ಬಳ್ಳಾರಿ/ಶಿವಮೊಗ್ಗ: ರಾಜ್ಯಾದ್ಯಂತ ಇಂದು ತ್ಯಾಗ ಬಲಿದಾನಗಳ ಸಂಕೇತವಾದ ಬಕ್ರೀದ್ ಹಬ್ಬವನ್ನು ಆಚರಿಸಲಾಗುತ್ತಿದೆ. ಬಳ್ಳಾರಿ ನಗರದಲ್ಲಿ ಮುಸ್ಲಿಂ ಬಾಂಧವರು ಶ್ರದ್ಧೆ ಭಕ್ತಿಯಿಂದ ಆಚರಿಸಿದರು.
ಮುಂಜಾನೆಯೇ ನಗರದ ಈದ್ಗಾ ಮೈದಾನದಲ್ಲಿ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಧರ್ಮ ಗುರುಗಳು ಹಬ್ಬದ ಸಂದೇಶ ಸಾರಿ, ಬಕ್ರೀದ್ ಹಬ್ಬದ ಆಚರಣೆ ಹಾಗೂ ದಾನ-ಧರ್ಮದ ಮಹತ್ವ ಕುರಿತು ಬೋಧನೆ ಮಾಡಿದರು. ಸಮಾಜದಲ್ಲಿ ಎಲ್ಲರೊಂದಿಗೆ ಸಹೋದರರಂತೆ ಬಾಳುವಂತೆ ಕರೆ ನೀಡಿದರು.
ಪ್ರಾರ್ಥನೆಯ ಬಳಿಕ ಮುಸ್ಲಿಂ ಬಾಂಧವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಸಾಮೂಹಿಕ ಪ್ರಾರ್ಥನೆಯಲ್ಲಿ ಶಾಸಕ ಭರತ್ ರೆಡ್ಡಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಅಲ್ಲಂ ಪ್ರಶಾಂತ್ ಟೋಪಿ ಧರಿಸಿ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು. ಬಳಿಕ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್, ಶಾಸಕ ಭರತ್ ರೆಡ್ಡಿ ಮುಸ್ಲಿಂ ಬಾಂಧವರಿಗೆ ಶುಭಾಶಯ ಕೋರಿದರು.

ಇನ್ನು ಸಾಮೂಹಿಕ ಪ್ರಾರ್ಥನೆಯಲ್ಲಿ ಮಕ್ಕಳು ಕೂಡ ಭಾಗಿಯಾಗಿ ನಮಾಜ್ ಮಾಡಿದರು. ಬಕ್ರೀದ್ ಹಬ್ಬದ ಹಿನ್ನೆಲೆ ಈದ್ಗಾ ಮೈದಾನದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ ಒದಗಿಸಲಾಗಿತ್ತು.
ಶಿವಮೊಗ್ಗದಲ್ಲಿ ಸಾಮೂಹಿಕ ಪ್ರಾರ್ಥನೆ: ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಮುಸ್ಲಿಂ ಬಾಂಧವರು ಅತ್ಯಂತ ಶ್ರದ್ದಾ- ಭಕ್ತಿಯಿಂದ ಆಚರಿಸಿದರು. ಬಕ್ರೀದ್ ಪ್ರಯುಕ್ತ ಶಿವಮೊಗ್ಗದ ಮುಸ್ಲಿಂ ಧರ್ಮಿಯರು ತಿಲಕ್ ನಗರದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಸಾಮೂಹಿಕ ಪ್ರಾರ್ಥನೆಯ ನಂತರ ಪರಸ್ಪರ ಶುಭಾಶಯ ಕೋರಿದರು. ನಂತರ ತಮ್ಮ ತಮ್ಮ ಮನೆಗಳಿಗೆ ತೆರಳಿ ಕುರ್ಬಾನಿ ನೀಡಿದರು. ಇಂದು ಎಲ್ಲರೂ ತಮ್ಮ ತಮ್ಮ ಸಂಬಂಧಿಕರ ಮನೆಗೆ ಭೇಟಿ ನೀಡಿ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ.
ಬಕ್ರೀದ್ ಹಬ್ಬದ ವಿಶೇಷ: ಪ್ರವಾದಿ ಇಬ್ರಾಹಿಂ ಅವರು ತಮ್ಮ ಪುತ್ರನನ್ನು ದೇವರಿಗೆ ಅರ್ಪಣೆ ಮಾಡಲು ಮುಂದಾದಾಗ ಮಹಮ್ಮದ್ ಪೈಗಂಬರರು ಇಬ್ರಾಹಿಂ ಪುತ್ರನನ್ನು ಬಲಿ ನೀಡದೆ ಕುರಿಯನ್ನು ಅರ್ಪಣೆ ಮಾಡುವಂತೆ ಹೇಳುತ್ತಾರೆ. ಆಗ ಕುರಿಯನ್ನು ಅರ್ಪಿಸಲಾತ್ತದೆ. ಅಂದಿನಿಂದ ಬಕ್ರೀದ್ ಹಬ್ಬವನ್ನು ಆಚರಿಸಲಾಗುತ್ತಿದೆ ಎಂಬ ಪ್ರತೀತಿ ಇದೆ.
ಬಕ್ರೀದ್ ಹಬ್ಬದಲ್ಲಿ ಮುಖ್ಯವಾಗಿ ಮುಸ್ಲಿಂರು ದಾನ ಧರ್ಮಗಳನ್ನು ಮಾಡುತ್ತಾರೆ. ಬಕ್ರೀದ್ನಲ್ಲಿ ನೀಡುವ ಬಲಿಯಲ್ಲಿ ಮೂರು ಭಾಗಗಳನ್ನು ಮಾಡಲಾಗುತ್ತದೆ. ಒಂದು ಭಾಗವನ್ನು ತಾವೇ ಇಟ್ಟುಕೊಂಡು, ಉಳಿದ ಎರಡು ಭಾಗಗಳಲ್ಲಿ ಒಂದು ಭಾಗವನ್ನು ಸಂಬಂಧಿಕರಿಗೆ ಹಾಗೂ ಇನ್ನೊಂದು ಭಾಗವನ್ನು ಅಶಕ್ತರಿಗೆ ನೀಡುತ್ತಾರೆ.
ಬಕ್ರೀದ್ ಹಿನ್ನೆಲೆ ಶಿವಮೊಗ್ಗ ಜಿಲ್ಲೆಯಾದ್ಯಂತ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದೆ.
ಇದನ್ನೂ ಓದಿ: ಬ್ರಿಟಿಷ್ ಸೇನಾಧಿಕಾರಿ ಸಮಾಧಿಗೆ ಸಿಗರೇಟ್, ಮದ್ಯ, ಮಾಂಸ ಅರ್ಪಿಸುವ ಭಕ್ತರು!; ಹೀಗೊಂದು ವಿಚಿತ್ರ ಆಚರಣೆ