ವಿಶೇಷ ವರದಿ: ಸಿದ್ದನಗೌಡ ಎಸ್. ಪಾಟೀಲ್
ಬೆಳಗಾವಿ: ಕಿರು ಉದ್ದಿಮೆಗಳನ್ನು ಪ್ರೋತ್ಸಾಹಿಸುವ ಮತ್ತು ಈಗಿರುವ ಕಿರು ಉದ್ದಿಮೆಗಳನ್ನು ವಿಸ್ತರಿಸುವ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಜಾರಿಗೆ ತಂದಿರುವ 'ಪಿಎಂಎಫ್ಎಂಇ' ಯೋಜನೆ ಸ್ವಂತ ಉದ್ಯೋಗ ಆರಂಭಿಸುವವರ ಪಾಲಿಗೆ ವರದಾನ ಆಗಿದೆ. ಈ ಯೋಜನೆಯಡಿ ಇಡೀ ರಾಜ್ಯದಲ್ಲೇ ಅತೀ ಹೆಚ್ಚು ಬೆಳಗಾವಿ ಜಿಲ್ಲೆಯ ಉದ್ಯಮಿಗಳೇ ಸದುಪಯೋಗ ಪಡೆದಿರುವುದು ವಿಶೇಷ.
ಏನಿದು ಯೋಜನೆ..? ಫಲಾನುಭವಿಗಳು ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಹೇಳುವುದೇನು..? ಕೇಂದ್ರದ ಆಹಾರ ಸಂಸ್ಕರಣಾ ಕೈಗಾರಿಕೆಗಳ ಮಂತ್ರಾಲಯ ಹಾಗೂ ರಾಜ್ಯ ಸರ್ಕಾರದ ಕೃಷಿ ಇಲಾಖೆಯ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ ಪಾಲುದಾರಿಕೆಯೊಂದಿಗೆ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಕಿರು ಸಂಸ್ಕರಣಾ ಉದ್ದಿಮೆಗಳ ಉನ್ನತೀಕರಣಕ್ಕಾಗಿ ಹಣಕಾಸು, ತಾಂತ್ರಿಕ ಹಾಗೂ ವ್ಯಾಪಾರ ಬೆಂಬಲ ಒದಗಿಸಲು ಕೇಂದ್ರ ಪ್ರಾಯೋಜಿತ ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ(ಪಿಎಂಎಫ್ಎಂಇ) ಆರಂಭಿಸಿದೆ. ರಾಜ್ಯದಲ್ಲೂ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ.
ಈ ಯೋಜನೆಯು, ಕಚ್ಚಾ ವಸ್ತುಗಳ ಸಂಗ್ರಹ, ಸಾಮಾನ್ಯ ಸೇವೆಗಳನ್ನು ಪಡೆಯುವುದು ಹಾಗೂ ಉತ್ಪನ್ನಗಳ ಮಾರ್ಕೆಟಿಂಗ್ ವಿಷಯಗಳಿಗೆ ಸಂಬಂಧಪಟ್ಟಂತೆ ಹೆಚ್ಚಿನ ಲಾಭವನ್ನು ಪಡೆಯಲು ಒಂದು ಜಿಲ್ಲೆ ಒಂದು ಉತ್ಪನ್ನ (ಒಡಿಒಪಿ) ದೃಷ್ಟಿಕೋನವನ್ನು ಅಳವಡಿಸಿಕೊಂಡಿದೆ. ಒಂದು ಜಿಲ್ಲೆ ಒಂದು ಉತ್ಪನ್ನವು, ಆ ಜಿಲ್ಲೆಯಲ್ಲಿ ಹಾಗೂ ಪೂರಕ ವಲಯಗಳಲ್ಲಿ ವಿಸ್ತಾರವಾಗಿ ಉತ್ಪಾದಿಸಲಾಗುವಂತಹ ಕೊಳೆಯುವಂತಹ/ನಾಶವಾಗುವಂತಹ ಒಂದು ಉತ್ಪನ್ನವಾಗಿರಬಹುದು. ಏಕದಳ ಆಧಾರಿತ ಉತ್ಪನ್ನ ಅಥವಾ ಆಹಾರ ಉತ್ಪನ್ನವಾಗಿರಬಹುದು.

