ಬೆಂಗಳೂರು: ಭಾನುವಾರ ರಾತ್ರಿ ಸುರಿದ ಪೂರ್ವ ಮುಂಗಾರು ಮಳೆಗೆ ಉದ್ಯಾನ ನಗರಿ ಅಕ್ಷರಶ: ನಲುಗಿದೆ. ವರುಣಾರ್ಭಟದಿಂದ ನಾಗರಿಕರು ಇದೇನಾ ಬ್ರ್ಯಾಂಡ್ ಬೆಂಗಳೂರು, ಗ್ರೇಟರ್ ಬೆಂಗಳೂರು ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರೇಟರ್ ಬೆಂಗಳೂರು ಎಂದು ಬದಲಾಗಿರುವ ರಾಜಧಾನಿಯಲ್ಲಿ ಪ್ರತೀ ಬಾರಿ ಮಳೆ ಸುರಿದಾಗಲೆಲ್ಲ ಮನೆಗಳಿಗೆ ನೀರು ನುಗ್ಗುವುದು, ರಸ್ತೆಯಲ್ಲಿ ನೀರು ನಿಲ್ಲುವುದು ಸಾಮಾನ್ಯ ಎಂಬಂತಾಗಿದೆ. ಮಳೆ ಹಾನಿ ಪ್ರದೇಶಗಳಿಗೆ ಎಡತಾಕುವ ಜನಪ್ರತಿನಿಧಿಗಳು ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆಗಳನ್ನು ನೀಡುತ್ತಿದ್ಧಾರೆ. ಗೃಹ ಸಚಿವ ಜಿ.ಪರಮೇಶ್ವರ್ ಅವರು ನಗರದಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಪ್ರಗತಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಸರಿಹೋಗುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹೊರಮಾವು ವಾರ್ಡ್ ನ ಸಾಯಿ ಲೇಔಟ್ ಬಡಾವಣೆಯ ನಿವಾಸಿಗಳು ಮಳೆಯಿಂದ ಸಂಕಷ್ಟ ಅನುಭವಿಸಿದರು. ಇಲ್ಲಿ ಮಳೆ ನೀರು ಮನೆಗಳಿಗೆ ನುಗ್ಗುತ್ತದೆ ಎಂದು ಗೊತ್ತಿದ್ದರೂ ಬಿಬಿಎಂಪಿ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ಮುಂದುವರೆಸಿದ್ದಾರೆ ಎಂದು ದೂರಿದ್ದಾರೆ. ಇಲ್ಲಿನ ನಿವಾಸಿಗಳು ಮನೆಯಿಂದ ಹೊರಬರಲಾಗದೆ ಪರಿತಪಿಸಿದರು. ಹಾಲು, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳು ಸಿಗದೆ ತೊಂದರೆಗೊಳಗಾದರು.
ಜಲಾವೃತ ಪ್ರದೇಶದ ನಿವಾಸಿಗಳನ್ನು ಬೋಟ್ ಮೂಲಕ ಹೊರತರಲಾಯಿತು. ಕುಡಿಯುವ ನೀರು, ಊಟ ಹಾಗೂ ತಾತ್ಕಾಲಿಕ ವಸತಿ ವ್ಯವಸ್ಥೆಯನ್ನು ಬಿಬಿಎಂಪಿ ಅಧಿಕಾರಿಗಳು ಮಾಡಿದರು.
