ಬೆಳಗಾವಿ: ಇಂದಿನ ಬಹಳಷ್ಟು ಮಕ್ಕಳು ಮೊಬೈಲ್ ಗೀಳಿಗೆ ಅಂಟಿಕೊಂಡಿದ್ದಾರೆ. ಕ್ರೀಡೆ ಸೇರಿ ಮತ್ತಿತರ ಚಟುವಟಿಕೆಯಿಂದ ದೂರ ಉಳಿದಿವೆ. ಇದು ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಹಾಗಾಗಿ, ಬೆಳಗಾವಿಯಲ್ಲಿ ಬೇಸಿಗೆ ರಜೆಯಲ್ಲಿ ಆಯೋಜಿಸಿದ್ದ ಪ್ರಾಚೀನ ಕಾಲದ ಯುದ್ಧ ಕಲೆಗಳ ತರಬೇತಿ ಶಿಬಿರ ಮಕ್ಕಳಲ್ಲಿ ಹೊಸ ಚೈತನ್ಯ ಮೂಡಿಸುವಲ್ಲಿ ಯಶಸ್ವಿಯಾಗಿದೆ.
ಹೌದು, ಸವ್ಯಸಾಚಿ ಗುರುಕುಲಂ, ಶ್ರೀಕ್ಷೇತ್ರ ದಕ್ಷಿಣಕಾಶಿ ಕಪಿಲೇಶ್ವರ ಮಂದಿರ ಹಾಗೂ ಶಿವಪ್ರತಿಷ್ಠಾನ ಬೆಳಗಾವಿ ಸಹಯೋಗದಲ್ಲಿ ಇಲ್ಲಿನ ಸಂಭಾಜಿ ಮೈದಾನದಲ್ಲಿ 10 ದಿನಗಳ ಕಾಲ ಬಾಲ ಸಂಸ್ಕಾರ ಹೆಸರಿನಲ್ಲಿ ಪ್ರಾಚೀನ ಕಾಲದ ಯುದ್ಧ ಕಲೆಗಳು, ಸ್ವಯಂ ರಕ್ಷಣಾ ಕೌಶಲಗಳನ್ನು ಬೆಳೆಸುವ ನಿಟ್ಟಿನಲ್ಲಿ 10 ದಿನಗಳ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಹೆಣ್ಣು ಮಕ್ಕಳು ತಮ್ಮ ಮೇಲೆ ದೌರ್ಜನ್ಯ ಎಸಗಲು ಬಂದ ದುಷ್ಟರಿಂದ ಹೇಗೆ ರಕ್ಷಿಸಿಕೊಳ್ಳಬೇಕು ಎಂಬ ತಂತ್ರವನ್ನು ಇಲ್ಲಿ ಕಲಿಸಲಾಯಿತು. ಹುಬ್ಬಳ್ಳಿ, ಹಾಸನ, ಗದಗ, ಧಾರವಾಡ ಜಿಲ್ಲೆ ಸೇರಿ ಬೆಳಗಾವಿ ನಗರ ಹಾಗೂ ಗ್ರಾಮೀಣ ಪ್ರದೇಶದಿಂದ ಸುಮಾರು 300ಕ್ಕೂ ಅಧಿಕ ಮಕ್ಕಳು ಶಿಬಿರದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ನಶಿಸುತ್ತಿರುವ ಕಲೆಗಳ ಬಗ್ಗೆ ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ: ಹಳೆ ಕಾಲದ ಯುದ್ಧ ನೈಪುಣ್ಯತೆ, ಪ್ರಕಾರಗಳು ನಶಿಸಿ ಹೋಗುತ್ತಿವೆ. ಅವುಗಳನ್ನು ಇಂದಿನ ಪೀಳಿಗೆಗೆ ತಿಳಿಸುವ ಕಾರ್ಯ ಇಲ್ಲಿ ಮಾಡಲಾಗುತ್ತಿದೆ. ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಗಡಹಿಂಗ್ಲಜ ತಾಲೂಕಿನ ಗಾರ್ಗೋಟಿಯ ನಾಲ್ವರು ಶಿಕ್ಷಕರು ಹಾಗೂ ಬೆಳಗಾವಿ ತಾಲೂಕಿನ ಮಚ್ಛೆಯ 12 ಶಿಕ್ಷಕರು ಈ ಶಿಬಿರದಲ್ಲಿ ಲಾಠಿಪ್ರಹಾರ, ತಲವಾರ, ಡಾಲ್, ಭರ್ಚಿ, ದಾಂಡಪಟ್ಟಾ ಸೇರಿ ಮತ್ತಿತರ ಸಾಧನಗಳ ಪ್ರಯೋಗ, ಸರ್ವಾಂಗ ಸುಂದರ ವ್ಯಾಯಾಮ, ಸೂರ್ಯ ನಮಸ್ಕಾರ ಸೇರಿದಂತೆ ಅನೇಕ ಯುದ್ಧ ಕಲೆಗಳು ಹಾಗೂ ಸ್ವಯಂ ರಕ್ಷಣೆಯ ತಂತ್ರಗಳನ್ನು ಕಲಿಸಿದರು.

