ಬೆಳಗಾವಿ: ಸೈಬರ್ ಅಪರಾಧಿಗಳ ಕೃತ್ಯಕ್ಕೆ ಹಣ ಕಳೆದುಕೊಂಡವರು ಸಾಕಷ್ಟು ಜನ. ಆದರೆ, ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ವೃದ್ಧ ದಂಪತಿ ಲಕ್ಷಾಂತರ ರೂ. ಹಣದ ಜೊತೆಗೆ ತಮ್ಮ ಜೀವವನ್ನೇ ಕಳೆದುಕೊಂಡಿದ್ದರು. ಆ ಕೀಚಕರ ಕಿರುಕುಳಕ್ಕೆ ಬೇಸತ್ತು ಇಳಿ ವಯಸ್ಸಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಆ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಈಗ ಜಿಲ್ಲಾ ಸಿಇಎನ್ ಪೊಲೀಸರು ಆ ಪ್ರಕರಣದ ಓರ್ವ ಆರೋಪಿಗೆ ಹೆಡೆಮುರಿ ಕಟ್ಟಿದ್ದು, ಪ್ರಮುಖ ಆರೋಪಿಗಳಿಗೂ ಖೆಡ್ಡಾ ರೆಡಿ ಮಾಡಿದ್ದಾರೆ.
ಹೌದು, ಬೀಡಿ ಗ್ರಾಮದ ಕ್ರಿಶ್ಚಿಯನ್ ಓಣಿಯ ನಿವಾಸಿಗಳಾಗಿದ್ದ ನಿವೃತ್ತ ರೈಲ್ವೆ ಉದ್ಯೋಗಿ ಡಿಯಾಗೋ ನಜರತ್ (83) ಮತ್ತು ಅವರ ಪತ್ನಿ ಫ್ಲೇವಿಯಾ ನಜರತ್ (78) ಅವರು ಮಾರ್ಚ್ 27ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಫ್ಲೇವಿಯಾ ನಿದ್ರೆ ಮಾತ್ರೆ ಸೇವಿಸಿ ಮೃತಪಟ್ಟಿದ್ದರೆ, ಡಿಯಾಗೊ ಚಾಕುವಿನಿಂದ ಚುಚ್ಚಿಕೊಂಡು, ಮನೆಯ ಹಿಂದಿನ ನೀರಿನ ತೊಟ್ಟಿಯಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಸಾವಿಗೂ ಮುನ್ನ ತಮಗಾದ ವಂಚನೆ ಕುರಿತು ಡೆತ್ನೋಟ್ ಕೂಡಾ ಬರೆದಿಟ್ಟಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ್, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಮೃತ ಡಿಯಾಗೋ ಅವರು ಆರೋಪಿಗಳ ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಮಾಡಿದ್ದ ಜಾಡನ್ನು ಹಿಡಿದು ಬೆಳಗಾವಿ ಪೊಲೀಸರು ಗುಜರಾತ್ ರಾಜ್ಯದ ಸೂರತ್ಗೆ ತೆರಳಿದ್ದರು. ಅಲ್ಲಿನ ನಿವಾಸಿ ಚಿರಾಗ್ ಜೀವರಾಜಬಾಯ್ ಲಕ್ಕಡ್ ಎಂಬ ಆರೋಪಿಯನ್ನು ಬಂಧಿಸಿ, ಬೆಳಗಾವಿಗೆ ಕರೆ ತಂದಿದ್ದಾರೆ. ಆರೋಪಿ ವಿರುದ್ಧ ಅಪರಾಧ ಸಂಖ್ಯೆ 32/2025 ಕಲಂ 66(ಡಿ) ಐಟಿ ಕಾಯ್ದೆ ಮತ್ತು ಕಲಂ 108, 308(2), 319(2), 03(5) ಬಿಎನ್ಎಸ್ ಅಡಿ ಖಾನಾಪುರ ತಾಲೂಕಿನ ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣದ ಬಗ್ಗೆ ಎಸ್ಪಿ ಗುಳೇದ ಮಾಹಿತಿ: ಡಾ.