ಬೆಂಗಳೂರು: ರಾಷ್ಟ್ರದಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿರುವ ಅತುಲ್ ಸುಭಾಷ್ ಆತ್ಮಹತ್ಯೆ ಕುರಿತು, ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿರುವ ನಗರದ ಮಾರತ್‌ಹಳ್ಳಿ ಠಾಣೆ ಪೊಲೀಸರು ಇಂದು ಉತ್ತರ ಪ್ರದೇಶದ ಜೋನಪುರದಲ್ಲಿರುವ ಪತ್ನಿ ನಿಖಿತಾ ಸಿಂಘಾನಿಯಾ ಅವರ ಮನೆ ಮುಂದೆ ಸಮನ್ಸ್ ಅಂಟಿಸಿದ್ದಾರೆ. ಮೂರು ದಿನದೊಳಗಾಗಿ ವಿಚಾರಣೆ ಹಾಜರಾಗಬೇಕೆಂದು ಸಮನ್ಸ್ನಲ್ಲಿ ಸೂಚಿಸಲಾಗಿದೆ.
ಬೆಳಗ್ಗೆ 11 ಗಂಟೆ ಸುಮಾರಿಗೆ ಅತುಲ್ ಪತ್ನಿ ನಿಖಿತಾ ಮನೆಗೆ ತೆರಳಿದ ಪೊಲೀಸರು ಬೀಗ ಹಾಕಿರುವುದನ್ನು ಕಂಡು ಮನೆ ಗೋಡೆ ಮೇಲೆ ಸಮನ್ಸ್ ಅಂಟಿಸಿದರು. ಆತ್ಮಹತ್ಯೆ ಪ್ರಕರಣ ಸಂಬಂಧ ಸಾಂದರ್ಭಿಕ ಸಾಕ್ಷ್ಯ ದೊರೆತ ಹಿನ್ನೆಲೆಯಲ್ಲಿ ಪತ್ನಿಗೆ ಮಾತ್ರ ನೋಟಿಸ್ ಜಾರಿ ಮಾಡಲಾಗಿದೆ. ನಿನ್ನೆ ತಡರಾತ್ರಿ ಜೋನಪುರ ತಲುಪಿದ ಪೊಲೀಸರು ಸ್ಥಳೀಯ ಎಸ್ಪಿ ಅಜಯ್ ಶರ್ಮಾ ಪಾಲ್ ಜೊತೆ ಮಾತುಕತೆ ನಡೆಸಿ ಇಂದು ಸಮನ್ಸ್ ಜಾರಿ ಮಾಡಿದ್ದಾರೆ.
34 ವರ್ಷದ ಅತುಲ್ ಮಾರತ್‌ಹಳ್ಳಿಯ ಬಹುರಾಷ್ಟ್ರೀಯ ಕಂಪನಿಯಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದರು. ಪತ್ನಿ ಹಾಗೂ ಆಕೆ ಮನೆಯವರು ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿ ಡಿಸೆಂಬರ್ 9ರಂದು ಡೆತ್ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾಯುವ ಮುನ್ನ ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿ ಇನ್ನಿತರರಿಗೆ ಈಗಿನ ನ್ಯಾಯದಾನ ವ್ಯವಸ್ಥೆ ಸರಿಪಡಿಸುವಂತೆ ಮನವಿ ಮಾಡಿದ್ದರು.
ಇದನ್ನೂ ಓದಿ: ಟೆಕ್ಕಿ ಅತುಲ್ ಸುಭಾಷ್ ಸಾವು ಪ್ರಕರಣ: ಅತ್ತೆ, ಸೋದರ ಮಾವ ಮನೆಯಿಂದ ಪಲಾಯನ