ವಿಶೇಷ ವರದಿ: ವಿನೋದ್ ಪುದು
ಮಂಗಳೂರು: ಮೈಕ್ರೊಗ್ರೀನ್ ಅಂದರೆ ಹಸಿರು ಸಸ್ಯಗಳ ಎಳೆ ಚಿಗುರು. ಈ ಹಸಿರು ಚಿಗುರನ್ನು ಖಾದ್ಯಗಳಿಗೆ ಬೆರೆಸುವುದು, ಇಲ್ಲವೇ ಅಲಂಕಾರ ಮಾಡಿ ಸೇವಿಸಲು ನೀಡಲಾಗುತ್ತದೆ. ಇದನ್ನು ಸಣ್ಣ ಕುಂಡಗಳಲ್ಲಿ ಕೇವಲ ಎರಡು ಇಂಚಿನಷ್ಟು ಎತ್ತರಕ್ಕೆ ಬೆಳೆಸಿ, ನಂತರ ಬಳಕೆ ಮಾಡಲಾಗುತ್ತದೆ. ಇಂತಹ ಅಪರೂಪದ ಮೈಕ್ರೊಗ್ರೀನ್ ಅನ್ನು ಮಂಗಳೂರಿನ ಆಯುರ್ವೇದ ವೈದ್ಯೆಯೊಬ್ಬರು ಬೆಳೆದು ಸೈ ಎನಿಸಿಕೊಂಡಿದ್ದಾರೆ.
ಹೌದು, ಮಂಗಳೂರಿನ ಕದ್ರಿಯಲ್ಲಿರುವ ಸಂಜೀವಿನಿ ಆಯುರ್ವೇದಿಕ್ ಕ್ಲಿನಿಕ್ನ ಆಯುರ್ವೇದ ವೈದ್ಯೆ ಡಾ.ಮೀರಾ ಅವರು ತಮ್ಮ ಆಸ್ಪತ್ರೆಯ ಒಂದು ಕೋಣೆಯನ್ನು ಮೈಕ್ರೋಗ್ರೀನ್ ಬೆಳೆಯುವ ಜಾಗವನ್ನಾಗಿ ಪರಿವರ್ತಿಸಿದ್ದಾರೆ. ಈ ಕೋಣೆಯಲ್ಲಿ ಅವರು ರಾಡಿಷ್ ಪಿಂಕ್, ರಾಡಿಷ್ ವೈಟ್, ಬೊಕ್ಚಾಯ್, ಮಸ್ಟರ್ಡ್ ಗ್ರೀನ್ ಮತ್ತು ಬ್ರೊಕೊಲಿ ಎಂಬ ಮೈಕ್ರೋಗ್ರೀನ್ ಸಸ್ಯಗಳನ್ನು ಬೆಳೆಸುತ್ತಿದ್ದಾರೆ. ವಿವಿಧ ತಳಿಯ ಮೈಕ್ರೋಗ್ರೀನ್ಗಳನ್ನು ಬೆಳೆಸುವ ಮೂಲಕ, ರೋಗಿಗಳಿಗೆ ತಾಜಾ, ಸಾವಯವ ಆಹಾರ ಪೂರೈಕೆ ಮಾಡುತ್ತಿದ್ದಾರೆ. ಅಲ್ಲದೆ, ವೈವಿಧ್ಯಮಯ ರುಚಿಗಳು ಮತ್ತು ಪೌಷ್ಟಿಕಾಂಶಗಳನ್ನು ಒದಗಿಸುತ್ತಿದ್ದಾರೆ. ರೋಗಿಗಳಿಗೆ ವೈಯಕ್ತಿಕ ಆಯುರ್ವೇದ ಚಿಕಿತ್ಸಾ ವಿಧಾನಗಳ ಮೂಲಕ ನೀಡುತ್ತಾರೆ.
ಈ ಪೌಷ್ಟಿಕ ಗಿಡಮೂಲಿಕೆಗಳನ್ನು ತಮ್ಮ ರೋಗಿಗಳಿಗೆ ಆಹಾರದ ಭಾಗವಾಗಿ ನೀಡುತ್ತಿದ್ದಾರೆ. ಈ ಮೂಲಕ ಆಯುರ್ವೇದದ ಸಾಂಪ್ರದಾಯಿಕ ತತ್ವಗಳನ್ನು ಆಧುನಿಕ ಪೌಷ್ಟಿಕ ವಿಜ್ಞಾನದೊಂದಿಗೆ ಸಂಯೋಜಿಸಿ, ಕ್ಯಾನ್ಸರ್ ತಡೆಗಟ್ಟುವಿಕೆ, ಫ್ಯಾಟಿ ಲಿವರ್ ಮತ್ತು ಕೊಲೆಸ್ಟ್ರಾಲ್ ನಿರ್ವಹಣೆಯಂತಹ ಗಂಭೀರ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟುವ ಪ್ರಯತ್ನ ಮಾಡುತ್ತಿದ್ದಾರೆ.
