ಮಂಡ್ಯ: ರಾಷ್ಟ್ರೀಯ ಪಂಚಾಯತ್ ರಾಜ್ ದಿನದ ಅಂಗವಾಗಿ ಏಕಕಾಲದಲ್ಲಿ ಗರಿಷ್ಠ ಸಂಖ್ಯೆಯ ರಂಗೋಲಿಗಳನ್ನು ಬಿಡಿಸಿ ದಾಖಲೆ ನಿರ್ಮಿಸಿದ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಅಣ್ಣೂರು ಗ್ರಾಮ ಪಂಚಾಯಿತಿ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸೇರ್ಪಡೆಯಾಗಿದೆ.
ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುತ್ತಾ ಗಮನ ಸೆಳೆದಿರುವ ಅಣ್ಣೂರು ಗ್ರಾಮ ಪಂಚಾಯಿತಿ ಮುಕುಟಕ್ಕೆ ಈ ಮೂಲಕ ಮತ್ತೊಂದು ಗರಿ ಸೇರಿದೆ. ಮಹಿಳಾ ಸಶಕ್ತೀಕರಣ ಹಾಗೂ ಸ್ಥಳೀಯ ಆಡಳಿತದಲ್ಲಿ ಮಹಿಳೆಯರ ಸಕ್ರಿಯ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಸಲುವಾಗಿ 2025ರ ಏಪ್ರಿಲ್ 27ರಂದು ರಂಗೋಲಿ ರಚಿಸುವ ಚಟುವಟಿಕೆಯನ್ನು ಅಣ್ಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 3 ಗ್ರಾಮಗಳಲ್ಲಿ ಏಕಕಾಲದಲ್ಲಿ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಣ್ಣೂರು, ಆಲಭುಜನಹಳ್ಳಿ ಕಾರ್ಕಳ್ಳಿ ಗ್ರಾಮಗಳಿಂದ ಒಟ್ಟು 1,544 ಮಂದಿ ಭಾಗವಹಿಸಿದ್ದರು. ಅಕ್ಕಿ ಹಿಟ್ಟು, ಅರಿಶಿನ ಪುಡಿ ಮತ್ತು ಬಣ್ಣದ ಮರಳಿನಂತಹ ನೈಸರ್ಗಿಕ ವಸ್ತುಗಳನ್ನು ಬಳಸಿಕೊಂಡು ಒಟ್ಟಾರೆ 1,418 ರಂಗೋಲಿಗಳನ್ನು ರಚಿಸಿ ಗಮನ ಸೆಳೆದಿದ್ದರು. ಇದರಲ್ಲಿ ಅಣ್ಣೂರು ಗ್ರಾ.ಪಂ.ನ 818 ಮಂದಿ 728 ರಂಗೋಲಿ, ಆಲಭೂಜನಹಳ್ಳಿಯ 373 ಮಂದಿ 373 ಹಾಗೂ ಕಾರ್ಕಹಳ್ಳಿಯ 353 ಮಂದಿ 317 ರಂಗೋಲಿಗಳನ್ನು ರಚಿಸಿದ್ದರು.
"ಅಣ್ಣೂರು ಗ್ರಾ.ಪಂ. ಹಲವು ರಾಷ್ಟ್ರೀಯ, ರಾಜ್ಯ ಮತ್ತು ಸಂಘ-ಸಂಸ್ಥೆಗಳು ನೀಡಿದ ಪ್ರಶಸ್ತಿಗಳನ್ನು ಪಡೆದುಕೊಂಡು ಗಮನ ಸೆಳೆದಿದೆ. ಮಹಿಳೆಯರ ಸಕ್ರಿಯ ಭಾಗವಹಿಸುವಿಕೆಯಿಂದ ಈ ಸಾಧನೆ ಆಗಿರುವುದಕ್ಕೆ ಹೆಚ್ಚು ಖುಷಿಯಾಗಿದೆ. ಇದಕ್ಕೆ ಹಿರಿಯ ಅಧಿಕಾರಿಗಳು, ಗ್ರಾಮ ಪಂಚಾಯತಿಯ ಚುನಾಯಿತ ಸದಸ್ಯರು ಮತ್ತು ಆಡಳಿತ ಮಂಡಳಿ ಸಹಕಾರ ಕಾರಣ" ಎಂದು ಅಣ್ಣೂರು ಗ್ರಾಮ ಪಂಚಾಯಿತಿ ಪಿಡಿಒ ಅಶ್ವಿನಿ ಹೇಳಿದ್ದಾರೆ.
ಇದನ್ನೂ ಓದಿ: 39 ನಿಮಿಷದಲ್ಲಿ 11.18 ಕಿ.ಮೀ ಸೈಕಲ್ ತುಳಿದು ದಾಖಲೆ ಬರೆದ ಹುಬ್ಬಳ್ಳಿಯ 4 ವರ್ಷದ ಬಾಲಕ