ಬೆಂಗಳೂರು: ಆರ್ಸಿಬಿ ವಿಜಯೋತ್ಸವ ವೇಳೆ ಕಾಲ್ತುಳಿತವಾಗಿ 11 ಮಂದಿ ಸಾವು ಪ್ರಕರಣ ಸಂಬಂಧ ಬಂಧಿಸಲ್ಪಟ್ಟಿದ್ದ ಆರ್ಸಿಬಿ ಹಾಗೂ ಡಿಎನ್ಎ ಸಂಸ್ಥೆಯ ನಾಲ್ವರನ್ನು ಜೂನ್ 19ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ನಗರದ 41ನೇ ಎಸಿಜೆಎಂ ನ್ಯಾಯಾಲಯಕ್ಕೆ ಬಂಧಿತ ಆರೋಪಿಗಳಾದ ಆರ್ಸಿಬಿ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ನಿಖಿಲ್ ಸೋಸಲೆ, ಸಿಬ್ಬಂದಿ ಸುಮಂತ್, ಡಿಎನ್ಎ ಸಂಸ್ಥೆಯ ಕಿರಣ್, ಸುನೀಲ್ ಮ್ಯಾಥ್ಯೂ ಅವರನ್ನ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಜೂನ್ 19ರವರೆಗೆ ನ್ಯಾಯಾಂಗ ಬಂಧನಕ್ಕೆ ವಿಧಿಸಿ ಆದೇಶ ಹೊರಡಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ಮೇರೆಗೆ ಇಂದು ಬೆಳ್ಳಂಬೆಳ್ಳಗೆ ನಾಲ್ವರು ಆರೋಪಿಗಳನ್ನ ಬಂಧಿಸಿ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ವಿಚಾರಣೆಗೊಳಪಡಿಸಿದ್ದರು. ವಿಕ್ಟರಿ ಪರೇಡ್ ಬಗ್ಗೆ ಆರ್ಸಿಬಿ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿದ್ದು ಯಾರು ? ಅದನ್ನ ಪೋಸ್ಟ್ ಮಾಡಲು ಹೇಳಿದ್ದು ಯಾರು ? ಪೊಲೀಸರ ಅನುಮತಿ ಇಲ್ಲದಿರುವ ವಿಚಾರ ನಿಮಗೆ ತಿಳಿದಿತ್ತೆ ಎಂಬುದು ಸೇರಿದಂತೆ ಇನ್ನಿತರ ಪ್ರಶ್ನೆಗಳನ್ನ ಆರೋಪಿ ನಿಖಿಲ್ ಸೋಸಲೆ ಅವರನ್ನ ಕೇಳಿರುವುದಾಗಿ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಇದನ್ನೂ ಓದಿ: ಆರ್ಸಿಬಿ, ಕೆಎಸ್ಸಿಎ ವಿರುದ್ಧ ಮತ್ತೊಂದು ಎಫ್ಐಆರ್: ಅಮಾನತು ಬೆನ್ನಲ್ಲೇ ಅಧಿಕಾರಿಗಳ ನಿಯೋಜನೆ
ಇದನ್ನೂ ಓದಿ: ದಯಾನಂದ್ ಅಮಾನತು ಆದೇಶ ರದ್ದು ಪಡಿಸುವಂತೆ ಹೆಡ್ ಕಾನ್ಸ್ಟೇಬಲ್ ಏಕಾಂಗಿ ಪ್ರತಿಭಟನೆ
ಹೈಕೋರ್ಟ್ ಮೆಟ್ಟಿಲೇರಿದ ಆರ್ಸಿಬಿ: ಇದಕ್ಕೂ ಮುನ್ನ ತಮ್ಮ ಬಂಧನ ಪ್ರಶ್ನಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಫ್ರಾಂಚೈಸಿಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ನಿಖಿಲ್ ಸೋಸಲೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿತ್ತು.
ಇಂದು ಬೆಳಗ್ಗೆ ಬಂಧಿಸಿದ್ದ ಪೊಲೀಸರು: ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಘಟನೆಯಲ್ಲಿ ಅರ್ಜಿದಾರ ನಿಖಿಲ್ ಸೋಸಲೆ ಅವರನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ನಸುಕಿನ ನಾಲ್ಕು ಗಂಟೆಯ ಸಂದರ್ಭದಲ್ಲಿ ಬಂಧಿಸಲಾಗಿತ್ತು. ಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ ಬಂಧನ ಮಾಡಲಾಗಿದೆ. ಘಟನೆ ನಡೆದಿರುವುದಕ್ಕೆ ಕಾರಣವೇನು ಎಂಬುದಕ್ಕೆ ತನಿಖೆಗೆ ಆದೇಶ ನೀಡಿದ್ದು, ಘಟನೆಗೆ ಕಾರಣ ಏನು ಎಂಬುದನ್ನು ಈವರೆಗೂ ಪತ್ತೆ ಹಚ್ಚಿಲ್ಲ. ಇದರ ನಡುವೆ ಅರ್ಜಿದಾರರನ್ನು ಬಂಧಿಸಿರುವುದು ಅಕ್ರಮ ಮತ್ತು ಕಾನೂನು ಬಾಹಿರವಾಗಿದ್ದು ನೈಸರ್ಗಿಕ ನ್ಯಾಯ ತತ್ವಕ್ಕೆ ತದ್ವಿರುದ್ಧವಾಗಿವೆ. ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ. ಆದ್ದರಿಂದ ತಕ್ಷಣ ಬಿಡುಗಡೆ ಮಾಡಬೇಕು ಎಂದು ಸೋಸಲೆ ತನ್ನ ಅರ್ಜಿಯಲ್ಲಿ ಕೋರಿದ್ದರು.
ಕೆಎಸ್ಸಿಎಗೆ ರಿಲೀಫ್: ಇನ್ನು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಪ್ರಕರಣ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿ (ಕೆಎಸ್ಸಿಎ)ಯ ಆಡಳಿತ ಸಮಿತಿ ಸದಸ್ಯರ ವಿರುದ್ಧ ಮುಂದಿನ ವಿಚಾರಣೆವರೆಗೂ ಆತುರದ ಕ್ರಮ ಬೇಡ ಎಂದು ಹೈಕೋರ್ಟ್ ಈಗಾಗಲೇ ಸೂಚನೆ ನೀಡಿದೆ.
ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆಯುತ್ತಿದ್ದ ವಿಜಯೋತ್ಸವದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 11 ಜನ ಸಾವನ್ನಪ್ಪಿ, 56 ಜನ ಗಾಯಗೊಂಡ ಘಟನೆ ಬುಧವಾರ ಸಂಭವಿಸಿದೆ.
ಇದನ್ನೂ ಓದಿ: ಬೆಂಗಳೂರು ಉಸ್ತುವಾರಿ ಸಚಿವನಾಗಿ ನಾನು ಕೆಎಸ್ಸಿಎ ಕಾರ್ಯಕ್ರಮಕ್ಕೆ ಹೋಗಿದ್ದರಲ್ಲಿ ತಪ್ಪೇನಿದೆ: ಡಿಸಿಎಂ ಡಿಕೆಶಿ