ಶಿವಮೊಗ್ಗ: ಆರ್ಸಿಬಿ ವಿಜಯೋತ್ಸವದಲ್ಲಿ ಭಾಗಿಯಾಗಲು ಹೋಗಿ ಸಾವನ್ನಪ್ಪಿದವರ ಕುಟುಂಬಸ್ಥರ ಭಾವನೆ ತಿಳಿಸಲು ಸಿಎಂ ಸಿದ್ದರಾಮಯ್ಯ ಅವರಿಗೆ ಬಹಿರಂಗ ಪತ್ರ ಬರೆದಿರುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಹಿರಂಗ ಪತ್ರವನ್ನು ನಾನು ಸಿಎಂ ಸಿದ್ದರಾಮಯ್ಯ ತೇಜೋವಧೆ ಮಾಡಲು, ರಾಜಕೀಯ ಕಾರಣಕ್ಕೆ ಬರೆದಿಲ್ಲ. ರಾಜ್ಯದ ಹಾಗೂ ದೇಶದ ಜನರ ಭಾವನೆಯನ್ನು ನಾಡಿನ ದೊರೆಗೆ ತಿಳಿಸಬೇಕೆಂಬ ಉದ್ದೇಶದಿಂದ ಪತ್ರ ಬರೆದಿದ್ದೆನೆ. ಅಂದು ಪ್ರಾಣ ಕಳೆದುಕೊಂಡವರ ಕುಟುಂಬಸ್ಥರ ಭಾವನೆ ಸಿಎಂ, ಡಿಸಿಎಂ ಹಾಗೂ ರಾಜ್ಯ ಸರ್ಕಾರಕ್ಕೆ ಗೂತ್ತಾಗಬೇಕು ಎಂಬ ಕಾರಣಕ್ಕೆ ಪತ್ರ ಬರೆದಿದ್ದೇನೆ ಎಂದರು.
ಈ ಪತ್ರ ನೋಡಿದ ಕೊಡಲೇ ನನಗೆ ಸ್ಪಂದಿಸುತ್ತಾರೆಂಬ ವಿಶ್ವಾಸ ನನಗಿಲ್ಲ. ಇವರು ದಪ್ಪ ಚರ್ಮದವರು, ಇವರಿಗೆ ಏನೂ ನಾಟುವುದಿಲ್ಲ. ಇವರು ಅಧಿಕಾರದ ಹಪಹಪಿಯಲ್ಲಿದ್ದಾರೆ. ಈಗ ಸಿಎಂ ಹಾಗೂ ಡಿಸಿಎಂ ಅವರನ್ನು ಕಾಂಗ್ರೆಸ್ ಹೈಕಮಾಂಡ್ ದೆಹಲಿಗೆ ಕರೆಸಿಕೊಂಡಿದೆ. ಕಾಂಗ್ರೆಸ್ ಹೈಕಮಾಂಡ್ ಸಿಎಂ ಹಾಗೂ ಡಿಸಿಎಂ ರಾಜೀನಾಮೆ ಪಡೆಯುತ್ತಾರೆ ಎಂದು ನನಗೆ ಅನ್ನಿಸುವುದಿಲ್ಲ. ಹಿಂದೆ ಮುಡಾ ಹಗರಣದಲ್ಲಿ ಏನಾಗಿದೆ ಎಂಬುದನ್ನು ನೋಡಿದ್ದೇವೆ. ಸಿಎಂ ಹಾಗೂ ಡಿಸಿಎಂ ತಮ್ಮ ಸ್ಥಾನದಲ್ಲಿ ಮುಂದುವರೆದರೆ ರಾಜ್ಯದ ಮರ್ಯಾದೆ ಉಳಿಸಲ್ಲ ಎಂದು ವಾಗ್ದಾಳಿ ನಡೆಸಿದರು.
ಜೂನ್ 13 ರಂದು ರಾಜ್ಯ ಸರ್ಕಾರದ ವಿರುದ್ದ ಬೃಹತ್ ಪ್ರತಿಭಟನೆ: ಜನ ವಿರೋಧಿ ಸರ್ಕಾರದ ವಿರುದ್ಧ ಜೂನ್ 13 ರಂದು ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಸುಮಾರು 10 ರಿಂದ 13 ಸಾವಿರ ಜನ ಸೇರಲಿದ್ದಾರೆ. ಅದೇ ರೀತಿ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಸ್ಥರು ಭಾಗಿಯಾಗುವ ನಿರೀಕ್ಷೆ ಇದೆ. ಅಂದೇ ಸಿಎಂ ಮನೆಗೆ ಮುತ್ತಿಗೆ ಹಾಕುವವರಿದ್ದೇವೆ. ಜೂನ್ 16 ರಂದು ಎರಡನೇ ಹಂತದ ಹೋರಾಟ ಮಾಡಲಿದ್ದೇವೆ. ಹೋರಾಟದ ಮೂಲಕ ಜನ ವಿರೋಧಿ ಆಡಳಿತ ನಡೆಸಲು ಆಗದ ಅಯೋಗ್ಯ ಸರ್ಕಾರದ ವಿರುದ್ಧ ಹೋರಾಟವನ್ನು ಮಾಡಲು ತೀರ್ಮಾನ ಮಾಡಲಾಗಿದೆ ಎಂದರು.
ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು: ಕಾಲ್ತುಳಿತದ ದುರ್ಘಟನೆಯಲ್ಲಿ ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರು ಎ 1, ಎ 2 ಹಾಗೂ ಎ 3 ಆರೋಪಿಗಳು. ನಾವು ಹಾಲಿ ನ್ಯಾಯಾಧೀಶರಿಂದ ತನಿಖೆ ಮಾಡಿಸಿ ಎಂದರೆ, ಇವರು ತಮಗೆ ಬೇಕಾದ ರೀತಿ ವರದಿ ಪಡೆಯಲು ತನಿಖೆಗೆ ನಿವೃತ್ತ ನ್ಯಾಯಾಧೀಶರನ್ನು ನೇಮಕ ಮಾಡಿದ್ದಾರೆ. ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಬೇಕೆಂಬುದು ನಮ್ಮ ಬೇಡಿಕೆ ಎಂದರು.
ಇದನ್ನೂ ಓದಿ: ಹಿಂದೂ ಕಾರ್ಯಕರ್ತರಿಗೆ ತೊಂದರೆ ಕೊಟ್ಟರೆ ಬೀದಿಗಿಳಿದು ಹೋರಾಟ: ಬಿ ವೈ ವಿಜಯೇಂದ್ರ
ಇದನ್ನೂ ಓದಿ: ಸಿದ್ದರಾಮಯ್ಯ ಈಗ ಪೊಲೀಸ್ ವಿರೋಧಿಯಾಗಿದ್ದಾರೆ: ಪ್ರತಾಪ್ ಸಿಂಹ