ಆಸ್ಪತ್ರೆಯ ಕೋಣೆಯಲ್ಲಿ ಮೈಕ್ರೋಗ್ರೀನ್ಗಳನ್ನು ಬೆಳೆಸಲು ಕನಿಷ್ಠ ಸ್ಥಳ ಸಾಕು, ಇದು ಇತರ ಕ್ಲಿನಿಕ್ಗಳಿಗೂ ಮಾದರಿಯಾಗಿದೆ. ಮೈಕ್ರೋಗ್ರೀನ್ ಪ್ರಯೋಜನ, ಸಾಮರ್ಥ್ಯದ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಮೀರಾ ಅವರ ಈ ಪ್ರಯತ್ನದ ಉದ್ದೇಶವಾಗಿದೆ.

ಮೈಕ್ರೋಗ್ರೀನ್ ಎಂದರೇನು? ಮೈಕ್ರೋಗ್ರೀನ್ ಎಂದರೆ ತರಕಾರಿಗಳು ಮತ್ತು ಗಿಡಮೂಲಿಕೆ ಗಿಡಗಳ ಚಿಗುರುಗಳಾಗಿದೆ. ಸಾಮಾನ್ಯವಾಗಿ ಮೊಳಕೆಯೊಡೆದ 7ರಿಂದ 14 ದಿನಗಳ ಒಳಗೆ, 2ರಿಂದ 4 ಇಂಚು ಎತ್ತರಕ್ಕೆ ಬೆಳೆದಾಗ ಕೊಯ್ಯಲಾಗುತ್ತದೆ. ಪಕ್ವಗೊಂಡ ಗಿಡಗಳಿಗಿಂತ ಇವು ಅಧಿಕ ಪೌಷ್ಟಿಕಾಂಶಗಳನ್ನು ಹೊಂದಿರುತ್ತವೆ. ಡಾ. ಮೀರಾ ಅವರು ರಾಡಿಷ್ ಪಿಂಕ್, ರಾಡಿಷ್ ವೈಟ್, ಬೊಕ್ಚಾಯ್, ಮಸ್ಟರ್ಡ್ ಗ್ರೀನ್ ಮತ್ತು ಬ್ರೊಕೊಲಿಯಂತಹ ವಿವಿಧ ತಳಿಗಳನ್ನು ಆಸ್ಪತ್ರೆಯ ಕೋಣೆಯಂತಹ ಸಣ್ಣ ಸ್ಥಳಗಳಲ್ಲಿ ಬೆಳೆಯುತ್ತಿದ್ದಾರೆ. ಇದಕ್ಕೆ ಬೇಕಾದ ವಾತಾವರಣ ಮತ್ತು ಬೆಳಕಿನ ವ್ಯವಸ್ಥೆಯನ್ನೂ ಮಾಡಿದ್ದಾರೆ. ಮೈಕ್ರೋಗ್ರೀನ್ಳು ಮೊಳಕೆಗಳಿಗಿಂತ ಭಿನ್ನವಾಗಿರುತ್ತವೆ, ಏಕೆಂದರೆ ಇವುಗಳನ್ನು ಮೊದಲ ಎರಡು ಎಲೆಗಳು ಬೆಳೆದ ಕೂಡಲೇ ಕೊಯ್ಯಲಾಗುತ್ತದೆ. ಈ ಹಂತದಲ್ಲಿ ಅವುಗಳು ಅಧಿಕ ಪೌಷ್ಟಿಕಾಂಶ ಹೊಂದಿರುತ್ತವೆ. ಇವುಗಳನ್ನು ಸಲಾಡ್ಗಳು ಅಥವಾ ಅಲಂಕಾರಕ್ಕೆ ಬಳಸಲಾಗುತ್ತದೆ.

