ಕಾರವಾರ(ಉತ್ತರ ಕನ್ನಡ): ಮುಂಡಗೋಡ ತಾಲೂಕಿನ ಬೆಡಸಗಾಂವ್ ಗ್ರಾಮದಲ್ಲಿ ದೊಡ್ಡ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. 10ಕ್ಕೂ ಹೆಚ್ಚು ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವಾಹನದ ಮೇಲೆ ವಿದ್ಯುತ್ ಕಂಬ ಮುರಿದು ಬಿದ್ದಿದೆ. ಆದರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ರಾಮಾಪುರದಿಂದ ಹುಲೆಕಲ್‌ಗೆ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರಿದ್ದ ವಾಹನ ಸಂಚರಿಸುವಾಗ, ಮರ ಮುರಿದು ವಿದ್ಯುತ್ ತಂತಿಗಳ ಮೇಲೆ ಬಿದ್ದಿದೆ. ಪರಿಣಾಮ ವಿದ್ಯುತ್ ಕಂಬವು ಮುರಿದು ವಾಹನದ ಮೇಲೆ ಬಿದ್ದಿದೆ. ಇದಕ್ಕೂ ಮುನ್ನ ಮುಂಜಾಗೃತವಾಗಿ ಬೆಡಸಗಾಂವ್ ಗ್ರಾಮದ ವಿಜಯ ಶಾಂತು ನಾಯ್ಕ ಅವರು ಮರ ಮುರಿದು ಬೀಳುವ ಮುನ್ಸೂಚನೆಯಿಂದ, ಮುಂಚಿತವಾಗಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದರು. ಹೀಗಾಗಿ, ವಿದ್ಯುತ್ ಕಂಬ ವಾಹನದ ಮೇಲೆ ಬಿದ್ದರೂ ವಿದ್ಯುತ್ ಪ್ರವಹಿಸದ ಕಾರಣ, ಕಾರ್ಮಿಕರೆಲ್ಲರೂ ಸುರಕ್ಷಿತವಾಗಿ ಪಾರಾಗಿದ್ದಾರೆ.
ಹೆಸ್ಕಾಂ ನಿರ್ಲಕ್ಷಕ್ಕೆ ಯುವಕ ಸಾವು: ಯಲ್ಲಾಪುರ ತಾಲೂಕಿನ ಹಾಸಣಗಿ ಗ್ರಾಮದ ಅಣಲೇಸರದಲ್ಲಿ ಹೆಸ್ಕಾಂ ನಿರ್ಲಕ್ಷತೆಯಿಂದಾಗಿ ಯುವಕನೊಬ್ಬ ವಿದ್ಯುತ್ ಆಘಾತಕ್ಕೆ ಒಳಗಾಗಿ ಮೃತಪಟ್ಟಿದ್ದು, ಘಟನೆಗೆ ಸಂಬಂಧಿಸಿದಂತೆ ಲೈನ್ ಮ್ಯಾನ್ ಮತ್ತು ಸೆಕ್ಷನ್ ಅಧಿಕಾರಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಜಡಗಿನಕೊಪ್ಪದ ಆನಂದ ಸಿದ್ದಿ (27) ಮೃತ ದುರ್ದೈವಿ ಯುವಕ. ಅನುಭವವಿಲ್ಲದೆ ಮತ್ತು ಸುರಕ್ಷತಾ ಸಾಧನಗಳಿಲ್ಲದೇ ವಿದ್ಯುತ್ ಕಂಬವನ್ನು ಹತ್ತಿದಾಗ ವಿದ್ಯುತ್ ಶಾಕ್ ತಗುಲಿ ಕೆಳಗೆ ಬಿದ್ದು ಅಸುನೀಗಿದ್ದಾನೆ. ಈ ಘಟನೆಗೆ ಹೆಸ್ಕಾಂ ನಿರ್ಲಕ್ಷ್ಯತೆಯೇ ಕಾರಣವೆಂದು ಆರೋಪಿಸಿ, ಯುವಕನನ್ನು ವಿದ್ಯುತ್ ಕಂಬ ಹತ್ತಿಸಿದ ಆರೋಪದ ಮೇಲೆ ಯಲ್ಲಾಪುರ ಲೈನ್ ಮ್ಯಾನ್ ಸುನೀಲ್ ಚೌಹಾಣ್ ಮತ್ತು ಸೆಕ್ಷನ್ ಆಫೀಸರ್ ನಾಗರಾಜ ಆಚಾರ್ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ.
ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ಗಾಳಿ ಮಳೆ: ಕಡಲು ಪ್ರಕ್ಷುಬ್ದ, ಇನ್ನೂ ಎರಡು ದಿನ ಆರೆಂಜ್ ಅಲರ್ಟ್