ಬೆಂಗಳೂರು: ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆಯ ವೇಳೆ ಕಾಲ್ತುಳಿತದಿಂದ ಮೃತಪಟ್ಟ ಹುಡುಗ ಭೂಮಿಕ್ ಅವರ ಬೆಂಗಳೂರಿನ ದಾಸರಹಳ್ಳಿಯಲ್ಲಿರುವ ಮನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ಹಾಗೂ ಛಲವಾದಿ ನಾರಾಯಣಸ್ವಾಮಿ ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಭೂಮಿಕ್ ಅವರ ತಂದೆ ಡಿ.ಟಿ.ಲಕ್ಷ್ಮಣ ಅವರೊಂದಿಗೆ ಅಶೋಕ ಮಾತನಾಡಿ, ಹೋದ ಜೀವವನ್ನು ಮರಳಿ ತರಲು ಸಾಧ್ಯವಿಲ್ಲ. ಆದರೆ ಇದಕ್ಕೆ ನ್ಯಾಯ ಕೊಡಿಸುತ್ತೇವೆ ಎಂದು ಭರವಸೆ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್, ಎಂಜಿನಿಯರಿಂಗ್ ಓದುತ್ತಿದ್ದ ಮಗ ಮೃತಪಟ್ಟಿದ್ದರಿಂದ ಕುಟುಂಬದವರಿಗೆ ಬಹಳ ದುಃಖವಾಗಿದೆ. ಈ ಕುಟುಂಬದವರ ಜಮೀನಿನಲ್ಲಿ 30 ಜನರು ಕೆಲಸ ಮಾಡುತ್ತಿದ್ದಾರೆ. ಇವರ ಆರ್ಥಿಕ ಸ್ಥಿತಿ ಉತ್ತಮವಾಗಿದೆ. ಆದರೆ, ಈಗ ಒಬ್ಬನೇ ಇದ್ದ ಮಗ ಮೃತಪಟ್ಟಿದ್ದು, ಆ ಜೀವವನ್ನು ಮರಳಿ ತರಲು ಸಾಧ್ಯವಿಲ್ಲ. ಆರ್‌ಸಿಬಿ ಸಂಭ್ರಮಾಚರಣೆಯನ್ನು ಎರಡು ಮೂರು ದಿನ ಮುಂದೂಡಿದ್ದರೆ ಯಾರಿಗೂ ಸಮಸ್ಯೆಯಾಗುತ್ತಿರಲಿಲ್ಲ ಎಂದು ಈ ಕುಟುಂಬ ಸೇರಿದಂತೆ ಎಲ್ಲರೂ ಹೇಳುತ್ತಿದ್ದಾರೆ. ಕ್ರಿಕೆಟ್ ಸಂಭ್ರಮಾಚರಣೆ ಜನರಿಗೆ ನೋವು ತಂದಿದೆ. ಈ ಸಾವುಗಳಿಗೆ ನ್ಯಾಯ ಸಿಗಬೇಕು ಎಂದರು.
ಇಂತಹ ಸ್ಥಿತಿ ಯಾವ ತಂದೆ ತಾಯಿಗೂ ಬರಬಾರದು ಎಂದು ಭೂಮಿಕ್ ಅವರ ತಂದೆ ಹೇಳುತ್ತಿದ್ದಾರೆ. ಮಗನ ಸಮಾಧಿಯ ಬಳಿಯೇ ತಂದೆ ದುಃಖದಿಂದ ಎರಡು ಮೂರು ದಿನ ಕಳೆದಿದ್ದಾರೆ. ಮುಂದೆ ಈ ರೀತಿಯ ಅನಾಹುತ ನಡೆಯಬಾರದು. ಕಾರ್ಯಕ್ರಮ ಮಾಡುವುದು ಬೇಡವೆಂದು ಪೊಲೀಸರು ಸೂಚನೆ ನೀಡಿದ್ದರೂ, ಅದನ್ನು ಸರ್ಕಾರ ಪಾಲಿಸಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಾಗಿದೆ. ಇದು ಸೂಕ್ತವಾದ ತನಿಖೆಗೆ ಒಳಪಡಬೇಕು. ನ್ಯಾಯ ಕೊಡಿಸಲು ನಾವೆಲ್ಲರೂ ಹೋರಾಟ ಮುಂದುವರಿಸುತ್ತೇವೆ ಎಂದು ತಿಳಿಸಿದರು.
