ಮಂಗಳೂರು: ಬೇಸಿಗೆ ತಾಪಮಾನ ಹೆಚ್ಚಳದ ನಡುವೆ ಮದುವೆ ಸೀಸನ್ ಆರಂಭವಾಗಿದ್ದು, ಈ ಬಾರಿ ಏಪ್ರಿಲ್ ಮೇ ತಿಂಗಳಲ್ಲಿ ಹಲವರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಏಪ್ರಿಲ್ ಮೇ ತಿಂಗಳೆಂದರೆ ಬಿರು ಬೇಸಿಗೆಯ ಸಮಯ. ಬಿಸಿಲ ಬೇಗೆಗೆ ಹೊರಗೆ ಕಾಲಿಡಲು ಅಸಾಧ್ಯವಾದ ಪರಿಸ್ಥಿತಿ ಇರುತ್ತದೆ. ಇನ್ನೊಂದೆಡೆ ಶಾಲಾ ಮಕ್ಕಳಿಗೆ ರಜೆಯ ಸಮಯ, ಮತ್ತೊಂದೆಡೆ ಮದುವೆ ಸಮಾರಂಭಕ್ಕೆ ಸೂಕ್ತ ಸಮಯ. ಈ ಎಲ್ಲ ಕಾರಣಗಳಿಂದ ಬಿರು- ಬೇಸಿಗೆಯ ನಡುವೆ ಮದುವೆಯ ಅಬ್ಬರ ಹೆಚ್ಚಿರುತ್ತದೆ. ಪ್ರತಿ ವರ್ಷದಂತೆ ಈ ಬಾರಿಯು ಮದುವೆಯ ಅಬ್ಬರ ಈ ಎರಡು ತಿಂಗಳಲ್ಲಿ ಹೆಚ್ಚಿದೆ. ಇದಕ್ಕೆ ತಕ್ಕಂತೆ ಮುಹೂರ್ತಗಳು ಈ ಸಂದರ್ಭದಲ್ಲಿ ಹೆಚ್ಚು ಕೂಡಿ ಬಂದಿರುವುದರಿಂದ ಹಲವರು ದಾಂಪತ್ಯ ಜೀವನಕ್ಕೆ ಕಾಲಿಡಲು ಈ ಸಮಯವನ್ನು ಆಯ್ದುಕೊಳ್ಳುತ್ತಾರೆ.
ಏಪ್ರಿಲ್ ಮೇ ತಿಂಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಇರುತ್ತದೆ. ಮದುವೆ ಸಂದರ್ಭದಲ್ಲಿ ಮಕ್ಕಳು ಹಿರಿಯರೆನ್ನದೇ ಪಾಲ್ಗೊಳ್ಳುತ್ತಾರೆ. ಮಕ್ಕಳಿಗಂತೂ ಮದುವೆ ಸಂದರ್ಭದಲ್ಲಿ ಓಡಾಡುವ ಸಂಭ್ರಮ. ಇದಕ್ಕಾಗಿ ಮದುವೆ ದಿನಾಂಕವನ್ನು ಮಕ್ಕಳು ರಜೆಯಲ್ಲಿರುವ ಸಮಯವನ್ನು ನೋಡಿಯೇ ನಿರ್ಧರಿಸುತ್ತಾರೆ. ಈ ಕಾರಣದಿಂದ ಏಪ್ರಿಲ್ ಮೇ ತಿಂಗಳಲ್ಲಿ ಮದುವೆ ಸಮಾರಂಭಗಳು ಹೆಚ್ಚಾಗಿ ನಡೆಯುತ್ತದೆ.
ಈ ಬಾರಿ ಏಪ್ರಿಲ್ ಮೇ ತಿಂಗಳಲ್ಲಿ ಇದೇ ಉತ್ತಮ ಮುಹೂರ್ತ: ಈ ಬಾರಿಯ ಏಪ್ರಿಲ್ ಮೇ ತಿಂಗಳಲ್ಲಿ ಉತ್ತಮ ಮುಹೂರ್ತವಿದೆ. ನವ ಜೀವನಕ್ಕೆ ಕಾಲಿಡುವ ವಧು ವರರ ರಾಶಿಗೆ ತಕ್ಕಂತೆ ದಿನಗಳು ಲಭ್ಯ ಇದೆ. ಮಂಗಳವಾರ, ಶನಿವಾರ, ಅಮಾವಾಸ್ಯೆ ಹೊರತುಪಡಿಸಿ ಉಳಿದ ದಿನಗಳು ಮದುವೆ ಸಮಾರಂಭಕ್ಕೆ ಸೂಕ್ತವಾಗಿದೆ. ಇದರಲ್ಲಿಯು ಈ ಬಾರಿ ಏಪ್ರಿಲ್ 29, 30 ಮತ್ತು ಮೇ 1 ಅತ್ಯುತ್ತಮ ದಿನವಾಗಿದೆ.
ಈ ಬಗ್ಗೆ ಮಾತನಾಡಿದ ಜ್ಯೋತಿಷಿ ಗಂಗಾಧರ ಶಾಂತಿ, "ಈ ವರ್ಷ ಮಾರ್ಚ್ನಲ್ಲಿ ಸಂವತ್ಸರ ಬದಲಾವಣೆ ಆಯಿತು. ಮಾರ್ಚ್ 29ರ ನಂತರದಿಂದ ನವೆಂಬರ್ ತನಕ ಮದುವೆಗೆ ದಿನಾಂಕಗಳು ಚೆನ್ನಾಗಿದೆ. ಡಿಸೆಂಬರ್ನಿಂದ ಫೆಬ್ರವರಿ ತನಕ ಮೌಢ್ಯ ಇರುವುದರಿಂದ ಈ ಸಂದರ್ಭದಲ್ಲಿ ಮದುವೆ ಸಮಾರಂಭ ನಡೆಯುವುದಿಲ್ಲ".
"ಏಪ್ರಿಲ್ ಮೇ ಚೈತ್ರ ಮಾಸ ಆಗಿರುವುದರಿಂದ ಮದುವೆಗೆ ಯಾವುದೇ ತೊಂದರೆ ಇಲ್ಲ. ಏಪ್ರಿಲ್, ಮೇಯಲ್ಲಿ ಉತ್ತಮ ದಿನ ಇದೆ. ಏಪ್ರಿಲ್ 29, 30, ಮೇ1 ತನಕ ಅಕ್ಷಯ ತದಿಗೆ. ಇದು ಒಳ್ಳೆಯ ದಿನ. ಈ ಸಂದರ್ಭದಲ್ಲಿ ಯಾವುದೇ ಮೌಡ್ಯ ಇಲ್ಲ. ಮಾರ್ಚ್ನಿಂದ ಮೇ ತನಕ ಮದುವೆ ಸೀಸನ್. ಈ ಸಂದರ್ಭದಲ್ಲಿ ಮದುವೆ ಆಗಲು ಬಯಸುತ್ತಾರೆ. ಹೆಚ್ಚಿನವರು ಏಪ್ರಿಲ್, ಮೇ, ಜೂನ್ನಲ್ಲಿ ಮದುವೆಯಾಗಲು ಬಯಸುತ್ತಾರೆ" ಎನ್ನುತ್ತಾರೆ.
ಇದನ್ನೂ ಓದಿ: ಹನುಮ ಜಯಂತಿ; ಮನೆಯಲ್ಲೇ ಹನುಮಂತನನ್ನು ಪೂಜಿಸುವ ಸರಳ ವಿಧಾನ ಇಲ್ಲಿದೆ