ಶಿವಮೊಗ್ಗ: ರಾಜ್ಯ ಸರ್ಕಾರದ ವಿರುದ್ದ ಬಿಜೆಪಿಯ ಜನಾಕ್ರೋಶ ಯಾತ್ರೆ ಇಂದು ಬಿಜೆಪಿಯ ಶಕ್ತಿ ಕೇಂದ್ರ ಶಿವಮೊಗ್ಗದಲ್ಲಿ ನಡೆಯಿತು.
ಜನಾಕ್ರೋಶ ಯಾತ್ರೆಯ ವೇದಿಕೆ ಕಾರ್ಯಕ್ರಮ ಪ್ರಾರಂಭವಾಗುತ್ತಿದ್ದಂತೆಯೇ ಮಳೆ ಬಂದಿದ್ದರಿಂದ ಬಿಜೆಪಿ ಕಾರ್ಯಕರ್ತರು ತಲೆ ಮೇಲೆ ಚೇರ್ ಇಟ್ಟುಕೊಂಡು ನಿಂತುಕೊಂಡರು. ಶಿವಮೊಗ್ಗ ನಗರ ಶಾಸಕ ಎಸ್. ಎನ್. ಚನ್ನಬಸಪ್ಪ ತಮ್ಮ ಪ್ರಾಸ್ತಾವಿಕ ಭಾಷಣ ಬೇಗ ಮುಗಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರಿಗೆ ವೇದಿಕೆ ನೀಡಿದರು.
ಜೋರಾದ ಮಳೆ ನಡುವೆ ವಿಜಯೇಂದ್ರ ಭಾಷಣ: ವಿಜಯೇಂದ್ರ ತಮ್ಮ ಭಾಷಣವನ್ನು ಪ್ರಾರಂಭ ಮಾಡುತ್ತಿದ್ದಂತೆಯೇ ಮಳೆರಾಯ ಜೋರಾಗಿ ಸುರಿಯಲು ಪ್ರಾರಂಭಿಸಿದ. ಆದರೂ ಕುಗ್ಗದ ವಿಜಯೇಂದ್ರ ಅವರು ತಮ್ಮ ಭಾಷಣವನ್ನು ಮುಂದುವರೆಸಿದರು. ಮಳೆಯಲ್ಲಿಯೇ ರಾಜ್ಯ ಸರ್ಕಾರದ ವಿರುದ್ದ ಅಬ್ಬರಿಸಿದರು.
ಬಿಜೆಪಿ ಜನಪರ ಹೋರಾಟ ಮಾಡುತ್ತಿದೆ. ಮೈಸೂರಿನಿಂದ ನಮ್ಮ ಜನಾಕ್ರೋಶ ಪ್ರತಿಭಟನೆ ಆರಂಭವಾಗಿದೆ. ಶಿವಮೊಗ್ಗ ಜಿಲ್ಲೆಯ ಬಿ. ಎಸ್. ಯಡಿಯೂರಪ್ಪ ಹೋರಾಟದ ಕಿಚ್ಚು ಹೊತ್ತಿಸಿದ್ದಾರೆ. ಜನಾಕ್ರೋಶ ಯಾತ್ರೆ ಇಡೀ ರಾಜ್ಯಾದ್ಯಂತ ಸಂಚರಿಸಲಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಮುಸಲ್ಮಾನರ ಓಲೈಕೆ ಮಾಡುತ್ತಿದೆ. ಮೂರು ಕಾರಣಗಳಿಗೆ ಜನಾಕ್ರೋಶ ವ್ಯಕ್ತವಾಗುತ್ತಿದೆ. ಹಿಂದೂಗಳಿಗೆ ಅಪಮಾನ ಮಾಡುವ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿದೆ ಎಂದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಜನಾಂಗದ ಹಣ ಲೂಟಿ ಹೊಡೆಯುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಲೇವಡಿ ಮಾಡುತ್ತಿದ್ದಾರೆ ಎಂದರು.
ಬಿಜೆಪಿಯವರಿಗೆ ಕಾಂಗ್ರೆಸ್ ಹಾಗೂ ಸಿಎಂ ವಿರುದ್ಧ ಹೊಟ್ಟೆ ಉರಿ. ಹಾಗಾಗಿ ಜನಾಕ್ರೋಶ ಸಭೆ ನಡೆಸುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ ಎಂದು ನಮಗೆ ಹೊಟ್ಟೆ ಉರಿ ಎಂದು ಹೇಳುತ್ತಿದ್ದಾರೆ. ಈಗಾಗಲೇ ಜನಾಕ್ರೋಶ ಪ್ರತಿಭಟನೆಯ ಬಿಸಿ ಕಾಂಗ್ರೆಸ್ಗೆ ತಟ್ಟಿದೆ. 50 ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದೆ. ಸಿದ್ಧರಾಮಯ್ಯ ಸರ್ಕಾರ ಬಂದ ಬಳಿಕ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಈಗಾಗಲೇ ಪೆಟ್ರೋಲ್ ಬೆಲೆ 3.50 ರೂ. ಏರಿಕೆ ಮಾಡಿದ್ದಾರೆ. ಡೀಸೆಲ್ ಬೆಲೆ 5 ರೂ. ಏರಿಸಿದ್ದಾರೆ. ಇದರ ಪರಿಣಾಮ ಜನಸಾಮಾನ್ಯರು ಎದುರಿಸುತ್ತಿದ್ದಾರೆ ಎಂದು ಹೇಳಿದರು.