ಸಿಎಂ ಮೇಲೆ ಕ್ರಮ ಆಗಬೇಕು: ಸಿಎಂ ದೆಹಲಿಗೆ ಹೋಗಿದ್ದಾರೆ. ದೆಹಲಿಯವರಿಗೆ ಕನ್ಪ್ಯೂಸ್ ಆಗಿದೆ. ಕ್ರಿಕೆಟ್ ಸ್ಟೇಡಿಯಂ ನಂದು ವಿಧಾನಸೌಧ ನಂದು ಎನ್ನುತ್ತಿದ್ದಾರೆ. ಅದಕ್ಕೆ ಹೈಕಮಾಂಡ್ಗೆ ಗೊಂದಲವಾಗಿದೆ. ನಾಳೆ ಸಂಪುಟ ವಿಸ್ತರಣೆ ಅಂತ ಮಾಡ್ತಾರೆ. ಈ ವಿಚಾರ ಡೈವರ್ಟ್ ಮಾಡಲು ಸಚಿವ ಸಂಪುಟ ವಿಸ್ತರಣೆ ಅಂತಾರೆ. ನಾವ್ಯಾರೂ ಕಾಂಗ್ರೆಸ್ ಕುತಂತ್ರಕ್ಕೆ ಬಲಿಯಾಗಬಾರದು. ಸಿಎಂ ಅವರ ಮೇಲೆ ಕ್ರಮ ಆಗಬೇಕು. ಇಲ್ಲದಿದ್ದರೆ ಖಾಲಿ ಕಮಾಂಡ್ ಅಂತ ಆಗುತ್ತದೆ. ಸಿಎಂ,ಡಿಸಿಎಂ ಅವರನ್ನು ಬದಲಿಸಬೇಕು. ಬದಲಿಸದಿದ್ದರೆ ಜನ ಕಾಂಗ್ರೆಸ್ ಸರ್ಕಾರವನ್ನು ಬದಲಿಸುತ್ತಾರೆ. ವೈಯಕ್ತಿಕವಾಗಿ ನಾನು ಮಾತಾಡಲ್ಲ. ನಾವು ತಪ್ಪು ಮಾಡಿಲ್ಲ ಅಂತಿದ್ರೆ ಸಿಬಿಐಗೆ ಕೊಡಿ. ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದು ಎಸ್ಐಟಿ ಮಾಡುವಂತೆ ಮನವಿ ಮಾಡಲಿ. ನ್ಯಾಯ ಕೊಡಿ. ನಮ್ಮ ಪಾತ್ರ ಇಲ್ಲ ಎಂಬ ಧೈರ್ಯ ಇದ್ರೆ ಪತ್ರ ಬರೆಯಲಿ. ನಿಮಿಷಕ್ಕೂ ತನಿಖೆ ಉಸರವಳ್ಳಿಯಂತೆ ಬದಲಾಗುತ್ತಿದೆ. ರಾಜ್ಯ ಸರ್ಕಾರದ ವಿರುದ್ದ ಸುಮೋಟೊ ತೆಗೆದುಕೊಂಡಿದೆ ಅಂದ್ರೆ ಅದು ಸರ್ಕಾರಕ್ಕೆ ಅವಮಾನ. ಸರ್ಕಾರದ್ದೇ ತಪ್ಪು ಅಂತ ಸತ್ತವರ ಮನೆಯವರು ಹೇಳ್ತಿದ್ದಾರೆ ಎಂದು ಅಶೋಕ್ ವಾಗ್ದಾಳಿ ನಡೆಸಿದರು.