'ಪಿಎಂಎಫ್ಎಂಇ' ಯೋಜನೆಯಡಿ ಸ್ಥಾಪಿಸಬಹುದಾದ ಆಹಾರ ಸಂಸ್ಕರಣಾ ಉದ್ದಿಮೆಗಳು:
- ಸಿರಿಧಾನ್ಯಗಳ ಮತ್ತು ಇತರೆ ಧಾನ್ಯಗಳ ಸಂಸ್ಕರಣೆ
- ಬೆಲ್ಲ, ನಿಂಬೆ ಉತ್ಪನ್ನಗಳು
- ಬೇಕರಿ ಉತ್ಪನ್ನಗಳು
- ಕೋಲ್ಡ್ ಪ್ರೆಸ್ಡ್ ಆಯಿಲ್
- ಮೆಣಸಿನ ಪುಡಿ ಘಟಕಗಳು
- ಶುಂಠಿ ಸಂಸ್ಕರಣಾ ಘಟಕಗಳು
- ಅನಾನಸ್ ಸಂಸ್ಕರಣಾ ಘಟಕಗಳು
- ಮಸಾಲಾ ಉತ್ಪನ್ನಗಳ ಘಟಕಗಳು
- ತೆಂಗಿನ ಉತ್ಪನ್ನಗಳು
- ಕುಕ್ಕುಟಗಳ ಉತ್ಪನ್ನಗಳು
- ವಿವಿಧ ಹಣ್ಣು ಮತ್ತು ತರಕಾರಿಗಳ ಉತ್ಪನ್ನಗಳು
- ಶೇಂಗಾ, ಕುಸುಬಿ, ಸೂರ್ಯಕಾಂತಿ, ಸಾಸಿವೆ ಎಣ್ಣೆ ತಯಾರಿಕೆ
ಕರ್ನಾಟಕದಲ್ಲಿ ಬೆಳಗಾವಿ ಜಿಲ್ಲೆಯ 815 ಕಿರು ಉದ್ದಿಮೆಗಳು ಈ ಯೋಜನೆಯಡಿ ಸದುಪಯೋಗ ಪಡೆದುಕೊಂಡಿದ್ದು, ಯಶಸ್ವಿಯಾಗಿ ತಮ್ಮ ಉದ್ದಿಮೆಗಳನ್ನು ಸ್ಥಾಪಿಸಿಕೊಂಡು ಸ್ವಾವಲಂಬಿ ಆಗಿದ್ದಾರೆ. 'ಪಿಎಂಎಫ್ಎಂಇ' ಯೋಜನೆ ಸದ್ಬಳಕೆಯಲ್ಲಿ ಬೆಳಗಾವಿ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ.
ಅರ್ಜಿ ಸಲ್ಲಿಸುವುದು ಹೇಗೆ..? ಎಫ್‌ಎಂಇ ಪೋರ್ಟಲ್ನಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳಿಂದ ಉಚಿತವಾಗಿ ಯೋಜನಾ ಪ್ರಸ್ತಾವನೆ ಸಿದ್ಧತೆ ಮತ್ತು ಅರ್ಜಿ ಸಲ್ಲಿಕೆಗೆ ಸಹಾಯ ಒದಗಿಸಲಾಗುತ್ತದೆ. ಯೋಜನೆಯಡಿ ಒದಗಿಸುವ ಸಾಲಕ್ಕೆ ಶೇ.2ರಷ್ಟು ಬಡ್ಡಿ ಸಹಾಯಧನ ಸಿಗಲಿದೆ. ಆಹಾರ ಸಂಸ್ಕರಣಾ ತಾಂತ್ರಿಕತೆಗಳ ಬಗ್ಗೆ CFTRI, IIHR ಮತ್ತಿತರ ಸಂಸ್ಥೆಗಳಿಂದ ಉಚಿತವಾಗಿ ತರಬೇತಿ ನೀಡಲಾಗುತ್ತಿದೆ. ಯೋಜನೆಯಡಿ ಒದಗಿಸುವ ಸಾಲಕ್ಕೆ CGTMSE ಸಂಸ್ಥೆಯಿಂದ ಕ್ರೆಡಿಟ್ ಗ್ಯಾರಂಟಿ ನೀಡುತ್ತದೆ.