ಮೈಕ್ರೋಗ್ರೀನ್ನ ಆರೋಗ್ಯ ಪ್ರಯೋಜನಗಳು: ಮೈಕ್ರೋಗ್ರೀನ್ಗಳನ್ನು ಅವುಗಳ ಅಧಿಕ ಪೌಷ್ಟಿಕಾಂಶದಿಂದಾಗಿ ''ಸೂಪರ್ ಫುಡ್'' ಎಂದೇ ಕರೆಯಲಾಗುತ್ತದೆ. ಇವು ಪಕ್ವಗೊಂಡ ಗಿಡಗಳಿಗಿಂತ ಹೆಚ್ಚಿನ ಪ್ರಮಾಣದ ವಿಟಮಿನ್ಗಳು, ಖನಿಜಗಳು ಮತ್ತು ಆಂಟಿಆಕ್ಸಿಡೆಂಟ್ಗಳನ್ನು ಹೊಂದಿರುತ್ತವೆ. ಸಂಶೋಧನೆಯ ಪ್ರಕಾರ, ಮೈಕ್ರೋಗ್ರೀನ್ ಪಕ್ವಗೊಂಡ ಗಿಡಗಳಿಗಿಂತ 40 ಪಟ್ಟು ಹೆಚ್ಚು ಪೌಷ್ಟಿಕಾಂಶವನ್ನು ಹೊಂದಿರಬಹುದು ಎನ್ನುತ್ತಾರೆ ಡಾ. ಮೀರಾ ಅವರು.

ಪ್ರಮುಖ ಪ್ರಯೋಜನಗಳು:
1. ಬ್ರೊಕೊಲಿ ಮತ್ತು ರಾಡಿಷ್ನಂತಹ ಮೈಕ್ರೋಗ್ರೀನ್ಗಳು ಸಲ್ಫೊರಾಫೇನ್ ಮತ್ತು ಗ್ಲೂಕೋಸಿನೊಲೇಟ್ಗಳಂತಹ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ. ಇವು ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತದ ನಿರ್ಮೂಲನೆಗೆ ಸಹಕಾರಿಯಾಗಿವೆ.
2. ಕ್ಯಾನ್ಸರ್ ತಡೆಗಟ್ಟುವಿಕೆ: ಅಧ್ಯಯನಗಳ ಪ್ರಕಾರ ಬ್ರೊಕೊಲಿಯಂತಹ ಕ್ರೂಸಿಫೆರಸ್ ಮೈಕ್ರೋಗ್ರೀನ್ಗಳಲ್ಲಿ ಕಾರ್ಸಿನೋಜೆನ್ಗಳನ್ನು ತಟಸ್ಥಗೊಳಿಸುವ ಮೂಲಕ ಮತ್ತು ಗೆಡ್ಡೆಯ ಬೆಳವಣಿಗೆಯನ್ನು ತಡೆಯುವ ಮೂಲಕ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು.
3. ಹೃದಯ ಆರೋಗ್ಯ: ಮೈಕ್ರೋಗ್ರೀನ್ ಸೇವನೆಯಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ, ಹೃದಯದ ಆರೋಗ್ಯ ಸುಧಾರಿಸಬಹುದು.
4. ಯಕೃತ್ ಆರೋಗ್ಯ: ಮೈಕ್ರೋಗ್ರೀನ್ಗಳಲ್ಲಿರುವ ಹೆಚ್ಚಿನ ಫೈಬರ್, ಕೊಬ್ಬಿನ ಯಕೃತ್ ರೋಗವನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು.
5. ಪೌಷ್ಟಿಕಾಂಶ: ವಿಟಮಿನ್ಗಳು (A, B, C, D, E, K), ಖನಿಜಗಳು (ಕಬ್ಬಿಣ, ಸತು, ಮೆಗ್ನೀಸಿಯಮ್) ಮತ್ತು ಫೈಟೊನ್ಯೂಟ್ರಿಯೆಂಟ್ಗಳಿಂದ ಮೈಕ್ರೋಗ್ರೀನ್ ಸಮೃದ್ದವಾಗಿರುತ್ತದೆ.

ಹಲವಾರು ವೈಜ್ಞಾನಿಕ ಅಧ್ಯಯನ: ಮೈಕ್ರೋಗ್ರೀನ್ಗಳ ಆರೋಗ್ಯ ಪ್ರಯೋಜನಗಳನ್ನು, ವಿಶೇಷವಾಗಿ ರೋಗ ತಡೆಗಟ್ಟುವಿಕೆಯಲ್ಲಿ ಅವುಗಳ ಪಾತ್ರಗಳ ಬಗ್ಗೆ ಹಲವಾರು ವೈಜ್ಞಾನಿಕ ಅಧ್ಯಯನಗಳು ನಡೆದಿವೆ. ಮೈಕ್ರೋಗ್ರೀನ್ಗಳ ಬಗ್ಗೆ ಹೆಚ್ಚಿನವರಿಗೆ ತಿಳುವಳಿಕೆ ಇಲ್ಲ. ಇದು ಕೇವಲ ರುಚಿಗಾಗಿ ಬಳಸುವ ಆಹಾರವಲ್ಲ, ಆರೋಗ್ಯಕರ ಆಹಾರವಾಗಿದೆ. ಸಾಮಾನ್ಯ ಜನರೂ ಇದರ ಲಾಭ ಪಡೆಯಬೇಕೆಂದು ನಾನು ಇದನ್ನು ಬೆಳೆಯಲು ಆರಂಭಿಸಿದ್ದೇನೆ ಎಂದು ಡಾ. ಮೀರಾ ತಿಳಿಸಿದರು.