ಭೀಮಾಶಂಕರ ಗುಳೇದ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, "ಆರೋಪಿ ಚಿರಾಗ್ ಮೊಬೈಲ್ ನಂಬರ್ ಬಳಸಿಕೊಂಡು ಸೈಬರ್ ವಂಚಕರು ಇಂಟರನೆಟ್ ಬ್ಯಾಂಕಿಂಗ್ ಮೂಲಕ ಮೃತ ಡಿಯಾಗೋ ನಜರತ್ ಅವರ ಬ್ಯಾಂಕ್ ಖಾತೆಯಿಂದ 6.10 ಲಕ್ಷ ರೂ. ವರ್ಗಾಯಿಸಿಕೊಂಡಿದ್ದರು. ಬಂಧಿತ ಆರೋಪಿ ಚಿರಾಗ್ ಈ ಪ್ರಕರಣದಲ್ಲಿ ಅಪ್ರತ್ಯಕ್ಷ ಪಾತ್ರ ನಿರ್ವಹಿಸಿದ್ದಾನೆ. ನೇರವಾಗಿ ಪ್ರಕರಣದಲ್ಲಿ ಭಾಗಿಯಾಗದೇ ಇದ್ದರೂ ಆತನ ಮೊಬೈಲ್ ನಂಬರ್ ಬಳಸಿಕೊಂಡ ಆರೋಪಿಗಳು ಬಾಲಾಜಿ ಇಂಡಸ್ಟ್ರೀಸ್ ಎಂಬ ಕಂಪನಿ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆ ಸೃಷ್ಟಿಸಿಕೊಂಡು ಆ ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದರು. ಅದಾದ ಬಳಿಕ ಆ ಹಣ ಬೇರೆ ಖಾತೆಗಳಿಗೆ ವರ್ಗಾವಣೆ ಆಗಿದೆ. ಆ ಕುರಿತು ನಮ್ಮ ತನಿಖೆ ಮುಂದುವರಿದಿದೆ" ಎಂದರು.
ಬೇರೆ ಬೇರೆ ಖಾತೆಗಳಿಗೆ 59 ಲಕ್ಷ ವರ್ಗಾವಣೆ: "ಇನ್ನು ಒಂದು ತಿಂಗಳ ಅಂತರದಲ್ಲಿ ಮೃತ ಡಿಯಾಗೋ ನಜರತ್ ಅವರ ಬ್ಯಾಂಕ್ ಖಾತೆಯಿಂದ ಬೇರೆ ಬೇರೆ ಖಾತೆಗಳಿಗೆ ಸುಮಾರು 59 ಲಕ್ಷ ವರ್ಗಾವಣೆ ಆಗಿದೆ. ಈ ಪ್ರಕರಣದಲ್ಲಿ ಎಷ್ಟು ಆರೋಪಿಗಳು ಶಾಮೀಲಾಗಿದ್ದಾರೆ ಅಂತಾ ಈಗಲೇ ಹೇಳಲು ಬರುವುದಿಲ್ಲ. ಇದು ಪ್ರಾಥಮಿಕ ಹಂತದ ಸಾಕ್ಷಿ ಮತ್ತು ಯಶಸ್ಸು ಅಂತಾನೇ ಹೇಳಬಹುದು. ಮುಂದಿನ ದಿನಗಳಲ್ಲಿ ಎಲ್ಲ ಆಯಾಮಗಳಿಂದ ತನಿಖೆ ಕೈಗೊಳ್ಳಲಾಗುವುದು" ಎಂದು ತಿಳಿಸಿದರು.
"ಪ್ರತಿಯೊಂದು ಸೈಬರ್ ಪ್ರಕರಣಗಳನ್ನು ನಮ್ಮ ಪೊಲೀಸರು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. ಈ ಪ್ರಕರಣದಲ್ಲಿ ಇಷ್ಟೇ ದಿನಗಳಲ್ಲಿ ಇನ್ನುಳಿದ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಹೇಳಲು ಬರುವುದಿಲ್ಲ. ಆದರೆ, ಭಾರತ ದೇಶದ ಯಾವುದೇ ಮೂಲೆಯಲ್ಲಿ ಇದ್ದರೂ ಕೂಡ ಆರೋಪಿಗಳನ್ನು ಬಿಡುವುದಿಲ್ಲ. ಹಿಡಿದೇ ಹಿಡಿಯುತ್ತೇವೆ" ಎಂದು ಸ್ಪಷ್ಟಪಡಿಸಿದರು.
