ದೊಡ್ಡಬಳ್ಳಾಪುರ: ತಾಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ತೆರಿಗೆ ಸಂಗ್ರಹದಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಗೆ ಮೇಲ್ದರ್ಜೆಗೇರಿದ್ದಾಗ ಬಾಶೆಟ್ಟಿಹಳ್ಳಿಯ ಆದಾಯ ಕೇವಲ 4 ಕೋಟಿ ರೂ ಇತ್ತು. ಇದಾದ ನಂತರದ ಮುಂದಿನ ನಾಲ್ಕು ವರ್ಷಗಳಲ್ಲಿ 15 ಕೋಟಿ ರೂ ತೆರಿಗೆ ಸಂಗ್ರಹಿಸಿದೆ. ಇದೀಗ 20 ಕೋಟಿ ರೂ ತೆರಿಗೆ ಸಂಗ್ರಹಿಸುವ ಗುರಿ ಹೊಂದಿದೆ. ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯನ್ನು ತನ್ನದೇ ಆದಾಯದಲ್ಲಿ ಅಭಿವೃದ್ಧಿ ಮಾಡಲು ಸ್ಥಳೀಯ ಶಾಸಕರು ಮತ್ತು ಇಲ್ಲಿನ ಅಧಿಕಾರಿ, ಸಿಬ್ಬಂದಿ ಶ್ರಮಿಸುತ್ತಿದ್ದಾರೆ.
ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಈ ಮೊದಲು ಗ್ರಾಮ ಪಂಚಾಯಿತಿ, 2021-22ರಲ್ಲಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿತ್ತು. ಆರಂಭದಲ್ಲಿ ಪಟ್ಟಣ ಪಂಚಾಯಿತಿಯ ಆದಾಯ 4 ಕೋಟಿ ರೂ ಇತ್ತು. ಆದರೆ, 2022-23ರಲ್ಲಿ 5.98 ಕೋಟಿ, 2023-24ರಲ್ಲಿ 7.44 ಕೋಟಿ, 2024-25ರಲ್ಲಿ 11.88 ಕೋಟಿ ತೆರಿಗೆ ಸಂಗ್ರಹವಾಗಿದೆ. ತೆರಿಗೆಯ ಜೊತೆಗೆ ಸೆಸ್ ಸೇರಿ 15 ಕೋಟಿ ರೂ ಆದಾಯ ಗಳಿಸಿದೆ. ತೆರಿಗೆ ಸಂಗ್ರಹವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಿದ್ದಲ್ಲಿ 20 ಕೋಟಿ ರೂ ಖಜಾನೆ ಸೇರಲಿದೆ.
ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ನರಸಿಂಹಮೂರ್ತಿ ಮಾತನಾಡಿ, "ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗಾರಿಕಾ ಪ್ರದೇಶವಿದೆ. ಇಲ್ಲಿನ ಎಲ್ಲಾ ಕಾರ್ಖಾನೆಗಳಿಗೆ ತೆರಿಗೆ ಕಟ್ಟುವಂತೆ ನೋಟಿಸ್ ನೀಡಿದ್ದೇವೆ. ತೆರಿಗೆ ಪಾವತಿ ಬಗ್ಗೆ ಜನರಲ್ಲಿ ಅರಿವು ಮೂಡಿಸಿದ್ದೇವೆ. ಎಲ್ಲಕ್ಕಿಂತ ಮಿಗಿಲಾಗಿ, ಇತ್ತೀಚೆಗೆ ಶಾಸಕ ಧೀರಜ್ ಮುನಿರಾಜ್ ಅವರು ದೊಡ್ಡಬಳ್ಳಾಪುರ ಕೈಗಾರಿಕಾ ಸಂಘದ ಅಧ್ಯಕ್ಷರು, ಸದಸ್ಯರೊಂದಿಗೆ ಸಭೆ ನಡೆಸಿ, ತೆರಿಗೆ ಪಾವತಿ, ತಾಲ್ಲೂಕಿನ ಅಭಿವೃದ್ಧಿಗಾಗಿ ಮೂಲಭೂತ ಸೌಕರ್ಯಾಭಿವೃದ್ಧಿ, ವ್ಯವಹಾರ ನೀತಿ, ಉದ್ಯೋಗ ಸೃಷ್ಟಿ ಸೇರಿದಂತೆ ಇನ್ನಿತರೆ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. ಇದರ ಫಲವಾಗಿ ಇಂದು ಇಷ್ಟರ ಮಟ್ಟಿಗೆ ತೆರಿಗೆ ಸಂಗ್ರಹಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ" ಎಂದರು.
