ಬೆಂಗಳೂರು: ವಿದ್ಯುತ್ ಬಳಕೆಗೆ ಸಂಬಂಧಿಸಿದಂತೆ ನೈಜ ಸಮಯದಲ್ಲಿ ಮಾಹಿತಿ ಒದಗಿಸುವ ಸ್ಮಾರ್ಟ್ ಮೀಟರ್‌ಗಳಿಗೆ ಭಾರಿ ಮೊತ್ತದ ಹೆಚ್ಚುವರಿ ದರ ನಿಗದಿಪಡಿಸಿರುವುದನ್ನು ಆಕ್ಷೇಪಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರ ಹಾಗೂ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ)ಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಬೆಸ್ಕಾಂ ವ್ಯಾಪ್ತಿಯಲ್ಲಿ ಸ್ಮಾರ್ಟ್ ಮೀಟರ್ ಮಾರಾಟ, ಅಳವಡಿಕೆ ಹಾಗೂ ನಿರ್ವಹಣೆಗೆ ದಾವಣಗೆರೆ ಮೂಲದ ರಾಜಶ್ರೀ ಎಲೆಕ್ಟ್ರಿಕಲ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ನೀಡಿರುವ ಟೆಂಡರ್ ರದ್ದುಪಡಿಸುವಂತೆ ಕೋರಿ ಬೆಂಗಳೂರಿನ ಅಶ್ವರಾಮಾನುಜಾ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರ ಆರ್. ಆನವೇರಿ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ಪೀಠ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಜೂನ್ 17ಕ್ಕೆ ಮುಂದೂಡಿತು.
ವಿಚಾರಣೆ ವೇಳೆ ಆರ್ಜಿದಾರರ ಪರ ವಕೀಲರು, ಸಿಂಗಲ್ ಫೇಸ್ ಸ್ಮಾರ್ಟ್ ಮೀಟರ್ ನಿಗದಿತ ದರ 2,461 ರು. ಹಾಗೂ ತ್ರೀಫೇಸ್ ಸ್ಮಾರ್ಟ್ ಮೀಟರ್ ನಿಗದಿತ ದರ 3,292 ರು.ಇದೆ. ಆದರೆ, ಟೆಂಡರ್‌ನಲ್ಲಿ ಕ್ರಮವಾಗಿ 4,235 ರು. ಹಾಗೂ 7,525 ರು. ದರ ನಮೂದಿಸಲಾಗಿದೆ.
ಈ ರೀತಿ ಸಿಂಗಲ್ ಫೇಸ್ ಮೀಟರ್‌ಗೆ ಜನ ಸಾಮಾನ್ಯರು 1,774 ರೂ. ಮತ್ತು ತ್ರೀಫೇಸ್ ಮೀಟರ್‌ಗೆ 4,233 ರು. ಹೆಚ್ಚುವರಿ ಮೊತ್ತ ಪಾವತಿಸಬೇಕಾಗಿದೆ. ಟೆಂಡರ್ ಪ್ರೀಮಿಯಂ ದರ ಶೇ.5ಕ್ಕಿಂತ ಮೀರಬಾರದು ಎಂದು 2022ರಲ್ಲಿ ಸಿಎಂ ಕಚೇರಿ ಟಿಪ್ಪಣಿ ಹೊರಡಿಸಿದೆ.
ಆದರೆ, ಈಗಿನ ಟೆಂಡರ್‌ನಲ್ಲಿ ದರ ಶೇ. 72ರಿಂದ ಶೇ.170ರಷ್ಟು ಹೆಚ್ಚಾಗಿದೆ. ಸಾರ್ವಜನಿಕರ ತೆರಿಗೆ ಹಣ ದುಂದು ವೆಚ್ಚವಾಗುತ್ತಿದ್ದು, ಜನಸಾಮಾನ್ಯರಿಗೆ ಹೊರೆಯಾಗುತ್ತಿದೆ. ಆದ್ದರಿಂದ ಟೆಂಡರ್ ರದ್ದುಪಡಿಸಬೇಕು ಎಂದು ಮನವಿ ಮಾಡಿದರು.
ಇದನ್ನು ಓದಿ: ಕುರಿ ಸಾಕಿ ಯಶ ಕಂಡ ಬಿಇ ಪದವೀಧರ: ಸರ್ಕಾರಿ ಕೆಲಸ ಸಿಗದೇ ಈ ದಾರಿ ಹಿಡಿದು ಲಕ್ಷ ಲಕ್ಷ ಲಾಭ ಗಳಿಸುತ್ತಿರುವ ಇಂಜಿನಿಯರ್