ವಿವಿಧ ಆಯಾಮಗಳಲ್ಲಿ ತನಿಖೆ: "ನಮ್ಮ ಪೊಲೀಸರ ತಂಡ ಸೂರತ್ಗೆ ಹೋಗಿ ಆರೋಪಿಯನ್ನು ಬಂಧಿಸಿದೆ. ತನಿಖೆಯಲ್ಲಿ ಕಂಡು ಬಂದ ಅಂಶದ ಪ್ರಕಾರ ಅಲ್ಲಿ ಬಾಲಾಜಿ ಇಂಡಸ್ಟ್ರೀಸ್ ಎನ್ನುವ ಕಂಪನಿಯೇ ಇಲ್ಲ. ಇದರಲ್ಲಿ ಒಂದು ರೀತಿಯಲ್ಲಿ ಬ್ಯಾಂಕ್ ಅಧಿಕಾರಿಗಳೂ ಹೊಣೆಗಾರರು ಆಗಿದ್ದಾರೆ. ಹಾಗಾಗಿ, ಅವರನ್ನು ಕೂಡ ಬೇರೆ ಆಯಾಮಗಳಲ್ಲಿ ತನಿಖೆ ನಡೆಸುತ್ತೇವೆ. ಮೃತ ದಂಪತಿಗಳ ಸಾವಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ನಮ್ಮ ಪೊಲೀಸರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ" ಎಂದು ಶ್ಲಾಘಿಸಿದರು.
"ಬಂಧಿತ ಆರೋಪಿ ಚಿರಾಗ್ ಗೆ 10 ಸಾವಿರ ರೂ. ಕೊಟ್ಟು, ಇಂಟರನೆಟ್ ಬ್ಯಾಂಕಿಂಗ್ ಮಾಡಿಕೊಳ್ಳಲು ಆತನ ಮೊಬೈಲ್ ನಂಬರ್ ಆರೋಪಿಗಳು ತೆಗೆದುಕೊಂಡಿದ್ದಾರೆ. ನೆಟ್ ಬ್ಯಾಂಕಿಂಗ್ ಆಕ್ಟಿವೇಶನ್ ಮಾಡಿಕೊಂಡ ಬಳಿಕ ಆರೋಪಿಗಳಿಗೆ ಮೆಸೇಜ್ ಬರಲು ಶುರು ಆಗುತ್ತದೆ. ನಂತರ ಆತನ ಖಾತೆಗೆ ಜಮೆ ಆಗಿದ್ದ 6.10 ಲಕ್ಷ ರೂ. ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ನೆಟ್ ಬ್ಯಾಂಕಿಂಗ್ ಖಾತೆಗೆ ಆರೋಪಿ ಮೊಬೈಲ್ ನಂಬರ್ ಲಿಂಕ್ ಇರುವ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿದೆ" ಎಂದು ತಿಳಿಸಿದರು.