ಆಡಿಯೋ ಪ್ಲೇ ಮಾಡಿದ ಅಶೋಕ್: ಡಿಪಿಎಆರ್ ಕಾರ್ಯದರ್ಶಿಯವರದ್ದು ಎನ್ನಲಾದ ಆಡಿಯೋವೊಂದನ್ನು ಇದೇ ವೇಳೆ ಆರ್.ಅಶೋಕ್ ಪ್ಲೇ ಮಾಡಿದರು. ಸಿಎಂ ಅನುಮತಿ ಮೇರೆಗೆ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ. ಸಣ್ಣ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದೇವೆ ಎಂದಿರೋ ಆಡಿಯೋ ಬಿಡುಗಡೆ ಮಾಡಿದರು. ಈ ಆಡಿಯೋದಲ್ಲಿ ಸ್ಪಷ್ಟವಾಗಿ ಸಿಎಂ ಅನುಮತಿ ನೀಡಿದ್ದಾರೆ ಎಂದು ಹೇಳಿದ್ದಾರೆ ಅಂತ ಆರೋಪಿಸಿದರು.
ಇನ್ನೂ ಮೂವರು ಮೃತರಾಗಿದ್ದು, ಆದರೆ ಅದು ಹೊರಬಂದಿಲ್ಲ: ಇದೇ ವೇಳೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಸರ್ಕಾರ ವಿಫಲವಾಗಿದೆ. ತಮ್ಮ ತಪ್ಪು ಮುಚ್ಚಿಟ್ಟುಕೊಳ್ಳಲು DNA, KSCA ಅವರ ಮೇಲೆ ಹಾಕಿದ್ರು. ಗೋಂವಿದರಾಜು ಅವ್ರಿಂದಲೇ ಪ್ರಾರಂಭವಾಗಿದ್ದು ಈ ಅನಿಷ್ಟ ವ್ಯವಸ್ಥೆ. ಸಿಎಂಗೆ ಎಲ್ಲವೂ ಗೊತ್ತಿತ್ತು. ಡಿ.ಕೆ.ಶಿವಕುಮಾರ್ಗೆ ಎಷ್ಟು ವಿಷ್ಯ ಗೊತ್ತಿತ್ತೋ ಗೊತ್ತಿಲ್ಲ. ನನ್ನನ್ನು ದೂರ ಇಟ್ಟು ಈ ಕಾರ್ಯಕ್ರಮ ಮಾಡ್ತಾರೆ ಅಂತ ಗೊತ್ತಾಗಿ HAL ಏರ್ಪೋರ್ಟ್ಗೆ ಹೋದ್ರು. ಇವರಿಬ್ಬರ ಕ್ರೆಡಿಟ್ ವಾರ್ನಲ್ಲಿ 11 ಜನರ ಬಲಿಯಾಗಿದೆ. ಇನ್ನೂ ಇಬ್ಬರು ಮೂವರು ಮೃತರಾಗಿದ್ದಾರೆ ಅನ್ನೋ ಮಾಹಿತಿ ಬಂದಿದೆ. ಆದ್ರೆ ಅದು ಹೊರ ಬಂದಿಲ್ಲ ಎಂದು ತಿಳಿಸಿದರು.
ಹೋಂ ಮಿನಿಸ್ಟರ್ ಎಲ್ಲಿದ್ದಾರೆ?. ಗೃಹ ಸಚಿವ್ರೇ ಇರಲಿಲ್ಲ. ರಾಜ್ಯಪಾಲರನ್ನು ಕರೆದಿದ್ರಿ. ರಾಜ್ಯಪಾಲರನ್ನು ಅರ್ಧಗಂಟೆ ಮುಂಚೆ ತಂದು ಕೂರಿಸಿದ್ದಾರೆ. 20 ಜನರ ಮೇಲೆ ವೇದಿಕೆ ಮೇಲೆ ಇರಬಾರದು ಅನ್ನೋ ಪ್ರೊಟೋಕಾಲ್ ಇರುತ್ತದೆ. ಆದ್ರೆ ಆ ವೇದಿಕೆ ಹಾಗೆ ಇತ್ತಾ? ಸಚಿವ ಜಮೀರ್ ಮಗ ಇದ್ದ. ಸಿದ್ದರಾಮಯ್ಯ ಮೊಮ್ಮಗ ಅಲ್ಲೇ ಇದ್ದ. ರಾಮಲಿಂಗಾರೆಡ್ಡಿ ಮಗಳು ಕೂಡ ಇದ್ರು. ಗವರ್ನರ್ನ ವೇದಿಕೆ ಮೇಲೆ ಕೂರಿಸಿಕೊಂಡು ಮೈಕ್ನಲ್ಲಿ ಏನೇನೋ ಮಾತಾಡುತ್ತಿದ್ದಾರೆ. ಸಿಎಂ, ಡಿಸಿಎಂ ರಾಜೀನಾಮೆ ನೀಡಲೇಬೇಕು. ಇದರ ಅಂತ್ಯ ನೋಡದೇ ಬಿಡಲ್ಲ ಎಂದರು.