"ತೆರಿಗೆ ಪಾವತಿಗೆ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಆನ್ ಲೈನ್ ಪಾವತಿಗೆ ವೆಬ್ ಸೈಟ್ ಕೂಡ ಜಾರಿ ಮಾಡಲಾಗಿದೆ. ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ತೆರಿಗೆ ಪಾವತಿಸಲು ಸೂಚಿಸಲಾಗಿತ್ತು. ಇದರಿಂದ ನಮಗೂ, ಜನರಿಗೆ ತುಂಬಾ ಅನುಕೂಲವಾಗಿದೆ" ಎಂದು ಅವರು ತಿಳಿಸಿದರು.

"ಕಾಲಕಾಲಕ್ಕೆ ತೆರಿಗೆ ಕಟ್ಟುವುದರಿಂದ ಆಗುವ ಉಪಯೋಗಗಳ ಬಗ್ಗೆ ಜನರಿಗೆ ಜಾಹೀರಾತು, ಪತ್ರಿಕಾ ಪ್ರಕಟಣೆ, ಆಸ್ತಿ ಮಾಲೀಕರ ಬಳಿ ಹೋಗಿ ನಾವು ಮತ್ತು ಸಿಬ್ಬಂದಿ ಅರಿವು ಮೂಡಿಸಿದ್ದೇವೆ. ತೆರಿಗೆ ಹಣದಲ್ಲಿ ಸಂಪೂರ್ಣ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಗೆ ಬರುವ ಎಲ್ಲಾ ಗ್ರಾಮಗಳಿಗೆ ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಅಭಿವೃದ್ದಿ ಮಾಡಲಾಗುತ್ತದೆ" ಎಂದು ಹೇಳಿದರು.
ಪಟ್ಟಣ ಪಂಚಾಯಿತಿಯ ಪ್ರಭಾರ ಕಂದಾಯ ನಿರೀಕ್ಷಕ ಶ್ರೀನಿವಾಸ್ ಮಾತನಾಡಿ, "ಪಟ್ಟಣ ಪಂಚಾಯಿತಿಗೆ ಕಡ್ಡಾಯವಾಗಿ ಪಾವತಿಸಬೇಕಾದ ಸ್ವಯಂಘೋಷಿತ ಆಸ್ತಿ ತೆರಿಗೆಯನ್ನು ಪ್ರತೀ ವರ್ಷದ ಪ್ರಾರಂಭದ ಏಪ್ರಿಲ್ ತಿಂಗಳಿನಲ್ಲಿ ಪಾವತಿಸಿದವರಿಗೆ ಶೇ.5ರಷ್ಟು ರಿಯಾಯಿತಿ ನೀಡಲಾಗುವುದು. ಜುಲೈ ತಿಂಗಳಿನಿಂದ ಪ್ರತಿ ತಿಂಗಳಿಗೆ ಶೇ.2ರಷ್ಟು ದಂಡ ವಿಧಿಸಿ ವಸೂಲಿ ಮಾಡಲಾಗುವುದು. ಆಸ್ತಿಗಳ ಮಾಲೀಕರುಗಳು ಪಟ್ಟಣ ಪಂಚಾಯಿತಿ ನೀಡಲಾಗುವ ಆಸ್ತಿ ತೆರಿಗೆ ನಮೂನೆ-2ರ ಮೂಲಕ ಅಥವಾ ಆಸ್ತಿ ಆನ್ ಲೈನ್ ವೆಬ್ ಸೈಟ್ www.bashettihalli.mrc.gov.in ಅನ್ನು ಉಪಯೋಗಿಸಿಕೊಂಡು ಸ್ವಯಂಘೋಷಿತ ಆಸ್ತಿ ತೆರಿಗೆ ಚಲನ್ ಪಡೆದು UPI APP ಅಥವಾ ಬ್ಯಾಂಕ್‌ನಲ್ಲಿ ತೆರಿಗೆ ಪಾವತಿಸುವ ಕುರಿತು ಜನರಿಗೆ ಅರಿವು ಮೂಡಿಸಲಾಗಿದೆ" ಎಂದು ಮಾಹಿತಿ ನೀಡಿದರು.
