ಬೆಂಗಳೂರು: ನಿವೃತ್ತ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಹಾಗೂ ಬೆಂಗಳೂರು ನಗರದ ಮೊದಲ ಪೊಲೀಸ್ ಕಮಿಷನರ್ ಆಗಿದ್ದ ನಿವೃತ್ತ ಐಪಿಎಸ್ ಅಧಿಕಾರಿ ಬಿ.ಎನ್.ಗರುಡಾಚಾರ್ ಅವರು ವಯೋಸಹಜ ಕಾರಣದಿಂದ ಕೊನೆಯುಸಿರೆಳೆದಿದ್ದಾರೆ.
96 ವರ್ಷವಾಗಿದ್ದ ಗರುಡಾಚಾರ್ ಅವರು ಬಸವನಗುಡಿಯ ಸ್ವಗೃಹದಲ್ಲಿ ಇಂದು ನಸುಕಿನ ಜಾವ 3 ಗಂಟೆ ಸುಮಾರಿಗೆ ಇಹಲೋಕ ತ್ಯಜಿಸಿದರು. ನಾಳೆ ಸಂಜೆ 4 ಗಂಟೆ ಸುಮಾರಿಗೆ ವಿಲ್ಸನ್ ಗಾರ್ಡನ್ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ನೇರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಕಂಡ ದಕ್ಷ ಮತ್ತು ಪ್ರಾಮಾಣಿಕ ನಿವೃತ್ತ ಪೊಲೀಸ್ ಮಹಾನಿರ್ದೇಶಕರು ಹಾಗೂ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಉದಯ್ ಗರುಡಾಚಾರ್ ರವರ ತಂದೆ ಶ್ರೀ ಬಿ.ಎನ್ ಗರುಡಾಚಾರ್ ರವರ ನಿಧನಕ್ಕೆ ಸಂತಾಪ ಕೋರುವೆ.
— Vijayendra Yediyurappa (@BYVijayendra) March 28, 2025
ಅವರ ಸೇವಾ ಅವಧಿಯಲ್ಲಿ ಪೊಲೀಸ್ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆಗಳನ್ನು ತಂದು ಕಾನೂನು ಸುವ್ಯವಸ್ಥೆ… pic.twitter.com/scvs4H3M6N
ಚಿಕ್ಕಪೇಟೆ ವಿಧಾನಸಭಾಕ್ಷೇತ್ರದ ಬಿಜೆಪಿ ಶಾಸಕ ಉದಯ್ ಗರುಡಾಚಾರ್ ಅವರ ತಂದೆಯಾಗಿರುವ ಬಿ.ಎನ್.ಗರುಡಾಚಾರ್ ಅವರು ಬೆಂಗಳೂರು ನಗರ ಮೊದಲ ಪೊಲೀಸ್ ಕಮಿಷನರ್. ಸಿ.ಚಾಂಡಿ ಅವರ ಕಾಲದಲ್ಲಿ ಬೆಂಗಳೂರು ಸಂಚಾರ ವಿಭಾಗದ ಡಿಸಿಪಿ ಆಗಿದ್ದ ಇವರು, ಎನ್.ಆರ್ ಜಂಕ್ಷನ್ಲ್ಲಿ 1963ರಲ್ಲಿ ಸಂಚಾರ ದಟ್ಟಣೆ ಹೆಚ್ಚಿದ್ದ ಕಾರಣಕ್ಕೆ ಸಿಗ್ನಲ್ ಅಳವಡಿಸಿದ್ದರು. ಇದು ಬೆಂಗಳೂರಿನ ಮೊದಲ ಟ್ರಾಫಿಕ್ ಸಿಗ್ನಲ್ ಆಗಿದೆ. ಬಿ.ಎನ್.ಗರುಡಾಚಾರ್ ಅವರು ವಿವಿಧ ಜಿಲ್ಲೆಗಳಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ, ಬೆಂಗಳೂರು ಮಹಾನಗರ ಡಿಸಿಪಿ, ಬೆಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ಸೇವೆ ಸಲ್ಲಿಸಿದ್ದರು. ನಂತರ ಡಿಜಿ - ಐಜಿಪಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ, ಬಿಂಡಿಗೇನವಿಲೆ ಗ್ರಾಮ ಮೂಲದವರಾದ ಬಿ.ಎನ್.ಗರುಡಾಚಾರ್ ಅವರು ತಮ್ಮ ಶಿಕ್ಷಣವನ್ನು ಪೂರೈಸಿ, ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆಯ ಉನ್ನತ ಶ್ರೇಣಿಯ ಅಧಿಕಾರಿಯಾಗಿ ನೇಮಕಗೊಂಡು, ವಿವಿಧ ಜಿಲ್ಲೆಗಳಲ್ಲಿ ಪೊಲೀಸ್ ವರಿಷ್ಠ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ, ನಂತರ ಬೆಂಗಳೂರು ಜಿಲ್ಲೆಯ ಎಸ್ಪಿ ಹಾಗೂ ಬೆಂಗಳೂರು ನಗರದ ಡಿಸಿಪಿಯಾಗಿ (8 ವರ್ಷಗಳು) ಮತ್ತು ಪೊಲೀಸ್ ಕಮಿಷನರ್ ಆಗಿ (4 ವರ್ಷ 2 ತಿಂಗಳು), ಪೊಲೀಸ್ ಡಿಜಿ-ಐಜಿಪಿ ಯಾಗಿ (3 ವರ್ಷ 8 ತಿಂಗಳು) ಸೇವೆ ಸಲ್ಲಿಸಿದ್ದರು.
ಇವರ ಕಾರ್ಯದಕ್ಷತೆ ಮೆಚ್ಚಿ ಸರ್ಕಾರವು ಕೆಎಟಿಯ ಸದಸ್ಯರಾಗಿ ಓರ್ವ ಐಪಿಎಸ್ ಅಧಿಕಾರಿಯನ್ನು ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ನೇಮಕ ಮಾಡಿತ್ತು. ಪೊಲೀಸ್ ಇಲಾಖೆಯಲ್ಲಿ ಸುದೀರ್ಘವಾಗಿ ಸೇವೆ ಸಲ್ಲಿಸಿದ ಇವರ ದಕ್ಷತೆ ಮತ್ತು ಪ್ರಾಮಾಣಿಕತೆಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ವಿವಿಧ ಪುರಸ್ಕಾರಗಳನ್ನು ನೀಡಿ ಗೌರವಿಸಿದೆ.
ವಿಜಯೇಂದ್ರ ಸಂತಾಪ: ಚಿಕ್ಕಪೇಟೆ ಬಿಜೆಪಿ ಶಾಸಕ ಉದಯ್ ಬಿ ಗರುಡಾಚಾರ್ ಅವರ ತಂದೆ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಬಿ.ಎನ್.ಗರುಡಾಚಾರ್ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಕ್ಕೆ, ಬಂಧುಮಿತ್ರರು ಮತ್ತು ಅಭಿಮಾನಿಗಳಿಗೆ ಅಗಲುವಿಕೆಯ ನೋವು ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ. ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸಿದ್ದಾರೆ.
ಇದನ್ನೂ ಓದಿ: ನಗ್ನ ಚಿತ್ರಗಳಿವೆ ಎಂದು ಸೈಬರ್ ವಂಚಕರಿಂದ ಬೆದರಿಕೆ: ಬೆಳಗಾವಿಯಲ್ಲಿ ವೃದ್ಧ ದಂಪತಿ ಆತ್ಮಹತ್ಯೆ - ELDER COUPLE DIED