ಅಲ್ಲದೆ, ಜನರಿಗೆ ಆರೋಗ್ಯಕರ ಆಹಾರ ಪದ್ಧತಿಗಳನ್ನು ಅಳವಡಿಸಿಕೊಳ್ಳುವತ್ತ ಪ್ರೇರೇಪಣೆ ನೀಡುತ್ತಿದ್ದಾರೆ. ತಮ್ಮ ರೋಗಿಗಳಿಗೆ ನೈಸರ್ಗಿಕ ಪರಿಹಾರ ಕಂಡುಕೊಳ್ಳುವ ಅವರ ಅಮೂಲ್ಯ ಕಾಳಜಿ, ಪ್ರಯತ್ನವು ಇತರರಿಗೆ ಮಾದರಿಯಾಗಿದೆ.

ಇದನ್ನೂ ಓದಿ: ಖಾಸಗಿ ಕೆಲಸ ಬಿಟ್ಟು ಕೃಷಿಯಲ್ಲಿ ಶ್ರಮ ಜೀವನ: ವೈವಿಧ್ಯಮಯ ಹಣ್ಣುಗಳನ್ನು ಬೆಳೆದು ಲಕ್ಷಾಂತರ ರೂ. ಆದಾಯ ಗಳಿಸುತ್ತಿರುವ ಯುವ ರೈತ
ಈ ಬಗ್ಗೆ ಮಾತನಾಡಿರುವ ಡಾ.ಮೀರಾ ಅವರು ''ನನ್ನ ಹಲವು ರೋಗಿಗಳು ಕ್ಯಾನ್ಸರ್ ಕಾಯಿಲೆಯ ಬಗ್ಗೆ ಆತಂಕ ಹೊಂದಿದ್ದರು. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕೆಂದು ಪೂರಕ ಆಹಾರವಾಗಿ ಏನಾದರೂ ಮಾಡಬೇಕೆಂದಾಗ ಮೈಕ್ರೋಗ್ರೀನ್ ಬಗ್ಗೆ ನನಗೆ ಮಾಹಿತಿ ಸಿಕ್ಕಿತು. ಕ್ಯಾನ್ಸರ್ ರೋಗಿಗಳಿಗೆ, ಮುಂದೆ ಈ ರೋಗವನ್ನು ತಡೆಗಟ್ಟಲು, ಫ್ಯಾಟಿ ಲಿವರ್ನಿಂದ ಕೊಲೆಸ್ಟ್ರಾಲ್ವರೆಗಿನ ಸಮಸ್ಯೆಗಳನ್ನು ನಿಯಂತ್ರಿಸಲು ಮೈಕ್ರೋಗ್ರೀನ್ ಉಪಯುಕ್ತವೆಂದು ತಿಳಿದುಕೊಂಡೆನು. ಮೈಕ್ರೋಗ್ರೀನ್ ಬಗ್ಗೆ ಹೆಚ್ಚಿನವರಿಗೆ ತಿಳುವಳಿಕೆ ಇಲ್ಲ. ಇದು ನಾಲಿಗೆಗೆ ರುಚಿಕರವಲ್ಲ, ಆದರೆ ಆರೋಗ್ಯಕರ ಆಹಾರ. ಹಿಂದೆಲ್ಲ ಇದು ಶ್ರೀಮಂತರಿಗೆ ಮಾತ್ರ ಕೈಗೆಟಕುವ ಸಂದರ್ಭವಿತ್ತು. ಆದರೀಗ, ಸಾಮಾನ್ಯ ಜನರೂ ಇದರ ಲಾಭವನ್ನು ಪಡೆಯಬೇಕೆಂದು ನಾನೇ ಬೆಳೆಯಲು ಆರಂಭಿಸಿದೆ" ಎನ್ನುತ್ತಾರೆ.

ಇದನ್ನೂ ಓದಿ: ಭಾರತದಲ್ಲೂ ಬೇಡಿಕೆ ಹೆಚ್ಚಿಸಿಕೊಂಡ ಮೆಕಡೇಮಿಯಾ! ಕೇವಲ 4 ವರ್ಷಕ್ಕೆ ಫಲ ನೀಡುವ ಮೆಕಡೇಮಿಯಾ ಕೃಷಿ ಬಗ್ಗೆ ನಿಮಗೆಷ್ಟು ಗೊತ್ತು?