ಸರ್ಕಾರಿ ನೌಕರರಿಗೆ ಸಂಬಳ ನೀಡಿಲ್ಲ: ರೈತ ಹೊಲದಲ್ಲಿ ಟ್ರ್ಯಾಕ್ಟರ್, ಮೋಟಾರ್ ಓಡಿಸಲು ಯೋಚಿಸಬೇಕಿದೆ. ಹಾಲಿನ ದರ 9 ರೂ ಏರಿಸಿದ್ದಾರೆ. ತೈಲ ಬೆಲೆ ವಿರುದ್ಧ ಈಗ ಕಾಂಗ್ರೆಸ್ ಸರ್ಕಾರ ಹೋರಾಟ ಮಾಡುತ್ತಿದೆ. ಡೀಸೆಲ್ ದುಬಾರಿಯಾಗಿದೆ. ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸರ್ಕಾರಿ ನೌಕರರಿಗೆ ಸಂಬಳ ನೀಡಿಲ್ಲ. 1ನೇ ತಾರೀಖಿನಂದು ಪೊಲೀಸರಿಗೆ ಸಂಬಳವಾಗಬೇಕಿತ್ತು. ಆದರೆ, ಇದುವರೆಗೂ ಸಂಬಳವಾಗಿಲ್ಲ. ಕಾಂಗ್ರೆಸ್ ಸರ್ಕಾರ ಕೇವಲ ಮುಸಲ್ಮಾನರ ಓಲೈಕೆ ಮಾಡುತ್ತಿದೆ. ಮುಸಲ್ಮಾನ್ ಬಡ ಹೆಣ್ಣುಮಕ್ಕಳು ಮದುವೆ ಮಾಡಿದರೆ 50 ಸಾವಿರ ನೀಡುತ್ತಾರಂತೆ. ಯಾಕೆ ನಮ್ಮ ಹಿಂದೂ ಹೆಣ್ಣುಮಕ್ಕಳು ಏನು ಮಾಡಿದ್ದರು. ನಮ್ಮ ಹಿಂದೂ ಬಡ ಹೆಣ್ಣುಮಕ್ಕಳು ಕಾಣುತ್ತಿಲ್ಲವೇ. ಮುಸಲ್ಮಾನ್ ವಿದ್ಯಾರ್ಥಿಗಳು ವಿದೇಶಕ್ಕೆ ಹೊರಟರೆ 20 ರಿಂದ 50 ಲಕ್ಷ ರೂ. ನೀಡುತ್ತಾರಂತೆ. ಸಿದ್ಧರಾಮಯ್ಯನವರೇ ನಿಮಗೆ ನಮ್ಮ ಹಿಂದೂ ವಿದ್ಯಾರ್ಥಿಗಳು ಕಾಣುತ್ತಿಲ್ಲವಾ? ಎಂದು ಪ್ರಶ್ನಿಸಿದರು.
ಜನಸಾಮಾನ್ಯರ ಮೇಲೆ ಹೊರೆ ಹೇರಿಲ್ಲ : ಕಚ್ಚಾ ತೈಲ ಬೆಲೆ ಏರಿಕೆಯಾಗಿದ್ದರೂ ಕೂಡ ನಮ್ಮ ಪ್ರಧಾನಿ ಮೋದಿಯವರು ಇದನ್ನ ಜನಸಾಮಾನ್ಯರ ಮೇಲೆ ಹೊರೆ ಹೇರಿಲ್ಲ. ಬಡವರ, ರೈತ, ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ ಕಿತ್ತೊಗೆಯಲು ಜನರು ಬಯಸಿದ್ದಾರೆ. ಜನವಿರೋಧಿ ಮುಖ್ಯಮಂತ್ರಿ ಬಂಡವಾಳ ಬಯಲು ಮಾಡಲು ಬಿಜೆಪಿ ಹೊರಟಿದೆ ಎಂದು ಹೇಳಿದರು.
ಜನರು ಈ ಸರ್ಕಾರವನ್ನು ಕಿತ್ತೊಗೆಯಲು ಬಯಸಿದ್ದಾರೆ. ಇಂತಹ ಸುರಿಯುತ್ತಿರುವ ಮಳೆಯಲ್ಲೂ ಕೂಡ ನಮಗೆ ಜನ ಬೆಂಬಲ ಸಿಕ್ಕಿರುವುದು ಮತ್ತಷ್ಟು ಶಕ್ತಿ ಬಂದಿದೆ. ಈ ವೇಳೆ ಸಂಸದರಾದ ಗೋವಿಂದ ಕಾರಜೋಳ, ಕೋಟಾ ಶ್ರೀನಿವಾಸ ಪೂಜಾರಿ ಸೇರಿದಂತೆ ಅನೇಕರು ಹಾಜರಿದ್ದರು.
ಇದನ್ನೂ ಓದಿ : ರಾಜ್ಯ ಸರ್ಕಾರ ಹಣಕಾಸಿನ ಬಿಕ್ಕಟ್ಟಿನಿಂದ ಬೆಲೆ ಏರಿಕೆ ಮಾಡುತ್ತಿದೆ : ಬಿ. ವೈ. ವಿಜಯೇಂದ್ರ - BJP STATE PRESIDENT B Y VIJAYENDRA