ಬೆಳಗಾವಿ: ಬೆಳಗಾವಿ ಹಾಲು ಒಕ್ಕೂಟಕ್ಕೆ ಪ್ರಸಕ್ತ ವರ್ಷ ದಾಖಲೆಯ ಪ್ರಮಾಣದಲ್ಲಿ 13.26 ಕೋಟಿ ರೂ. ಲಾಭ ಆಗಿದೆ. ಈ ಮೂಲಕ ಉತ್ತರ ಕರ್ನಾಟಕದಲ್ಲೇ ನಮ್ಮ ಒಕ್ಕೂಟ ನಂ.1 ಆಗಿ ಹೊರಹೊಮ್ಮಿದೆ ಎಂದು ಬೆಳಗಾವಿ ಹಾಲು ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಬೆಳಗಾವಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಳಗಾವಿ ಹಾಲು ಒಕ್ಕೂಟದ ಅಧ್ಯಕ್ಷನಾಗಿ ಒಂದು ವರ್ಷ ಪೂರೈಸಿದ್ದೇನೆ. 2024-25ನೇ ಸಾಲಿನಲ್ಲಿ 399.50 ಕೋಟಿ ರೂ. ವಹಿವಾಟು ಆಗಿದೆ. ಕಳೆದ ವರ್ಷ 320.83 ಕೋಟಿ ರೂ. ವಹಿವಾಟು ಆಗಿತ್ತು. ಶೇ.24ರಷ್ಟು ಹೆಚ್ಚುವರಿ ಪ್ರಗತಿ ಸಾಧಿಸಲಾಗಿದೆ. ಅದೇ ರೀತಿ 13.26 ಕೋಟಿ ರೂ. ಲಾಭಾಂಶ ಆಗಿದ್ದು, ಬೆಳಗಾವಿ ಇತಿಹಾಸದಲ್ಲೆ ಹೆಚ್ಚಿನ ವಹಿವಾಟು ಮತ್ತು ಲಾಭಾಂಶ ಹೊಂದಿದ ದಾಖಲೆ ನಿರ್ಮಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಪ್ರತಿವರ್ಷ ಸರ್ವ ಸಾಧಾರಣ ಸಭೆಗೆ 40 ಲಕ್ಷ ರೂ. ಖರ್ಚಾಗುತ್ತಿತ್ತು. ಆದರೆ, ಈ ಬಾರಿ ಶೂನ್ಯ ಖರ್ಚಿನಲ್ಲಿ ಹಮ್ಮಿಕೊಂಡಿದ್ದೆವು. ನಾನೂ ಸೇರಿ ಟಿಎ, ಡಿಎ ತೆಗೆದುಕೊಳ್ಳುತ್ತಿಲ್ಲ. ಅದು ರೈತ ಕಲ್ಯಾಣನಿಧಿಗೆ ಹೋಗುತ್ತದೆ. ಅಲ್ಲಿ ಚಹ ಅಷ್ಟೇ ಕುಡಿಯುತ್ತೇವೆ. ನಮ್ಮ ವೈಯಕ್ತಿಕ ಖರ್ಚಿನಲ್ಲಿ ಊಟ ಮಾಡುತ್ತೇವೆ. ಎಲ್ಲೆಲ್ಲಿ ಉಳಿತಾಯ ಮಾಡಬಹುದು ಅಲ್ಲೆಲ್ಲಾ ಹಣ ಉಳಿಸಿದ್ದೇವೆ. ಭ್ರಷ್ಟಾಚಾರ, ಖರ್ಚು ಹೆಚ್ಚು ಮಾಡದ ಪರಿಣಾಮವೇ ನಮ್ಮ ಈ ಪ್ರಗತಿಗೆ ಕಾರಣ ಎಂದು ವಿವರಿಸಿದರು.
