ಬೆಂಗಳೂರು: ಮದುವೆ ಸಮಾರಂಭವೊಂದಕ್ಕೆ ವಧುವನ್ನು ಸಿಂಗರಿಸಿದ ಫೋಟೋಗಳನ್ನು ಅನುಮತಿ ಇಲ್ಲದೆ ಪ್ರಚಾರದ ಉದ್ದೇಶಕ್ಕಾಗಿ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಲ್ಲದೇ, ದುರ್ವರ್ತನೆ ತೋರಿದ್ದ ಪ್ರಸಾದನ ಕಲಾವಿದೆಯೊಬ್ಬರ (ಮೇಕಪ್ ಆರ್ಟಿಸ್ಟ್) ಮೇಲೆ ಅಸಮಾಧಾನ ವ್ಯಕ್ತಪಡಿಸಿರುವ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ, 15 ಸಾವಿರ ರೂ.ಗಳ ದಂಡ ವಿಧಿಸಿ ಆದೇಶಿಸಿದೆ.
ಅಲ್ಲದೆ, ದಂಡದ ಮೊತ್ತವನ್ನು ಆದೇಶ ಹೊರಬಿದ್ದ 30 ದಿನಗಳಲ್ಲಿ ನೊಂದ ವ್ಯಕ್ತಿಗೆ ಪಾವತಿಸಲು ನಿರ್ದೇಶನ ನೀಡಿದೆ. ತಮ್ಮ ಮದುವೆ ಫೋಟೋಗಳನ್ನು ಅನುಮತಿ ಪಡೆಯದೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದ ಕ್ರಮ ಪ್ರಶ್ನಿಸಿ ತುಮಕೂರಿನ ನವ ವಧುವೊಬ್ಬರು ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ಪರಿಹಾರ ವೇದಿಕೆಯ ಅಧ್ಯಕ್ಷರಾದ ಎಂ.ಶೋಭಾ ಅವರಿದ್ದ ತ್ರಿಸದಸ್ಯ ಪೀಠ ಈ ಆದೇಶ ನೀಡಿದೆ.
ದೂರಿನಲ್ಲಿ ಪ್ರತಿವಾದಿಯಾಗಿರುವ ಪ್ರಸಾದನ ಕಲಾವಿದೆ, ತಮ್ಮ ವಾಣಿಜ್ಯ ಉದ್ದೇಶಕ್ಕಾಗಿ ದೂರುದಾರರಿಂದ ಅನುಮತಿ ಪಡೆಯದೇ, ಅವರ ಫೋಟೋಗಳನ್ನು ಬಳಕೆ ಮಾಡಿಕೊಂಡು ಗ್ರಾಹಕರ ಗೌಪ್ಯತೆಯನ್ನು ವ್ಯವಹಾರದ ಉದ್ದೇಶಕ್ಕಾಗಿ ಬಳಕೆ ಮಾಡಿಕೊಂಡಿದ್ದಾರೆ. ಇದು ಕಾನೂನಿನಲ್ಲಿ ಅನ್ಯಾಯದ ವ್ಯಾಪಾರವಾಗಿದೆ. ಅನುಮತಿ ಪಡೆಯದೆ ಮಾಡಿದ ಕೃತ್ಯದಿಂದ ದೂರುದಾರರಿಗೆ ಭಾರೀ ಅನ್ಯಾಯ ಮತ್ತು ಮಾನಸಿಕ ನೋವನ್ನುಂಟು ಮಾಡಿದೆ ಎಂದು ಗ್ರಾಹಕರ ವೇದಿಕೆ ತಿಳಿಸಿದೆ.
ತಮ್ಮ ಅನುಮತಿ ಪಡೆಯದೇ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಬಳಸಿರುವ ಸಂಬಂಧ ಪ್ರಸಾದನ ಕಲಾವಿದೆಯನ್ನು ಪ್ರಶ್ನಿಸಿದರೆ, ಅದಕ್ಕೆ ಪ್ರತಿಯಾಗಿ ಅಸಭ್ಯ ಪದಗಳನ್ನು ಬಳಕೆ ಮಾಡಿದ್ದಾರೆ. ನನ್ನ ಇನ್ಸ್ಟಾಗ್ರಾಮ್ ಪೇಜ್, ನನ್ನಿಷ್ಟ ಎಂಬುದಾಗಿ ದರ್ಪದಿಂದ ಉತ್ತರಿಸಿದ್ದು, ಇದು ಅವರ ಅಸಭ್ಯ ನಡೆಯನ್ನು ತೋರಿಸುತ್ತದೆ. ಅಲ್ಲದೆ, ಮಾಡಿದ ತಪ್ಪಿಗೆ ಪಶ್ಚಾತಾಪ ಮಾಡಿಕೊಂಡಿಲ್ಲ ಎಂದು ಪೀಠ ತನ್ನ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
ಅನುಮತಿ ಇಲ್ಲದೆ ಬಳಕೆ ಮಾಡಿರುವ ಫೋಟೋಗಳನ್ನು ತಕ್ಷಣ ಸಾಮಾಜಿಕ ಜಾಲತಾಣಗಳಿಂದ ತೆರವುಗೊಳಿಸಬೇಕು. ದೂರುದಾರರಿಗೆ ಆಗಿರುವ ಮಾನಸಿಕ ತೊಂದರೆಗೆ ಪರಿಹಾರವಾಗಿ 10 ಸಾವಿರ ರೂ.ಗಳನ್ನು ಪಾವತಿ ಮಾಡಬೇಕು ಎಂದು ತಿಳಿಸಿದೆ.