ರೈತ ಉತ್ಪಾದಕರ ಸಂಸ್ಥೆಗಳು/ಕಂಪನಿಗಳು, ಸಹಕಾರಿಗಳು, ಸ್ವ-ಸಹಾಯ ಸಂಘಗಳು, ಸಹಕಾರಿ ಸಂಸ್ಥೆಗಳು, ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳು ಈ ಯೋಜನೆ ಲಾಭ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ಸಲ್ಲಿಕೆಗಾಗಿ ಆಯಾ ಜಿಲ್ಲೆಯ ಜಂಟಿ ಕೃಷಿ ನಿರ್ದೇಶರ ಕಚೇರಿಯನ್ನು ಸಂಪರ್ಕಿಸಿ ಅಥವಾ ಕೆಪೆಕ್ ಸಂಸ್ಥೆಯ ಯೋಜನಾ ನಿರ್ವಹಣಾ ಘಟಕವನ್ನು ಸಂಪರ್ಕಿಸಬಹುದು ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕೃಷಿ ಜಂಟಿ ನಿರ್ದೇಶಕರು ಹೇಳಿದ್ದಿಷ್ಟು: ಬೆಳಗಾವಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ್ ಈಟಿವಿ ಭಾರತ ಜೊತೆಗೆ ಮಾತನಾಡಿ, "ಕಿರು ಉದ್ದಿಮೆಗಳನ್ನು ಪ್ರೋತ್ಸಾಹಿಸುವುದು ಈ ಯೋಜನೆಯ ಮುಖ್ಯ ಉದ್ದೇಶ. ಮಹಿಳೆಯರು, ರೈತರು, ಸ್ವಸಹಾಯ ಸಂಘಗಳಿಗೆ ಕಿರು ಉದ್ಯೋಗ ಸ್ಥಾಪಿಸಲು ಪ್ರೋತ್ಸಾಹಿಸಲಾಗುತ್ತಿದೆ. ಗರಿಷ್ಠ 30 ಲಕ್ಷ ರೂ. ವರೆಗೆ ಯೋಜನಾ ವೆಚ್ಛ ಇರುತ್ತದೆ. ಅದರಲ್ಲಿ 15 ಲಕ್ಷ ರೂ. ಸಬ್ಸಿಡಿ ಇರುತ್ತದೆ. ಕೇಂದ್ರ ಸರ್ಕಾರ ಶೇ.35 ಮತ್ತು ರಾಜ್ಯ ಸರ್ಕಾರ ಶೇ.15ರಷ್ಟು ಸಬ್ಸಿಡಿ ನೀಡುತ್ತದೆ. ಫಲಾನುಭವಿಗಳು ಶೇ.10ರಷ್ಟು ವಂತಿಗೆ ಸಲ್ಲಿಸಬೇಕಾಗುತ್ತದೆ. ಶೇ. 90ರಷ್ಟು ಬ್ಯಾಂಕ್ ಲೋನ್ ಸಿಗುತ್ತದೆ" ಎಂದು ವಿವರಿಸಿದರು.
ಯೋಜನೆ ಲಾಭ ಪಡೆಯಿರಿ: "ಈವರೆಗೆ 815 ಕಿರು ಉದ್ಯಮಗಳನ್ನು ಸ್ಥಾಪಿಸುವ ಮೂಲಕ ಇಡೀ ರಾಜ್ಯಕ್ಕೆ ಬೆಳಗಾವಿ ಪ್ರಥಮ ಸ್ಥಾನಗಳಿಸಿದೆ. ಎಣ್ಣೆ ಗಾಣ, ಬೇಕರಿ, ರೊಟ್ಟಿ ಮಾಡುವ ಯಂತ್ರಗಳು ಸೇರಿ ಬಹಳಷ್ಟು ಉದ್ದಿಮೆಗಳಿಗೆ ಈ ಯೋಜನೆಯ ಫಲಾನುಭವಿಗಳಾಗಲು ಅವಕಾಶ ಇದೆ. ಬೆಳಗಾವಿ ಜಿಲ್ಲೆಯಲ್ಲಿ ಅತ್ಯುತ್ತಮ ರೀತಿಯಲ್ಲಿ ಕಿರು ಉದ್ದಿಮೆಗಳು ಸ್ಥಾಪನೆ ಆಗುತ್ತಿವೆ. ಇದು ಸ್ವಂತ ಉದ್ಯೋಗ ಆಗಿರುವುದರಿಂದ ಹೆಚ್ಚು ಆಸಕ್ತಿ ವಹಿಸಿ ಅವರು ಮಾಡುತ್ತಾರೆ. ಹಾಗಾಗಿ, ಸ್ವಂತ ಉದ್ಯೋಗ ಮಾಡಬೇಕು ಎನ್ನುವವರು ಹೆಚ್ಚೆಚ್ಚು ಜನರು ಈ ಯೋಜನೆ ಸದುಪಯೋಗ ಪಡೆದುಕೊಳ್ಳುವಂತೆ" ಶಿವನಗೌಡ ಪಾಟೀಲ್ ಕೋರಿದರು.
