ಬೆಂಗಳೂರು: ಆಖಿಲ ಭಾರತೀಯ ಗೂರ್ಖಾ ಲೀಗ್ (ಎಬಿಜಿಎಲ್) ನಾಯಕ ಹಾಗೂ ರಾಜಕಾರಣಿ ಮದನ್ ತಮಂಗ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸಿಬಿಐ ಅಧಿಕಾರಿಗಳು ಬೆಂಗಳೂರಿನ ಹೊರವಲಯ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂಧಿಸಿದ್ದಾರೆ.
ಪೂರನ್ ಬಹದ್ದೂರ್ ರೈ ಬಂಧಿತ ಆರೋಪಿ. 2017ರಲ್ಲಿ ಡಾರ್ಜಿಲಿಂಗ್ನಿಂದ ತಲೆಮರೆಸಿಕೊಂಡಿದ್ದ ಆರೋಪಿಯು ಎಂಟು ವರ್ಷಗಳ ಬಳಿಕ ಸಿಬಿಐ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ. ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯ ಮಾರುತಿನಗರದಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2010ರಲ್ಲಿ ಮದನ್ ತಮಂಗ್ ಅವರನ್ನ ಹಾಡಹಾಗಲೇ ಹತ್ಯೆ ಮಾಡಲಾಗಿತ್ತು. ಪ್ರಕರಣ ಸಂಬಂಧ 20ಕ್ಕಿಂತ ಹೆಚ್ಚು ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಸ್ಥಳೀಯ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು. ಹತ್ಯೆ ಪ್ರಕರಣದಲ್ಲಿ ಕಲ್ಕತ್ತಾ ನ್ಯಾಯಾಲಯ ವಿಚಾರಣೆಗೆ ಹಾಜರಾಗುವಂತೆ ಹಲವು ಸಮನ್ಸ್ ನೀಡಿದರೂ 2017ರಿಂದ ಗೈರಾಗಿದ್ದ. ಈ ಸಂಬಂಧ ಘೋಷಿತ ಅಪರಾಧಿ ಎಂದು ನ್ಯಾಯಾಲಯ ಘೋಷಿಸಿತ್ತು.
ಇದಾದ ಬಳಿಕ ಡಿ.20ರಂದು ಬಂಧಿಸುವಂತೆ ನ್ಯಾಯಾಲಯದ ಆದೇಶ ಹಿನ್ನೆಲೆಯಲ್ಲಿ ತಾಂತ್ರಿಕ ಕಾರ್ಯಾಚರಣೆ ನಡೆಸಿದಾಗ ಆರೋಪಿಯು ಮಾರುತಿನಗರದಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಕಂಡುಕೊಂಡಿದ್ದರು. ಖಚಿತ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದ್ದು, ಸ್ಥಳೀಯ ನ್ಯಾಯಾಲಯ ಮುಂದೆ ಹಾಜರುಪಡಿಸಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಲಂಚ ಬೇಡಿಕೆ ಆರೋಪದಲ್ಲಿ ಬಂಧನ ಪ್ರಕರಣ : ಪೊಲೀಸ್ ಇನ್ಸ್ಪೆಕ್ಟರ್, ಸಿಬ್ಬಂದಿಗೆ ಜಾಮೀನು