ಘಟನೆ ಹಿನ್ನೆಲೆ: ದೆಹಲಿಯ ದೂರ ಸಂಪರ್ಕ ಇಲಾಖೆ ಅಧಿಕಾರಿ ಸೋಗಿನಲ್ಲಿ ಕರೆ ಮಾಡಿದ್ದ ಆರೋಪಿ, ನಿಮ್ಮ ಸಿಮ್ ಕಾರ್ಡನ್ನು ಯಾರೋ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದಿದ್ದರು. ಬಳಿಕ ಆತ ಅಪರಾಧ ಶಾಖೆ ಅವರಿಗೆ ಕರೆಯನ್ನು ವರ್ಗಾಯಿಸಿರುವುದಾಗಿ ಹೇಳಿದ್ದ. ಅವನು ನಮ್ಮ FD ಹಣ, ಶೇರುಗಳು, ಭೂಮಿ ಮತ್ತು ಮನೆ ಆಸ್ತಿಗಳ ವಿವರವನ್ನು ಪಡೆದುಕೊಂಡ. ಇದಾದ ನಂತರ ನಿಮ್ಮ ಪ್ರಕರಣ ಇತ್ಯರ್ಥಪಡಿಸಲು ನಾವು ಕೇಳಿದಷ್ಟು ದುಡ್ಡು ಕೊಡುವಂತೆ ಬೇಡಿಕೆ ಇಟ್ಟಿದ್ದರು. ಇದರಿಂದ ಆತಂಕಗೊಂಡ ಡಿಯಾಗೋ ನಜರತ್ ಅವರು ಆರೋಪಿಗಳಿಗೆ 22 ಬೇರೆ ಬೇರೆ ಖಾತೆಗಳಿಗೆ ಒಟ್ಟು 59.63 ಲಕ್ಷ ರೂ. ಹಣವನ್ನು ಹಾಕಿದ್ದರು. ಇಷ್ಟಾದ ಮೇಲೂ ಮತ್ತೆ ಆರೋಪಿಗಳು ಹಣಕ್ಕೆ ಬೇಡಿಕೆ ಇಟ್ಟಿದ್ದರಿಂದ ಇನ್ನು ದುಡ್ಡು ಎಲ್ಲಿಂದ ತರುವುದು ಎಂದು ಹೇಳಿ ಆತ್ಮಹತ್ಯೆಗೆ ಶರಣಾಗಿದ್ದರು. ಬೀಡಿ ಗ್ರಾಮಸ್ಥರ ಗುಂಪೊಂದು ಡಿಯಾಗೋ ಅವರ ಮನೆಗೆ 200 ರೂ. ಸಂಗ್ರಹಿಸಲು ತೆರಳಿತ್ತು. ಅವರ ಮನೆಯೊಳಗೆ ಹೋಗಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಕೂಡಲೇ ಅವರು ಸ್ಥಳೀಯ ನಂದಗಡ ಪೊಲೀಸರಿಗೆ ತಿಳಿಸಿದ್ದರು.
ಡೆತ್ ನೋಟ್ನಲ್ಲಿತ್ತು ಈ ಎಲ್ಲ ವಿಷಯ: ಡಿಯಾಗೋ ಅವರು ಇಬ್ಬರು ಸ್ನೇಹಿತರಿಂದ 5 ಲಕ್ಷ ರೂ. ಮತ್ತು ಪಾದ್ರಿಯಿಂದ 50,000 ರೂ. ಸಾಲ ಪಡೆದಿದ್ದರು. ಜೊತೆಗೆ 7.15 ಲಕ್ಷ ರೂ. ಚಿನ್ನದ ಸಾಲ ಪಡೆದಿದ್ದರು. ಚಿನ್ನದ ಬಳೆ, ಕಿವಿಯೋಲೆ, ಉಂಗುರವನ್ನು ಮಾರಿ ಬಂದ ಹಣದಿಂದ ಸಾಲವನ್ನು ತೀರಿಸಬೇಕು ಎಂದು ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದರು. ಅಲ್ಲದೇ ತಮ್ಮ ಇಬ್ಬರ ಮೃತದೇಹಗಳನ್ನು ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ನೀಡುವಂತೆಯೂ ತಿಳಿಸಿದ್ದರು ಎಂಬ ಸಂಗತಿ ಡೆತ್ನೋಟ್ನಿಂದ ಬೆಳಕಿಗೆ ಬಂದಿದೆ. ಈ ಮೂಲಕ ತಾವು ಈ ರೀತಿ ತಮ್ಮದಲ್ಲದ ತಪ್ಪಿನಿಂದ ಸಾವನ್ನಪ್ಪಿದರೂ, ಸತ್ತ ಬಳಿಕ ವಿದ್ಯಾರ್ಥಿಗಳ ಕಲಿಕೆಗೆ ನೆರವಾಗಬೇಕು ಎಂಬ ಅವರಲ್ಲಿನ ಸಾಮಾಜಿಕ ಕಳಕಳಿ ನಿಜಕ್ಕೂ ಮೆಚ್ಚುವಂತದ್ದು.