ಆಯಿಲ್ ಕಂಪನಿ ಸ್ಥಾಪನೆ: ಬೆಳಗಾವಿಯ ಪವಿತ್ರಾ ಬಾಲಚಂದ್ರ ಗೌಡರ ಅವರು 'ಪಿಎಂಎಫ್ಎಂಇ' ಯೋಜನೆ ಫಲಾನುಭವಿ ಆಗಿದ್ದು, ಜೀವ ಮಿತ್ರ ನ್ಯಾಚುರಲ್ ಆಯಿಲ್ ಕಂಪನಿ ಹುಟ್ಟು ಹಾಕಿದ್ದಾರೆ. ಶೇಂಗಾ, ಕುಸುಬಿ, ಸೂರ್ಯಕಾಂತಿ, ಸಾಸಿವೆ, ಎಳ್ಳೆಣ್ಣೆ, ಕೊಬ್ಬರಿಎಣ್ಣೆ, ಔಡಲ ಎಣ್ಣೆ ಉತ್ಪಾದಿಸುತ್ತಿದ್ದಾರೆ. ಪ್ರತಿ 15 ದಿನಕ್ಕೊಮ್ಮೆ 300-400 ಲೀಟರ್ ಎಣ್ಣೆ ತಯಾರಿಸುತ್ತಾರೆ. ಮೂರು ಯಂತ್ರಗಳಿದ್ದು, ಪವಿತ್ರಾ ಒಬ್ಬರೇ ಇದನ್ನು ನಿರ್ವಹಿಸುತ್ತಾರೆ. ಗೋವಾ, ಮಹಾರಾಷ್ಟ್ರ ಸೇರಿ ಬೆಳಗಾವಿ ಜಿಲ್ಲೆಯಾದ್ಯಂತ ಎಣ್ಣೆ ಮಾರಾಟ ಮಾಡುತ್ತಿದ್ದಾರೆ. ಪವಿತ್ರಾ ಅವರಿಗೆ ಟ್ಯಾಕ್ಸ್ ಕನ್ಸಲ್ಟಂಟ್ ಆಗಿರುವ ಪತಿ ಬಾಲಚಂದ್ರ ಬೆನ್ನೆಲುಬಾಗಿ ನಿಂತಿದ್ದಾರೆ.
ಫಲಾನುಭವಿ ಹೇಳಿದ್ದೇನು..? ಈಟಿವಿ ಭಾರತಕ್ಕೆ ಮಾಹಿತಿ ನೀಡಿದ ಪವಿತ್ರಾ ಗೌಡರ, "ನಮ್ಮ ಆಯಿಲ್ ಕಂಪನಿ ಸ್ಥಾಪಿಸಲು 7.66 ಲಕ್ಷ ರೂ. ಖರ್ಚಾಗಿದೆ. ಇದರಲ್ಲಿ 6.89ಲಕ್ಷ ಬ್ಯಾಂಕ್ ಲೋನ್ ಸಿಕ್ಕಿತು. 2023ರ ಮೇ ತಿಂಗಳಲ್ಲಿ ಕೆಲಸ ಶುರು ಮಾಡಿದೆವು. 1 ವರ್ಷದ ಬಳಿಕ ಶೇ.35ರಷ್ಟು 2,68,170ರೂ. ಕೇಂದ್ರ ಸರ್ಕಾರದಿಂದ ಸಬ್ಸಿಡಿ ಹಣ ಜಮೆ ಆಗಿದೆ. ಅದೇ ರೀತಿ 2025 ಮಾರ್ಚ್ 28ರಂದು ಶೇ.15ರಷ್ಟು, 1,14,850 ರೂ. ಸಬ್ಸಿಡಿ ಹಣ ರಾಜ್ಯ ಸರ್ಕಾರದಿಂದ ಬಂದಿದೆ. ಪ್ರತಿ ತಿಂಗಳು 2 ಲಕ್ಷ ರೂ. ವಹಿವಾಟು ನಡೆಸುತ್ತಿದ್ದೇನೆ. ಮನೆಯಲ್ಲಿ ಕುಳಿತು ಬೇಸರ ಆಗುತ್ತಿತ್ತು. ಏನಾದರೂ ಮಾಡಬೇಕು ಅಂತಾ ಯೋಚಿಸುತ್ತಿದ್ದೆ. 'ಪಿಎಂಎಫ್ಎಂಇ' ಯೋಜನೆ ನನ್ನನ್ನು ಓರ್ವ ಕಿರು ಉದ್ಯಮಿ ಮಾಡಿದೆ. ನಮ್ಮ ಜೀವ ಮಿತ್ರ ತೈಲ ಬ್ರ್ಯಾಂಡ್ ದೇಶಾದ್ಯಂತ ವಿಸ್ತರಿಸುವ ಗುರಿ ಇದೆ" ಎಂದು ತಿಳಿಸಿದರು.
ಇದನ್ನೂ ಓದಿ: 'ಆರೋಗ್ಯ ಸುರಕ್ಷತೆಗೆ ಬೀದಿಬದಿ, ಹೋಟೆಲ್ ಆಹಾರದ ಮೇಲೆ ಕಟ್ಟುನಿಟ್ಟಿನ ಗಮನ ಅಗತ್ಯ'