ರಾಯಚೂರು: ಹಿಂದೂ ಸಮಾಜದ ಕಾರ್ಯಕ್ರಮವೊಂದರಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭಾಷಣ ಮಾಡುತ್ತಿದ್ದ ಸಮಯದಲ್ಲಿ ವ್ಯಕ್ತಿಯೋರ್ವನ ಬಳಿ ಮಾರಕಾಸ್ತ್ರ ಸಿಕ್ಕಿದ್ದು, ಲಿಂಗಸೂಗೂರು ಠಾಣೆಯ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಜಿಲ್ಲೆಯ ಲಿಂಗಸೂಗೂರು ಪಟ್ಟಣದ ಸರ್ಕಾರಿ ಕಾಲೇಜು ಮೈದಾನದಲ್ಲಿ ಶ್ರೀರಾಮಸೇನೆ ಸಂಘಟನೆಯಿಂದ ಆಯೋಜಿಸಿದ್ದ ಈ ಸಮಾರಂಭದಲ್ಲಿ ಭಾನುವಾರ ಈ ಘಟನೆ ನಡೆದಿದೆ. ಶ್ರೀನಿವಾಸ್ ಎಂಬ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಲಿಂಗಸೂಗೂರು ಪಟ್ಟಣದಲ್ಲಿ ಶ್ರೀರಾಮನವಮಿ ಅಂಗವಾಗಿ ಹಿಂದೂ ಸಾಮ್ರಾಜ್ಯೋತ್ಸವ ಹಮ್ಮಿಕೊಂಡಿದ್ದ ಸಮಾರಂಭವನ್ನು ಉದ್ದೇಶಿಸಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭಾಷಣ ಮಾಡುತ್ತಿರುವಾಗ ಶ್ರೀನಿವಾಸ್ ಮಾರಕಾಸ್ತ್ರ ಇಟ್ಟುಕೊಂಡು ಬಂದಿದ್ದಾನೆ. ಅದೇ ಸಮಯದಲ್ಲಿ ಪೊಲೀಸರು ಸಮಯ ಪ್ರಜ್ಞೆಯಿಂದ ಆ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸಾವಿರಾರು ಜನರು, ಮುಖಂಡರು ಸೇರಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಸೂಕ್ತ ಬಂದೋಬಸ್ತ್ ಒದಗಿಸಿದ್ರು. ಇದರ ನಡುವೆ ಈ ವ್ಯಕ್ತಿ ಮಚ್ಚು ಹಿಡಿದು ವೇದಿಕೆಯ ಮೇಲೆ ಹೇಗೆ ಬಂದ ಎನ್ನುವುದು ಚರ್ಚೆಗೆ ಗ್ರಾಸವಾಗಿದೆ.
ಈ ಕುರಿತು ಲಿಂಗಸೂಗೂರು ಪೊಲೀಸರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, ಕುಡಿದ ಮತ್ತಿನಲ್ಲಿ ವ್ಯಕ್ತಿ ಮಚ್ಚು ಇಟ್ಟುಕೊಂಡು ಬಂದಿದ್ದಾನೆ. ಹಲವು ವರ್ಷಗಳಿಂದ ಸಿವಿಲ್ ವ್ಯಾಜ್ಯ ಇದೆ. ವೇದಿಕೆಯ ಮೇಲೆ ಬೇರೆ ಜನರು ಇದ್ದಾಗ, ಅವರನ್ನು ಕೆಳಗಡೆ ಕಳುಹಿಸಲಾಗುತ್ತಿತ್ತು. ಈ ಸಮಯದಲ್ಲಿ ನಮ್ಮ ಸಿಬ್ಬಂದಿಗೆ ಮಚ್ಚು ತಾಕಿದೆ. ಆಗ ಪರಿಶೀಲನೆ ಮಾಡಿದಾಗ, ಆತನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಶ್ರೀನಿವಾಸ್ ಪ್ರಮೋದ್ ಮುತಾಲಿಕ್ ಅಭಿಯಾನಿಯಾಗಿದ್ದ. ಹಟ್ಟಿ ಪಟ್ಟಣದಲ್ಲಿ ಅವರ ಪಾದಮುಟ್ಟಿ ಆಶೀರ್ವಾದ ಪಡೆದುಕೊಂಡಿದ್ದ. ಅದೇ ರೀತಿ ಯತ್ನಾಳ್ ಅವರ ಪಾದ ಹಿಡಿದು ಆಶೀರ್ವಾದ ಪಡೆಯಲು ಹೋಗಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಲಿಂಗಸೂಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಇತ್ತೀಚಿಗೆ ಯತ್ನಾಳ್ ಹತ್ಯೆ ಮಾಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಅನ್ಯ ಕೋಮಿನ ವ್ಯಕ್ತಿಯೋರ್ವ ಮಾತನಾಡಿದ್ದಾನೆ ಎನ್ನಲಾದ ಆಡಿಯೋವೊಂದು ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಹಿಂದು ಸಮಾಜದ ವೇದಿಕೆಯಲ್ಲಿ ಮಾರಕಾಸ್ತ್ರ ಹಿಡಿದು ಬಂದಿದ್ದ ವ್ಯಕ್ತಿಯಿಂದ ಆತಂಕ ಮೂಡಿತ್ತು.
ಇದನ್ನೂ ಓದಿ: ಗೋಲ್ಡ್ ಲೋನ್ ಹೆಸರಲ್ಲಿ ₹10 ಕೋಟಿಗೂ ಅಧಿಕ ಹಣ ಗುಳುಂ: ರಾಯಚೂರಲ್ಲಿ ಬ್ಯಾಂಕ್ ಮ್ಯಾನೇಜರ್ ಸೇರಿ ಇಬ್ಬರು ಅರೆಸ್ಟ್