ಮಕ್ಕಳಿಂದ ಹಿಡಿದು ವಯಸ್ಕರವರೆಗೂ ತರಬೇತಿ: 10 ವರ್ಷ ಮೇಲ್ಪಟ್ಟ ಮಕ್ಕಳಿಂದ ಹಿಡಿದು 40 ವರ್ಷದ ವಯಸ್ಕರವರೆಗೂ ಶಿಬಿರದಲ್ಲಿ ಪಾಲ್ಗೊಂಡಿದ್ದು ವಿಶೇಷ. ಮಕ್ಕಳಂತೂ ಲೀಲಾಜಾಲವಾಗಿ ಯುದ್ಧ ಕಲೆಗಳನ್ನು ಪ್ರದರ್ಶಿಸಿದ್ದು ಎಲ್ಲರನ್ನು ಆಕರ್ಷಿಸಿತು. ಬೆಳಗ್ಗೆ 6 ಗಂಟೆಯಿಂದ ಬೆಳಗ್ಗೆ 10 ಗಂಟೆವರೆಗೆ, ಸಾಯಂಕಾಲ 4 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಶಿಬಿರ ನಡೆಯಿತು. ಇನ್ನು ಹೊರಗಿನಿಂದ ಬಂದ ಶಿಬಿರಾರ್ಥಿಗಳಿಗೆ ಊಟ ಮತ್ತು ವಸತಿಯನ್ನು ಆಯೋಜಕರು ಉಚಿತವಾಗಿ ಕಲ್ಪಿಸಿದ್ದರು.

ಕಪಿಲೇಶ್ವರ ಮಂದಿರ ಕಾರ್ಯದರ್ಶಿ ಮಾತನಾಡಿ ಹೇಳಿದ್ದಿಷ್ಟು: ಈಟಿವಿ ಭಾರತ ಜೊತೆಗೆ ಮಾತನಾಡಿದ ಕಪಿಲೇಶ್ವರ ಮಂದಿರ ಕಾರ್ಯದರ್ಶಿ ಅಭಿಜಿತ್ ಚವ್ಹಾಣ, 3ನೇ ವರ್ಷ ಈ ಶಿಬಿರ ಆಯೋಜಿಸಿದ್ದೇವೆ. ಹೋದ ವರ್ಷ 60 ಮಕ್ಕಳು ಪಾಲ್ಗೊಂಡಿದ್ದರು. ಈ ಬಾರಿ 300ಕ್ಕೂ ಹೆಚ್ಚು ಮಕ್ಕಳು ಮತ್ತು ವಯಸ್ಕರರು ಭಾಗವಹಿಸಿದ್ದಾರೆ. ಶಿವಾಜಿ ಮಹಾರಾಜ, ಸಂಭಾಜಿ ಮಹಾರಾಜ, ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಅವರ ಯುದ್ಧ ಕಲೆಗಳನ್ನು ಮಕ್ಕಳಿಗೆ ಕಲಿಸುತ್ತಿದ್ದೇವೆ. ಇದು ಸಂಪೂರ್ಣ ಉಚಿತವಾಗಿದೆ. ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಇಂಥ ಸಂದರ್ಭದಲ್ಲಿ ಸ್ವಯಂ ಹೇಗೆ ರಕ್ಷಿಸಿಕೊಳ್ಳಬೇಕು ಎಂಬುದನ್ನು ಇಲ್ಲಿ ಕಲಿಸಿಕೊಡಲಾಗುತ್ತಿದೆ ಎಂದು ವಿವರಿಸಿದರು.

ಶಿಬಿರಾರ್ಥಿ ತಮ್ಮ ಅನುಭವ ಹಂಚಿಕೊಂಡಿದ್ದು ಹೀಗೆ: ಶಿಬಿರದಲ್ಲಿ ಪಾಲ್ಗೊಂಡಿದ್ದ ಭಾರತಿ ಕೋಟಬಾಗಿ ಎಂಬುವವರು ಮಾತನಾಡಿ, ಯಾವುದೇ ವಿದ್ಯೆ ಕಲಿಯಲು ವಯಸ್ಸಿನ ಮಿತಿ ಇಲ್ಲ. ಹಾಗಾಗಿ, ನಾನು ಬರುತ್ತಿದ್ದೇನೆ. ಯುದ್ಧ ಕಲೆಗಳನ್ನು ಕಲಿತರೆ ಕಠಿಣ ಸಂದರ್ಭದಲ್ಲಿ ಉಪಯೋಗಕ್ಕೆ ಬರುತ್ತದೆ. ಸೂರ್ಯ ನಮಸ್ಕಾರ, ಹನುಮಾನ ಭುಜಂಗ ವ್ಯಾಯಾಮ ಸೇರಿ ವಿವಿಧ ಪ್ರಕಾರದ ಕಲೆಗಳನ್ನು ತುಂಬಾ ಚನ್ನಾಗಿ ಕಲಿಸುತ್ತಿದ್ದಾರೆ. ನಾವು ಕೂಡ ಭಕ್ತಿಯಿಂದ ಪ್ರತಿಯೊಂದನ್ನು ಕಲಿಯುತ್ತಿದ್ದೇನೆ ಎಂದರು.

ಇದನ್ನು ಓದಿ:ಮಕ್ಕಳಲ್ಲಿ ಹೆಚ್ಚುತ್ತಿದೆ ಅಪರಾಧ ಪ್ರವೃತ್ತಿ: ಪೋಷಕರ ಪಾತ್ರವೇನು? ಮನೋವೈದ್ಯರು, ಪೊಲೀಸ್ ಅಧಿಕಾರಿಗಳ ಮಾತು ಕೇಳಿ