ ಮೂಲಕ ಕಿಡಿಕಾರಿರುವ ಅವರು, ಸರ್ಕಾರಿ ಸ್ಥಳಗಳಲ್ಲಿ ನಡೆಸುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಾಖೆಗಳನ್ನು, ಪಥಸಂಚಲನ, ಬೈಠಕ್ಗಳನ್ನು ನಿಷೇಧಿಸಬೇಕೆಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಜಗತ್ತಿನ ಅತ್ಯಂತ ದೊಡ್ಡ ಸ್ವಯಂಸೇವಕರ ಪಡೆ ಹೊಂದಿರುವ ಆರ್.ಎಸ್.ಎಸ್. ನ ನಿಷೇಧಕ್ಕೆ ಕರೆ ಕೊಟ್ಟಿರುವುದು ಇವರ ಬೌದ್ಧಿಕ ದಾರಿದ್ರ್ಯತನ ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಪ್ರಕೃತಿ ವಿಕೋಪ, ರೈಲು ದುರಂತ, ಕೋವಿಡ್, ಅಪಘಾತಗಳು, ಭೂಕಂಪ, ನೆರೆಯಾದಾಗ ನೊಂದವರಿಗೆ ಮೊದಲು ಆಸರೆಯಾಗುವುದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕರು. ಸೇವಾತತ್ಪರತೆ, ಸಮಾಜ ಸೇವೆ, ರಾಷ್ಟ್ರ ಪ್ರೇಮದ ಬಗ್ಗೆ ಜಾಗೃತಿ, ಶಿಸ್ತಿಗೆ ಮತ್ತೊಂದು ಹೆಸರೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಹಗಲು ರಾತ್ರಿ ಎನ್ನದೇ ನಿಸ್ವಾರ್ಥ ಸೇವೆ ನೀಡುವ ಪ್ರಪಂಚದ ಏಕೈಕ ಸಂಘಟನೆಯಾಗಿದೆ. ಮನ ಮನೆಗಳನ್ನು ಬೆಸೆದುಕೊಳ್ಳುತ್ತಿರುವ ಸಂಘ ಚಿಂತನೆ ವ್ಯಾಪಿಸಿದ ಮತ್ತು ವ್ಯಾಪಿಸುತ್ತಿರುವ ರೀತಿ ಅನನ್ಯ ಎಂದು ಯತ್ನಾಳ್ ಪ್ರಶಂಸಿಸಿದ್ದಾರೆ.
ಸಂಘವನ್ನು ನಿಷೇಧ ಮಾಡಲು ಯಾರಿಂದಲೂ ಸಾಧ್ಯವಾಗಿಲ್ಲ. ವಿರೋಧಿಗಳು ಪ್ರೀತಿಸುವ, ಗೌರವಿಸುವ ಜಗತ್ತಿನ ಏಕೈಕ ಸಂಘಟನೆಯೇ ಆರ್.ಎಸ್.ಎಸ್. ರಾಜಕೀಯ ಪ್ರೇರಿತ ಹೇಳಿಕೆಗಳನ್ನು ಕೊಡುವುದನ್ನು ಬಿಟ್ಟು ಸ್ವಕ್ಷೇತ್ರವನ್ನು ಅಭಿವೃದ್ಧಿಗೊಳಿಸಲು ಪ್ರಿಯಾಂಕ್ ಖರ್ಗೆ ಅವರು ಶ್ರಮಿಸಲಿ. ಅಷ್ಟಕ್ಕೂ, ನಿಷೇಧಗೊಳಿಸಬೇಕಾಗಿದ್ದರೆ ಕೂಡಲೇ ಎಸ್.ಡಿ.ಪಿ.ಐ ನಂತ ದೇಶ ವಿರೋಧಿ ಸಂಘಟನೆಗಳನ್ನು ನಿಷೇದ ಮಾಡಲಿ ಎಂದು ಒತ್ತಾಯಿಸಿದ್ದಾರೆ.
ಬಕ್ರೀದ್ ಸೇರಿದಂತೆ ಇತರ ಹಬ್ಬಗಳಲ್ಲಿ ಆಗುವ ಪ್ರಾಣಿಬಲಿಯನ್ನು ನಿಷೇಧಿಸಲಿ. ಆಂಗ್ಲ, ವಿಜ್ಞಾನ, ಗಣಿತ, ಸಮಾಜ ಹೇಳಿಕೊಡದೆ ದ್ವೇಷ, ಬೇರೆ ಧರ್ಮಗಳ ಬಗ್ಗೆ ತಪ್ಪು ವಿಚಾರಗಳನ್ನು ಕಲಿಸುವ ಮದರಸಗಳನ್ನು ನಿಷೇದ ಮಾಡಲಿ. ಸ್ವಾತಂತ್ರ್ಯ ಬಂದು ಏಳು ದಶಕಗಳಾದರೂ ಅತ್ಯಂತ ಹಿಂದುಳಿದ ಜಿಲ್ಲೆ ಎಂದು ಕರೆಸಿಕೊಳ್ಳುವ ಹಾಗೂ ಅವರೇ ಪ್ರತಿನಿಧಿಸುವ ಕಲ್ಬುರ್ಗಿಯನ್ನು ಮಾದರಿ ಜಿಲ್ಲೆಯನ್ನಾಗಿ ಮಾಡಲಿ. ಸಂಘದ ನಿಷೇಧ ಕನಸಿನ ಮಾತು ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಯತ್ನಾಳ್ ಹೇಳಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಸ್ಥಳಗಳಲ್ಲಿ ಆರ್ಎಸ್ಎಸ್ ಚಟುವಟಿಕೆ ನಿಷೇಧಿಸುವ ಬಗ್ಗೆ ರಾಜ್ಯ ಸರ್ಕಾರದಿಂದ ಪರಿಶೀಲನೆ
ಇದನ್ನೂ ಓದಿ: RSS ಬ್ಯಾನ್ ಮಾಡಲು ಇಂದಿರಾ ಗಾಂಧಿ ಕೈಯಲ್ಲೇ ಆಗಿಲ್ಲ: ಆರ್. ಅಶೋಕ್