ಗುಣಮಟ್ಟದಲ್ಲಿ ಬಹಳಷ್ಟು ಸುಧಾರಣೆ: ಹಾಲು ಒಕ್ಕೂಟಕ್ಕೆ ಹಾಲು ಹಾಕುವ ರೈತರಿಗೆ ಹೆಚ್ಚಿನ ದರ ಕೊಡುತ್ತೇವೆ. ನೀವು ಗುಣಮಟ್ಟದ ಹಾಲು ಕೊಡಬೇಕು ಎಂದು ರೈತರಿಗೆ ಮನವಿ ಮಾಡಿಕೊಂಡಿದ್ದೇವೆ. ಗುಣಮಟ್ಟದಲ್ಲಿ ಬಹಳಷ್ಟು ಸುಧಾರಣೆ ಆಗಿದೆ. ಹಾಗಾಗಿ, ಈ ವರ್ಷ ದೊಡ್ಡ ಪ್ರಮಾಣದಲ್ಲಿ ಲಾಭ ಆಗಿದೆ. 10 ಸಾವಿರ ಮ್ಯಾಟ್ ಖರೀದಿಸುತ್ತಿದ್ದೇವೆ. ಮೇವು ಕಟಾವು ಯಂತ್ರ, ಹಾಲು ಕರೆಯುವ ಯಂತ್ರಗಳನ್ನು ರಿಯಾಯಿತಿ ದರದಲ್ಲಿ ನೀಡುತ್ತಿದ್ದೇವೆ ಎಂದರು.
ರಾಜ್ಯ ಸರ್ಕಾರದ ಆದೇಶದಂತೆ ಏ.1ರಿಂದ ಪ್ರತಿ ಲೀಟರ್ ಹಾಲಿಗೆ 4 ರೂ. ಜಾಸ್ತಿ ಮಾಡಿದ್ದೇವೆ. ಆ ಹಣವನ್ನು ನೇರವಾಗಿ ರೈತರಿಗೆ ನೀಡುತ್ತಿದ್ದೇವೆ. 1 ರೂ. ಒಕ್ಕೂಟಕ್ಕೆ ಇಟ್ಟುಕೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದೆವು. ಆದರೆ, ಸಿಎಂ ಇದಕ್ಕೆ ಒಪ್ಪಲಿಲ್ಲ. ಹಾಗಾಗಿ, ಪೂರ್ತಿ ಹಣ ಹಾಲು ಉತ್ಪಾದಕರಿಗೆ ಕೊಡುತ್ತಿದ್ದೇವೆ ಎಂದು ಹೇಳಿದರು.
ಹೈಟೆಕ್ ಮೆಗಾ ಡೇರಿಗೆ 350 ಕೋಟಿ ಮೀಸಲು: ಜಿಲ್ಲೆಯಲ್ಲಿರುವ 610 ಹಾಲು ಉತ್ಪಾದಕ ಸಹಕಾರ ಸಂಘಗಳಿಂದ ವಾರ್ಷಿಕವಾಗಿ 2.10 ಲಕ್ಷ ಕೆಜಿ ಹಾಲು ಶೇಖರಿಸಲಾಗುತ್ತಿದೆ. ಮೆಗಾ ಡೇರಿ ಸ್ಥಾಪಿಸಲು 3.5 ಲಕ್ಷ ಕೆಜಿ ಹಾಲು ಸಂಗ್ರಹಿಸಬೇಕಿದೆ. ಆ ನಿಟ್ಟಿನಲ್ಲಿ ಯೋಜನೆ ರೂಪಿಸುತ್ತಿದ್ದೇವೆ. ಈಗಾಗಲೇ ನೂತನ ತಂತ್ರಜ್ಞಾನವುಳ್ಳ ಹೈಟೆಕ್ ಮೆಗಾ ಡೇರಿ ನಿರ್ಮಾಣಕ್ಕೆ ಬಜೆಟ್ನಲ್ಲಿ 350 ಕೋಟಿ ರೂ. ಮೀಸಲಿಟ್ಟಿದ್ದು, ಆದಷ್ಟು ಬೇಗನೇ ಸೂಕ್ತ ಜಾಗವನ್ನು ಅಂತಿಮಗೊಳಿಸಬೇಕಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನಿರ್ದೇಶಕರಾದ ಬಾಬು ಕಟ್ಟಿ, ಮಲ್ಲಪ್ಪ ಪಾಟೀಲ, ಕಲ್ಲಪ್ಪ ಗಿರೆನ್ನವರ, ಡಾ.ಬಸವರಾಜ ಪರವನ್ನವರ, ವ್ಯವಸ್ಥಾಪಕ ನಿರ್ದೇಶಕ ಡಾ.ಶ್ರೀಕಾಂತ ವಿ.ಎನ್ ಸೇರಿ ಮತ್ತಿತರರು ಇದ್ದರು.