ದೂರುದಾರರಿಗೆ ತಿಳಿಯದೆ ಮಾಡಿದ ತಪ್ಪಿಗೆ ಕ್ಷಮೆಯಾಚನೆ ಮಾಡಿ, ವಿವಾದವನ್ನು ನಯವಾಗಿ ಇತ್ಯರ್ಥಪಡಿಸಿಕೊಳ್ಳುವ ಬದಲು ಅಸಭ್ಯ ಪದಗಳಿಂದ ನಿಂದಿಸಿ ದೂರುದಾರರು ಗ್ರಾಹಕರ ವೇದಿಕೆಗೆ ಬರುವಂತೆ ಮಾಡಿದ ಪರಿಣಾಮ ಕಾನೂನು ವೆಚ್ಚವಾಗಿ 5 ಸಾವಿರ ರೂ. ಸೇರಿ ಒಟ್ಟು 15 ಸಾವಿರ ರೂ.ಗಳನ್ನು ಆದೇಶದ 30 ದಿನಗಳಲ್ಲಿ ಪಾವತಿ ಮಾಡಬೇಕು ಎಂದು ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಆದೇಶಿಸಿದೆ.
ಪ್ರಕರಣದ ವಿವರ: ದೂರುದಾರರು ತಮ್ಮ ಮದುವೆಗೆ ಮೇಕಪ್ ಮಾಡಿಸಿಕೊಳ್ಳುವುದಕ್ಕಾಗಿ ತನ್ನ ಸಹೋದರಿಯ ಮೂಲಕ ಪ್ರತಿವಾದಿ ಪ್ರಸಾದನ ಕಲಾವಿದೆಯವರನ್ನು ಸಂಪರ್ಕಿಸಿದ್ದರು. ಬಳಿಕ 27 ಸಾವಿರ ರೂ.ಗಳಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಮದುವೆ ತುಮಕೂರಿನಲ್ಲಿ ನಡೆದ ಪರಿಣಾಮ ಅವರಿಗೆ ಪ್ರಯಾಣ ಮತ್ತು ಉಳಿದುಕೊಳ್ಳುವುದಕ್ಕೆ ವ್ಯವಸ್ಥೆ ಮಾಡುವುದಕ್ಕೂ ಒಪ್ಪಿಕೊಳ್ಳಲಾಗಿತ್ತು. ಅದರಂತೆ ಅವರ ಸಂಪೂರ್ಣ ಮೊತ್ತವನ್ನು ದೂರುದಾರರು ಪಾವತಿ ಮಾಡಿದ್ದರು.
ಇದಾದ ಕೆಲ ದಿನಗಳ ಬಳಿಕ ದೂರುದಾರರ ಫೋಟೋಗಳು ಪ್ರತಿವಾದಿಯವರ ಇನ್ಸ್ಟಾಗ್ರಾಮ್ ಪುಟದಲ್ಲಿ ಕಾಣಿಸಿಕೊಂಡಿದ್ದವು. ಇದನ್ನು ಪ್ರಶ್ನಿಸಿದಾಗ ದರ್ಪದಿಂದ ಉತ್ತರಿಸಿದ್ದ ಅವರು, ನನ್ನ ಪುಟ ನನ್ನ ಇಷ್ಟ ಎಂಬುದಾಗಿ ಹೇಳಿದ್ದರು ಎಂದು ಆರೋಪಿಸಿ ದೂರುದಾರರು ತಮ್ಮ ಸಹೋದರಿಯ ಮೂಲಕ ಗ್ರಾಹಕರ ಪರಿಹಾರ ವೇದಿಕೆಗೆ ದೂರು ದಾಖಲಿಸಿದ್ದರು.
ಇದನ್ನೂ ಓದಿ: 43 ಗ್ರಾಹಕರ 100 ಖಾತೆಗಳಿಂದ ₹4.60 ಕೋಟಿ ಕದ್ದು ಷೇರು ಮಾರ್ಕೆಟ್ನಲ್ಲಿ ಹೂಡಿದ ಬ್ಯಾಂಕ್ ಮ್ಯಾನೇಜರ್