"ಆಸ್ತಿ ತೆರಿಗೆಯನ್ನು ಪ್ರತೀ ವರ್ಷ ಏಪ್ರಿಲ್ ತಿಂಗಳಲ್ಲಿ ಪಾವತಿಸಿದರೆ ಶೇ.5ರಷ್ಟು ರಿಯಾಯಿತಿ ನೀಡಲಾಗುವುದು. ಮೇ ಮತ್ತು ಜೂನ್ ತಿಂಗಳಲ್ಲಿ ದಂಡರಹಿತವಾಗಿ ಪಾವತಿಸಲು ಅವಕಾಶವಿದೆ. ಜುಲೈ ತಿಂಗಳಿಂದ ಪ್ರತಿ ತಿಂಗಳಿಗೆ ಶೇ.2 ರಷ್ಟು ದಂಡ ವಿಧಿಸಲಾಗುವುದು" ಎಂದರು.
ಶಾಸಕ ಧೀರಜ್ ಮುನಿರಾಜು ಪ್ರತಿಕ್ರಿಯಿಸಿ, "1993ರಲ್ಲಿ ಬಾಶೆಟ್ಟಿಹಳ್ಳಿಯಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಿದ್ದವು. ಆದರೆ ಈ ಕೈಗಾರಿಕೆಗಳಿಂದ ತೆರಿಗೆ ಸಂಗ್ರಹಿಸುವಲ್ಲಿ ಸ್ಥಳೀಯ ಆಡಳಿತ ವಿಫಲವಾಗಿತ್ತು. ನಾನು ಶಾಸಕನಾದ ನಂತರ ತೆರಿಗೆ ಸಂಗ್ರಹದ ಆಲೋಚನೆ ಮಾಡಲಾಯಿತು. ಈ ಬಗ್ಗೆ ಪೌರಾಡಳಿತ ಅಧಿಕಾರಿಗಳ ಜೊತೆ ಮಾತುಕತೆ ಮಾಡಿದೆವು. ಬಾಶೆಟ್ಟಿ ಹಳ್ಳಿ ಕೈಗಾರಿಕೆಗಳ ಮಾಲೀಕರು ಮತ್ತು ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಅಧಿಕಾರಿಗಳೊಂದಿಗೂ ಸಭೆ ನಡೆಸಿ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಯಿತು. ಇದೆಲ್ಲರ ಫಲವಾಗಿ ತೆರಿಗೆ ಸಂಗ್ರಹ ಏರಿಕೆಯಾಗಿದೆ" ಎಂದರು.
ಇದನ್ನೂ ಓದಿ: ದೊಡ್ಡಬಳ್ಳಾಪುರ: ತೂಬಗೆರೆಯ 8 ಹಲಸು ತಳಿಗಳಿಗೆ PPFRA ಪೇಟೆಂಟ್ - TUBAGERE JACKFRUIT GETS PATENT