ಬೆಂಗಳೂರು: ನ್ಯಾಯಾಲಯದ ಮಧ್ಯಂತರ ಆದೇಶದ ಹೊರತಾಗಿಯೂ ಬೆಳ್ತಂಗಡಿ ವಿದ್ಯಾರ್ಥಿನಿ ಅತ್ಯಾಚಾರ ಮತ್ತು ಕೊಲೆ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ದೇವಸ್ಥಾನ, ಅದರ ಮುಖ್ಯಸ್ಥರು ಹಾಗೂ ಕುಟುಂಬ ಸದಸ್ಯರ ವಿರುದ್ಧ ಮಾನಹಾನಿ ವಿಡಿಯೋ ಪ್ರಸಾರ ಮಾಡಿದ ಆರೋಪದ ಮೇಲೆ ಯೂಟ್ಯೂಬರ್ ಎಂ.ಡಿ.ಸಮೀರ್ ಅವರಿಂದ 10 ಕೋಟಿ ರೂ.ಗಳ ಪರಿಹಾರ ಕೊಡಿಸಲು ಕೋರಿ ಇಂದು ಪ್ರಕರಣ ದಾಖಲಾಗಿದೆ.
ಡಿ.ನಿಶ್ಚಲ್ ಮತ್ತು ಡಿ.ಹರ್ಷೇಂದ್ರ ಕುಮಾರ್ ಅವರು ಸಲ್ಲಿಸಿರುವ ಮೂಲ ದಾವೆ ವಿಚಾರಣೆ ನಡೆಸಿದ ನಗರದ 4ನೇ ಹೆಚ್ಚುವರಿ ಸಿಟಿ ಸಿವಿಲ್ ಹಾಗೂ ಸೆಷನ್ಸ್ ಕೋರ್ಟ್ ನ್ಯಾಯಾಧೀಶರು, ಯೂಟ್ಯೂಬರ್ ಎಂ.ಡಿ.ಸಮೀರ್, ದೂತ ಯೂಟ್ಯೂಬ್ ಚಾನೆಲ್ ಗೆ ನೋಟಿಸ್ ಜಾರಿ ಮಾಡಿ ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿದ್ದಾರೆ. ಅಲ್ಲದೆ, ವಿವಾದಿತ ವಿಡಿಯೊವನ್ನು ಯೂಟ್ಯೂಬ್ ಚಾನೆಲ್ ನಿಂದ ತೆಗೆದು ಹಾಕುವಂತೆ ತಿಳಿಸಿ ವಿಚಾರಣೆಯನ್ನು ಜೂ.9ಕ್ಕೆ ಮುಂದೂಡಿದ್ದಾರೆ.
ಜತೆಗೆ, ದಾವೆದಾರರಿಗೆ ಸರಿಪಡಿಸಲಾಗದ ಹಾನಿ ಉಂಟಾಗುವುದನ್ನು ತಪ್ಪಿಸುವ ದೃಷ್ಟಿಯಿಂದ ತುರ್ತಾಗಿ ಮಧ್ಯಂತರ ಪರಿಹಾರ ಆದೇಶ ಮಾಡುವ ಅಗತ್ಯವಿದೆ ಎಂದು ನ್ಯಾಯಾಲಯ ತೀರ್ಮಾನಿಸಿ, ವಿಡಿಯೋ ತೆಗೆದುಹಾಕಲು ಸಮೀರ್ ಗೆ ಸೂಚನೆ ನೀಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ತಮ್ಮ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ದೇವಸ್ಥಾನ, ಅದರ ಮುಖ್ಯಸ್ಥರು ಮತ್ತು ಕುಟುಂಬ ಸದಸ್ಯರ ಘನತೆಗೆ ಹಾನಿಯಾಗುವಂತೆ ದೂತ ಯೂಟ್ಯೂಬ್ ಚಾನೆಲ್ ನಲ್ಲಿ ಧರ್ಮಸ್ಥಳ ವಿಲೇಜ್ ಹಾರರ್ ಪಾರ್ಟ್-2/ಸಾಕ್ಷಿ ನಾಶ ಎಂಬುದಾಗಿ ವಿಡಿಯೋ ಅಪ್ಲೋಡ್ ಮಾಡಲಾಗಿದೆ. ಈ ವಿಡಿಯೋಗಳನ್ನು ಡಿಲೀಟ್ ಮಾಡಲು 2025ರ ಮಾ. 6ರಂದೇ ನ್ಯಾಯಾಲಯ ಆದೇಶಿಸಿದೆ. ಈ ಆದೇಶ ಉಲ್ಲಂಘಿಸಿ ವಿಡಿಯೋಗಳನ್ನು ಪುನಃ ಅಪ್ಲೋಡ್ ಮಾಡಿ, ಮಾನನಷ್ಟ ಉಂಟು ಮಾಡಲಾಗಿದೆ. ಇದರಿಂದ 10 ಕೋಟಿ ರೂ. ನಷ್ಟ ಪರಿಹಾರ ಪಾವತಿಸಲು ಎಂ.ಡಿ.ಸಮೀರ್ ಗೆ ಆದೇಶಿಸಬೇಕು. ಮಧ್ಯಂತರ ಪರಿಹಾರವಾಗಿ ವಿವಾದಿತ ವಿಡಿಯೋವನ್ನು ದೂತ ಯೂಟ್ಯೂಬ್ ಚಾನೆಲ್ ನಿಂದ ತೆಗೆದುಹಾಕಲು ಸೂಚನೆ ನೀಡಬೇಕು ಎಂದು ಕೋರಿದ್ದರು.
ಇದನ್ನೂ ಓದಿ: ಬೆಳ್ತಂಗಡಿ ವಿದ್ಯಾರ್ಥಿನಿ ಕೊಲೆ ಕುರಿತ ಯೂಟ್ಯೂಬ್ ವಿಡಿಯೋ ತೆಗೆಯಲು ಕೋರ್ಟ್ ಆದೇಶ - COURT ORDERS TO REMOVE VIDEO