"ಮುಂಬೈನಲ್ಲಿ ಸೆಕ್ರೆಟರಿಯೇಟ್ ಅಧಿಕಾರಿಯಾಗಿದ್ದ ಡಿಯಾಗೋ ನಜರತ್ ಅವರು ನಿವೃತ್ತಿ ಬಳಿಕ ತಮ್ಮ ಪತ್ನಿ ಜೊತೆಗೆ ಬೀಡಿ ಗ್ರಾಮಕ್ಕೆ ಬಂದು ನೆಲೆಸಿದ್ದರು. ಈ ದಂಪತಿಗೆ ಮಕ್ಕಳು ಇರಲಿಲ್ಲ. ಗ್ರಾಮದ ಜನರ ಜೊತೆಗೆ ಅಷ್ಟಾಗಿ ಮಾತನಾಡುತ್ತಿರಲಿಲ್ಲ. ಚರ್ಚ್ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಶಾಲಾ ಮಕ್ಕಳಿಗೆ ಡಿಯಾಗೋ ಇಂಗ್ಲೀಸ್ ಹೇಳಿ ಕೊಡುತ್ತಿದ್ದರು. ಇನ್ನೊಬ್ಬರಿಂದ ಒಂದು ಕಪ್ ಚಹ ಕೂಡ ಅಪೇಕ್ಷೆ ಪಡದ ವ್ಯಕ್ತಿತ್ವ ಅವರದ್ದಾಗಿತ್ತು. ತಮಗೆ ಸೈಬರ್ ವಂಚಕರು ಕಿರುಕುಳ ನೀಡುತ್ತಿದ್ದಾರೆ ಅಂತ ಯಾರಿಗೂ ಹೇಳಿರಲಿಲ್ಲ. ನಮಗೆ ತಿಳಿಸಿದ್ದರೆ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಬಿಡುತ್ತಿರಲಿಲ್ಲ" ಎನ್ನುತ್ತಾರೆ ಬೀಡಿ ಗ್ರಾಮಸ್ಥರು.
ಇದು ಡಿಜಿಟಲ್ ಅರೆಸ್ಟ್ ತರಹ ಕಂಡು ಬಂದಿಲ್ಲ: ಇನ್ನು ಈ ಪ್ರಕರಣವು ಡಿಜಿಟಲ್ ಅರೆಸ್ಟ್ ರೀತಿ ಕಂಡು ಬಂದಿಲ್ಲ. ಮೃತ ಡಿಯಾಗೋ ನಜರತ್ ಅವರಿಗೆ ಆರೋಪಿಗಳು ನಿಮ್ಮ ಐಡಿ ಕಾರ್ಡ್ ಬಳಸಿಕೊಂಡು ಮೊಬೈಲ್ ನಂಬರ್ ತೆಗೆದುಕೊಂಡಿದ್ದಾರೆ. ಆ ನಂಬರ್ ಮೂಲಕ ಸುಮಾರು ಜನರಿಗೆ ಸೈಬರ್ ವಂಚನೆ ಮಾಡಿದ್ದಾರೆ. ಇದಕ್ಕೆ ನೀವು ಹೊಣೆಗಾರರು ಆಗುತ್ತೀರಿ ಎಂದು ಹೆದರಿಸಿದ್ದಾರೆ. ಬಳಿಕ ಅವರಿಂದ ಸುಮಾರು 59 ಲಕ್ಷ ರೂ. ಹಣವನ್ನು ದೋಚಿದ್ದಾರೆ. ಹಾಗಾಗಿ, ಇದು ಡಿಜಿಟಲ್ ಅರೆಸ್ಟ್ ಅಂತಾ ಮೇಲ್ನೋಟಕ್ಕೆ ಕಂಡು ಬಂದಿಲ್ಲ. ನಗ್ನಚಿತ್ರಗಳು ಮತ್ತು ಅಶ್ಲೀಲ ಸಂದೇಶಗಳನ್ನು ಕಳಿಸಿದ್ದಾರೆ ಎಂದು ಆರೋಪಿಗಳು ಹೆದರಿಸಿರುವುದು ಕಂಡು ಬಂದಿಲ್ಲ" ಎಂದು ಡಾ.ಭೀಮಾಶಂಕರ್ ಗುಳೇದ ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಸೈಬರ್ ವಂಚನೆ, ಬೆಳಗಾವಿ ವೃದ್ಧ ದಂಪತಿ ಆತ್ಮಹತ್ಯೆ ಪ್ರಕರಣ : ಗುಜರಾತ್ ವ್ಯಕ್ತಿ ಪೊಲೀಸರ ಬಲೆಗೆ