ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2 'ಸ್ಕೈಟ್ರಾಕ್ಸ್ 5 ಸ್ಟಾರ್' ಮಾನ್ಯತೆ ಪಡೆದಿದ್ದು, ಈ ಗೌರವ ಪಡೆದ ಭಾರತದ ಮೊದಲ ಟರ್ಮಿನಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಜಾಗತಿಕವಾಗಿ ಗೌರವಿಸಲ್ಪಡುವ ಸ್ಕೈಟ್ರಾಕ್ಸ್ ಮಾನದಂಡಗಳ ಆಧಾರದ ಮೇಲೆ ಈ ಮಾನ್ಯತೆಯನ್ನು ನೀಡಲಾಗಿದೆ. ಜೊತೆಗೆ, ಭಾರತ ಮತ್ತು ದಕ್ಷಿಣ ಏಷ್ಯಾದ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ ಎಂಬ ಹಿರಿಮೆಯನ್ನೂ ಸತತ ಎರಡನೇ ಬಾರಿ ಮುಡಿಗೇರಿಸಿಕೊಳ್ಳುವ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಪ್ರಮುಖ ಜಾಗತಿಕ ವಿಮಾನಯಾನ ಕೇಂದ್ರವಾಗಿ ಹೊರಹೊಮ್ಮಿದೆ.

ಸ್ಕೈಟ್ರಾಕ್ಸ್ ವಲ್ಡ್ ಏರ್‌ಪೋರ್ಟ್ ಅವಾರ್ಡ್, ವಿಮಾನ ನಿಲ್ದಾಣಗಳ ಶ್ರೇಷ್ಠತೆಯ ಮಾನದಂಡವೆಂದು ಜಾಗತಿಕವಾಗಿ ಹೆಸರುವಾಸಿಯಾಗಿದೆ. ಪ್ರಯಾಣಿಕರ ಅನುಭವ ಹೆಚ್ಚಿಸುವಲ್ಲಿ ಉತ್ತಮ ಸಾಧನೆ ಮಾಡಿದ ವಿಮಾನ ನಿಲ್ದಾಣಗಳನ್ನು ಗುರುತಿಸುತ್ತದೆ. ಟರ್ಮಿನಲ್ ವಿನ್ಯಾಸ, ಸ್ವಚ್ಛತೆ, ಭದ್ರತೆ, ಡಿಜಿಟಲ್ ಏಕೀಕರಣ, ಆತಿಥ್ಯ, ಒಳಗೊಳ್ಳುವಿಕೆ ಮತ್ತು ಸುಸ್ಥಿರತೆ ಸೇರಿದಂತೆ 30ಕ್ಕೂ ಹೆಚ್ಚು ವಿಭಾಗಗಳಲ್ಲಿ 800ಕ್ಕೂ ಹೆಚ್ಚು ಪ್ರಯಾಣಿಕರ ಅಭಿಪ್ರಾಯ, ಲೆಕ್ಕಪರಿಶೋಧನೆಯ ನಂತರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ಗೆ 5 ಸ್ಟಾರ್ ಮಾನ್ಯತೆ ನೀಡಲಾಗಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2 ಪ್ರಯಾಣಿಕರ ಪ್ರಯಾಣದ ಅನುಭವವನ್ನು ಅತ್ಯುತ್ತಮಗೊಳಿಸುವತ್ತ ಸತತ ಪ್ರಯತ್ನ ನಡೆಸುತ್ತಿದೆ. ಸೇವಾ ದಕ್ಷತೆ ಮತ್ತು ಒದಗಿಸುವ ಸೌಕರ್ಯಗಳ ನಡುವೆ ಸಮತೋಲನ ಕಾಯ್ದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: 2ನೇ ಏರ್ಪೋರ್ಟ್: ಎಎಐ ವರದಿ ಬಳಿಕ ಪರಿಣತ ಸಂಸ್ಥೆಗಳಿಂದ ಅಧ್ಯಯನ - ಸಚಿವ ಎಂ.ಬಿ.ಪಾಟೀಲ್