ಬೆಂಗಳೂರು: ಪುಂಡಾನೆ ಸೆರೆ ಕಾರ್ಯಾಚರಣೆ ವೇಳೆ ಹುತಾತ್ಮನಾದ 8 ಬಾರಿ ದಸರಾ ಅಂಬಾರಿ ಹೊತ್ತ ಅರ್ಜುನ ಆನೆಯ ಸ್ಮಾರಕವನ್ನು ನಾಗರಹೊಳೆ ಅರಣ್ಯದ ಡಿ.ಬಿ. ಕುಪ್ಪೆಯ ಬಳ್ಳೆ ಶಿಬಿರದಲ್ಲಿ ಜೂ.23ರಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಉದ್ಘಾಟಿಸಲಿದ್ದಾರೆ.
ಹಾಸನ ಜಿಲ್ಲೆ ಸಕಲೇಶಪುರ ತಾಲೂಕು ಯಸಳೂರು ಬಳಿ ಪುಂಡಾನೆ ಸೆರೆ ಕಾರ್ಯಾಚರಣೆ ವೇಳೆ 2023ರ ಡಿಸೆಂಬರ್ 4ರಂದು ಹುತಾತ್ಮನಾದ ಕ್ಯಾಪ್ಟನ್ ಎಂದೇ ಖ್ಯಾತವಾಗಿದ್ದ ದಸರಾ ಆನೆ ಅರ್ಜುನನ್ನು ದಬ್ಬಳ್ಳಿಕಟ್ಟೆಯ ನೆಡುತೋಪಿನಲ್ಲಿ ಸಮಾಧಿ ಮಾಡಲಾಗಿತ್ತು. ಅರ್ಜುನನ ಸಮಾಧಿಗೆ ಪೂಜೆ ಸಲ್ಲಿಸಿದ್ದ ಈಶ್ವರ ಖಂಡ್ರೆ ಅವರು ದಬ್ಬಳ್ಳಿಕಟ್ಟೆಯಲ್ಲಿ ಮತ್ತು ಅರ್ಜುನ ವಾಸವಾಗಿದ್ದ ಬಳ್ಳೆ ಶಿಬಿರದಲ್ಲಿ ಸ್ಮಾರಕವನ್ನು ನಿರ್ಮಿಸುವುದಾಗಿ ಹೇಳಿದ್ದರು. ಈಗ ಎರಡೂ ಕಡೆ ಸ್ಮಾರಕ ಸಿದ್ಧವಾಗಿದ್ದು, ಸೋಮವಾರ ಬಳ್ಳೆಯಲ್ಲಿ ಮೊದಲಿಗೆ ಸ್ಮಾರಕದ ಉದ್ಘಾಟನೆ ನೆರವೇರಲಿದೆ
ಅರ್ಜುನ ಆನೆಯ ಹಿನ್ನೆಲೆ: 1968ರಲ್ಲಿ ಕಾಕನಕೋಟೆಯಲ್ಲಿ ನಡೆದ ಖೆಡ್ಡಾ ಕಾರ್ಯಾಚರಣೆಯಲ್ಲಿ ಅರ್ಜುನನನ್ನು ಸೆರೆಹಿಡಿಯಲಾಗಿತ್ತು. ಅಲ್ಲಿ ಪಳಗಿದ ನಂತರ, 1990 ರ ದಶಕದಿಂದ ಮೈಸೂರಿನ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದ ಅರ್ಜುನ 8 ಬಾರಿ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಹೊತ್ತು, ಜನಮನ ಗೆದ್ದಿದ್ದ.
22 ಬಾರಿ ದಸರಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಲ್ಲದೇ, 2012 ರಿಂದ 2019ರ ವರೆಗೆ ಅಂಬಾರಿ ಹೊತ್ತು ಅರ್ಜುನ ಸೈ ಎನಿಸಿಕೊಂಡಿದ್ದ. ಅರ್ಜುನನಿಗೆ 60 ವರ್ಷವಾದ ಬಳಿಕ ಅಂಬಾರಿ ಹೊರುವುದಕ್ಕೆ ವಿಶ್ರಾಂತಿ ನೀಡಲಾಗಿತ್ತು. ಬಳಿಕ ನಾಲ್ಕು ವರ್ಷಗಳ ಕಾಲ ನಿಶಾನೆ ಆನೆಯಾಗಿ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸುತ್ತಿತ್ತು. ಎಲ್ಲಾ ರೀತಿಯಲ್ಲೂ ಜನರ ಪ್ರೀತಿಗೆ ಅರ್ಜುನ್ ಪಾತ್ರವಾಗಿತ್ತು.
ಅರ್ಜುನನ ವೀರಮರಣ: 65 ವರ್ಷದ ಅರ್ಜುನ ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಬಳ್ಳೆ ಶಿಬಿರದಲ್ಲಿತ್ತು. ಆಗಾಗ ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳಲಾಗುತ್ತಿತ್ತು. 2023ರ ಡಿಸೆಂಬರ್ 4ರಂದು ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಯಸಳೂರು ಬಳಿ ಕಾಡಾನೆಗಳ ಸೆರೆಗೆ ನಡೆಸಿದ ಕಾರ್ಯಾಚರಣೆಯಲ್ಲಿ ಒಂಟಿ ಸಲಗದ ದಾಳಿಗೆ ತುತ್ತಾಗಿ ಅರ್ಜುನ ವೀರಮರಣ ಹೊಂದಿದ್ದ.
ಇದನ್ನೂ ಓದಿ: 'ನನ್ನ ಕೂರಿಸಿಕೊಂಡು ಮದವೇರಿದ ಕಾಡಾನೆಗಳ ಜೊತೆ ಮುಕ್ಕಾಲು ಗಂಟೆ ಕಾದಾಡುತ್ತಿದ್ದ': ಜನ ಮೆಚ್ಚಿದ ದಸರಾ ಆನೆ ಅರ್ಜುನನ ಸವಿನೆನಪು
ಇದನ್ನೂ ಓದಿ: ಕ್ಯಾಪ್ಟನ್ ಅರ್ಜುನ ಆನೆ ಅಂತ್ಯಕ್ರಿಯೆ; ಎದ್ದೇಳೋ ಕಂದ ಎನ್ನುತ್ತಾ ಆತ್ಮೀಯ ಗೆಳೆಯನಿಗೆ ಮಾವುತ ವಿನು ಕಣ್ಣೀರ ವಿದಾಯ