ದಾವಣಗೆರೆ: ರಸ್ತೆಗೆ ಅಡ್ಡ ಬಂದ ಶ್ವಾನವನ್ನು ತಪ್ಪಿಸಲು ಹೋಗಿ ಬೈಕ್ ಅಪಘಾತ ಸಂಭವಿಸಿ, ಯುವಕ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ನ್ಯಾಮತಿ ತಾಲೂಕಿನ ರಾಮೇಶ್ವರ ಗ್ರಾಮದ ಬಳಿ ನಡೆದಿದೆ.
ಅಪಘಾತದಲ್ಲಿ, ಬೈಕ್ ಚಲಾಯಿಸುತ್ತಿದ್ದ ಸಚಿನ್ (24) ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಯುವಕ. ತೀವ್ರ ಗಾಯಗೊಂಡಿರುವ ಹಿಂಬದಿ ಸವಾರ ಸಿರಿಯಾಜ್ (24) ಎಂಬಾತನ ಸ್ಥಿತಿಯೂ ಗಂಭೀರವಾಗಿದೆ. ರಾಮೇಶ್ವರ ಗ್ರಾಮದ ಮೂಕ ಚೌಡಮ್ಮ ದೇವಸ್ಥಾನಕ್ಕೆ ಹೋಗಿ ವಾಪಸ್ ಬರುವಾಗ ಈ ಅಪಘಾತ ಸಂಭವಿಸಿದೆ.
ಬೈಕಿನಲ್ಲಿ ಬರುವಾಗ ರಸ್ತೆಗೆ ಎದುರಾಗಿ ನಾಯಿ ಅಡ್ಡ ಬಂದಿದೆ. ನಾಯಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಯತ್ನಿಸಿದಾಗ, ನಿಯಂತ್ರಣ ಕಳೆದುಕೊಂಡು ಬೈಕ್ ಸ್ಕಿಡ್ ಆಗಿದೆ. ಘಟನೆಯಲ್ಲಿ ತೀವ್ರ ಗಾಯಗೊಂಡ ಇಬ್ಬರನ್ನೂ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಗಾಯಾಳುವಿಗೆ ಚಿಕಿತ್ಸೆ ಮುಂದುವರೆದಿದೆ. ಘಟನೆ ಬಗ್ಗೆ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರತ್ಯೇಕ ಅಪಘಾತ, ಮಾಜಿ ಸೈನಿಕ ಸಾವು: ಕರ್ತವ್ಯ ಮುಗಿಸಿಕೊಂಡು ವಾಪಸ್ ಮನೆಗೆ ತೆರಳುತ್ತಿದ್ದ ಮಾಜಿ ಸೈನಿಕನೊಬ್ಬ ಕಾರು ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ರಾಯಚೂರಿನ ಹೊರವಲಯದ ರಾಯಚೂರು - ಸಾತ್ ಮೈಲ್ ರಸ್ತೆ ಮಾರ್ಗಮಧ್ಯದಲ್ಲಿನ ಯಲ್ಲಾಲಿಂಗ ಮಠದ ಬಳಿ ನಡೆದಿದೆ. ಶ್ರೀನಿವಾಸ್ ರಾವ್ (58) ಮೃತ ಮಾಜಿ ಸೈನಿಕ ಎಂದು ಗುರುತಿಸಲಾಗಿದೆ.
ಶ್ರೀನಿವಾಸ್ ರಾವ್ ನಗರದ ಹೊರವಲಯದಲ್ಲಿರುವ ಪವರ್‌ಗ್ರೀಡ್‌ನಲ್ಲಿ ವಾಚ್ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. ರಾತ್ರಿಪಾಳಿ ಮುಗಿಸಿಕೊಂಡು ಬೆಳಗ್ಗೆ ಸೈಕಲ್ನಲ್ಲಿ ವಾಪಾಸ್ ಮನೆಗೆ ಬರುತ್ತಿದ್ದಾಗ ಅಪರಿಚಿತ ಕಾರು ಡಿಕ್ಕಿ ಹೊಡೆದಿದೆ. ತೀವ್ರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಪಶ್ಚಿಮ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಗಂಗಾವತಿ ಮೂಲದ ಶ್ರೀನಿವಾಸ್ ಅವರ ಮನೆಗೆ ಮಾಹಿತಿ ನೀಡಲಾಗಿದೆ. ಕುಟುಂಬಸ್ಥರು ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಆನೇಕಲ್: ಆಟವಾಡುತ್ತ ಚೆಂಡು ತೆಗೆಯಲು ಹೋದಾಗ ವಿದ್ಯುತ್ ಶಾಕ್: ಬಾಲಕಿ ಸಾವು