ಮಳೆಯಿಂದಾಗಿ ತಗ್ಗುಪ್ರದೇಶಗಳಲ್ಲಿ ನೀರು ನುಗ್ಗಿ, ಮನೆಯಲ್ಲಿದ್ದ ಪೀಠೋಪಕರಣ ಹಾಗೂ ಗೃಹೋಪಯೋಗಿ ವಸ್ತುಗಳು ಹಾನಿಗೊಳಗಾಗಿವೆ. ಅಂಗಡಿಗಳಿಗೂ ನೀರು ಹರಿದಿದ್ದರಿಂದ ವಸ್ತುಗಳೆಲ್ಲವೂ ಚೆಲ್ಲಾಪಿಲ್ಲಿಯಾಗಿದೆ. ಸಿಲ್ಕ್ ಬೋರ್ಡ್ ಜಂಕ್ಷನ್, ಕೆಂಗೇರಿ ರಸ್ತೆ, ಯಲಹಂಕ ಸೇರಿದಂತೆ ಹಲವು ಪ್ರದೇಶಗಳ ರಸ್ತೆಗಳಲ್ಲಿ ನೀರು ಹರಿಯಲು ಜಾಗವಿಲ್ಲದೆ, ಕೆರೆಯಂತಾಗಿತ್ತು. ಬೋಟ್ ಬೆಂಗಳೂರು, ವಾಟರ್ ಬೆಂಗಳೂರು ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ. ಇದೇನಾ ನಿಮ್ಮ ಬ್ರ್ಯಾಂಡ್ ಬೆಂಗಳೂರು ಎಂದು ಪ್ರಶ್ನಿಸಿದ್ದಾರೆ. ಐಟಿ ಹಬ್ ಆಗಿರುವ ಬೆಂಗಳೂರು ಒಂದೇ ಮಳೆಗೆ ವಾಟರ್ ವರ್ಲ್ಡ್ ಆಗಿದೆ. ಬೆಂಗಳೂರು ನಗರದ ಅಭಿವೃದ್ಧಿಗೆ ಈ ಬಾರಿ ಬಜೆಟ್ ನಲ್ಲಿ 19,930 ಕೋಟಿ ರೂ. ಮೀಸಲಿಟ್ಟರೂ, ವೈಜ್ಞಾನಿಕ ಯೋಜನೆ ರೂಪಿಸದಿರುವುದು ಹಾಗೂ ಮೌಲಸೌಕರ್ಯ ಒತ್ತು ನೀಡದ ಕಾರಣ ಪ್ರತಿ ಬಾರಿ ಮಳೆ ಬಂದಾಗಲೆಲ್ಲ ಸಮಸ್ಯೆ ಎದುರಾಗುತ್ತಿದೆ. ಇದರಿಂದ ಹೊರಬರುವುದು ಯಾವಾಗ ಎಂದು ಸುನಿಲ್ ಗರ್ಗ್ ಎಂಬವರು ಎಕ್ಸ್ ಖಾತೆಯಲ್ಲಿ ಪ್ರಶ್ನಿಸಿದ್ದಾರೆ.
ಐಟಿ, ಬಿಟಿ ಕಂಪನಿಗಳ ನೌಕರರಿಗೆ ವರ್ಕ್ ಫ್ರಮ್ ಹೋಮ್: ನಗರದಲ್ಲಿ ಮುಂದಿನ 24 ಗಂಟೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಐಟಿ-ಬಿಟಿ ಕಂಪೆನಿಗಳು ತಮ್ಮ ನೌಕರರಿಗೆ ಸಾಧ್ಯವಾದರೆ ಕಚೇರಿ ಬನ್ನಿ, ಇಲ್ಲದಿದ್ದರೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿವೆ.
ವೈಟ್ ಫೀಲ್ಡ್, ಬೆಳ್ಳಂದೂರು, ಮಾನ್ಯತಾ ಟೆಕ್ ಪಾರ್ಕ್, ಐಟಿಪಿಎಲ್ ರಸ್ತೆ ಸೇರಿದಂತೆ ವಿವಿಧ ಭಾಗದಲ್ಲಿರುವ ಕಂಪನಿಗಳ ಸುತ್ತಮುತ್ತ ಪ್ರದೇಶಗಳು ಜಲಾವೃತವಾಗಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಮಳೆ ಅಬ್ಬರ: ಏರ್ಪೋರ್ಟ್ ರಸ್ತೆ ಸೇರಿ ಹೆಬ್ಬಾಳದ ಸುತ್ತಮುತ್ತ ಟ್ರಾಫಿಕ್ ಕಿರಿಕಿರಿ - BENGALURU TRAFFIC