ಕಪ್ ತೊಗೊಂಡು ಪ್ರಾಣ ತೊಗೊಂಡ್ರಲ್ಲ: ಇದೇ ವೇಳೆ ಮಾತನಾಡಿದ ಭೂಮಿಕ್ ತಂದೆ ಲಕ್ಷಣ್, ಬಿಜೆಪಿ ನಾಯಕರು ಮಾನವೀಯತೆ ದೃಷ್ಟಿಯಿಂದ ಸಾಂತ್ವನ ಹೇಳಲು ಬಂದಿದ್ದಾರೆ. ಇವರ ಸಹಾಯ ಮರೆಯೋಕೆ ಆಗಲ್ಲ. ಅಂತ್ಯಸಂಸ್ಕಾರದ ವೇಳೆಯಲ್ಲೂ ಸಹಾಯ ಮಾಡಿದ್ದಾರೆ. ನನ್ನಂತೆ 11 ತಂದೆ-ತಾಯಿಯರಿಗೆ ಸ್ಪಂದಿಸಿದ್ದಾರೆ. ಎಲ್ಲಾ ಸರ್ಕಾರದ ಕೈಯಲ್ಲಿತ್ತು. ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಬೇಕಿತ್ತು ಎಂದು ಬೇಸರ ವ್ಯಕ್ತಪಡಿಸಿದರು.
ಎರಡು ದಿನ ಬಿಟ್ಟು ಸಂಭ್ರಮಾಚರಣೆ ಮಾಡಿದ್ರೆ 11 ಜೀವಗಳು ಉಳಿಯುತ್ತಿತ್ತು. ಗೆದ್ದ ರಾತ್ರಿ ರಸ್ತೆಗಳಲ್ಲಿ ಸೆಲೆಬ್ರೇಷನ್ ಹೇಗೆ ಇತ್ತು ಗೊತ್ತಲ್ಲ. ಕಪ್ ತೊಗೊಂಡು ಪ್ರಾಣ ತೊಗೊಂಡ್ರಲ್ಲ. ಅವರು ಕೊಟ್ಟ ಪರಿಹಾರ ಜೀವನ ಪೂರ್ತಿ ಬರುತ್ತಾ?. ನಮ್ಮ ಮಗ ಇದ್ರೆ ನಮ್ಮನ್ನು ನೋಡ್ಕೋತಿದ್ದ ಎಂದು ಅಳಲು ತೋಡಿಕೊಂಡರು.
ಇದನ್ನೂ ಓದಿ: ಚಿನ್ನಸ್ವಾಮಿಯಿಂದ ಮೂರು ಏಕದಿನ ಪಂದ್ಯ ರಾಜ್‌ಕೋಟ್‌ಗೆ ಶಿಫ್ಟ್! ವಿಶ್ವಕಪ್ ಆತಿಥ್ಯ ಸಹ ಕೈತಪ್ಪುವ ಆತಂಕ! ಏನಾಯ್ತು?
ಇದನ್ನೂ ಓದಿ: ಬೆಂಗಳೂರು ಕಾಲ್ತುಳಿತ: ಸಿ.ಎ ಪರೀಕ್ಷೆ ಚಿನ್ನದ ಪದಕ ವಿಜೇತೆಯ ದುರಂತ ಅಂತ್ಯ; ಕುಟುಂಬದಲ್ಲಿ ಶೋಕಸಾಗರ