ವರದಿ - ಮಹೇಶ್ ಎಂ
ಮೈಸೂರು: ಯಾವುದೇ ಮಾನ್ಯತೆ ಇಲ್ಲದೆ ನಗರದಲ್ಲಿ ನೂರಾರು ಯೋಗ ಕೆಂದ್ರಗಳ ಹೆಸರಿನಲ್ಲಿ ಯೋಗ ಕಲಿಸಲಾಗುತ್ತಿದೆ. ಈ ರೀತಿ ಅನಧಿಕೃತವಾಗಿ ಯೋಗ ಕಲಿಸುತ್ತಿರುವ ಕೇಂದ್ರಗಳನ್ನು ಅಧಿಕೃತ ಯೂನಿರ್ವಸಿಟಿ ಜೊತೆಗೆ ಜೋಡಿಸಿ ಅವುಗಳಿಗೆ ಅಧಿಕೃತ ಪ್ರಮಾಣಪತ್ರ ನೀಡುವ ಪ್ರಕ್ರಿಯೆ ನಡೆದಿದೆ. ಈ ಬಗ್ಗೆ ಆಯುಷ್ ಇಲಾಖೆ ಕೂಡ ಚಿಂತನೆ ನಡೆಸಿದ್ದು, ಇದಕ್ಕಾಗಿ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದು ಮೈಸೂರು ಜಿಲ್ಲಾ ಆಯುಷ್ ಅಧಿಕಾರಿ ಡಾ. ರೇಣುಕಾದೇವಿ ಸಿಂಗ್ ಈಟಿವಿ ಭಾರತ ಸಂದರ್ಶನದಲ್ಲಿ ತಿಳಿಸಿದ್ದಾರೆ.
ನೂರಾರು ಅನಧಿಕೃತ ಯೋಗಕೇಂದ್ರಗಳು: ಯೋಗನಗರಿ ಮೈಸೂರಿನಲ್ಲಿ ನೂರಾರು ಯೋಗ ಕೇಂದ್ರಗಳಿವೆ. ಪ್ರತಿವರ್ಷ ಲಕ್ಷಾಂತರ ಮಂದಿ ಯೋಗ ಕಲಿಯಲು ವಿಶ್ವದ ಎಲ್ಲೆಡೆಯಿಂದ ಸಾಂಸ್ಕೃತಿಕ ನಗರಿಗೆ ಆಗಮಿಸುತ್ತಾರೆ. ಇಲ್ಲಿ ಮೂರು ತಿಂಗಳ ತರಬೇತಿ, ಆರು ತಿಂಗಳ ತರಬೇತಿ ಹಾಗೂ ಒಂದು ವರ್ಷದ ಯೋಗ ತರಬೇತಿ ಪಡೆದುಕೊಂಡು ಹೋಗುತ್ತಾರೆ. ಆದರೆ, ಇಂತಹ ತರಬೇತಿ ನೀಡುವ ಹಲವು ಯೋಗ ಕೇಂದ್ರಗಳು ಯಾವುದೇ ಅಧಿಕೃತ ನೋಂದಣಿಗಳನ್ನು ಪಡೆದಿಲ್ಲ. ಆದರೂ, ಲಕ್ಷಾಂತರ ರೂ. ಹಣ ಪಡೆದು ಯೋಗ ಕಲಿಸುತ್ತಿವೆ. ಇವುಗಳು ಯಾವುದೇ ಜಿಲ್ಲಾ ಆಯುಷ್ ಕೇಂದ್ರ ಅಥವಾ ವಿವಿ ಅನುಮತಿ ಪಡೆಯದೆ ಯೋಗ ಕಲಿಸುತ್ತಿವೆ. ಅದರಲ್ಲೂ ಹೋಟೆಲ್, ರೆಸಾರ್ಟ್, ಸ್ಪಾಗಳಲ್ಲಿ ಇದೊಂದು ರೀತಿ ದಂಧೆಯಾಗಿರುವ ಮಾಹಿತಿ ಆಯುಷ್ ಇಲಾಖೆಗೆ ಬಂದಿದೆ. ಈ ಹಿನ್ನೆಲೆ ಮೈಸೂರು ವಿವಿ ಜೊತೆ ಅಥವಾ ಬೇರೆ ಬೇರೆ ವಿವಿಗಳ ಜೊತೆ ಒಪ್ಪಂದ ಮಾಡಿಕೊಂಡು ಯೋಗಕ್ಕೆ ಅಧಿಕೃತ ಅನುಮತಿ ಪಡೆಯುವ ಕ್ರಿಯಾ ಯೋಜನೆಯನ್ನ ಆಯುಷ್ ಇಲಾಖೆ ತಯಾರು ಮಾಡುತ್ತಿದೆ. ಆ ಮೂಲಕ ಮೈಸೂರನ್ನು ಯೋಗ ಹಬ್ ಆಗಿ ಮಾಡಲಾಗುವ ಪ್ರಕ್ರಿಯೆ ಆರಂಭವಾಗಿದೆ ಎಂದು ಡಾ. ರೇಣುಕಾದೇವಿ ಸಿಂಗ್ ಹೇಳಿದ್ದಾರೆ.
ಆಯುಷ್ ಇಲಾಖೆಯಿಂದ ಯೋಗ ಕಲಿಕಾ ಶಾಲೆ: ಕೇಂದ್ರ ಸರ್ಕಾರದ ನ್ಯಾಷನಲ್ ಆಯುಷ್ ಮಿಷನ್ ಯೋಜನೆಯಡಿ ಮೈಸೂರನ್ನ ಯೋಗ ಹಬ್ ಮಾಡುವ ಪ್ರಸ್ತಾವನೆ ಇದ್ದು, ಇದಕ್ಕಾಗಿ ಕ್ರಿಯಾ ಯೋಜನೆ ತಯಾರು ಮಾಡಲಾಗಿದೆ. ಇದನ್ನು ಬೆಂಗಳೂರಿನ ರಾಜ್ಯ ಆಯುಷ್ ಇಲಾಖೆಯಿಂದ ದೆಹಲಿಗೆ ಕಳುಹಿಸಲಾಗಿದೆ. ಅಲ್ಲಿಂದ ಆದೇಶ ಬಂದ ಬಳಿಕ ಮತ್ತಷ್ಟು ಕ್ರಿಯಾ ಯೋಜನೆಗಳನ್ನು ಚುರುಕುಗೊಳಿಸಲಾಗುವುದು ಎಂದರು.
ಕ್ರಿಯಾಯೋಜನೆ ಸಿದ್ಧಪಡಿಸುವ ಮುನ್ನ ಯೋಗ ಪರಿಣಿತರು ಹಾಗೂ ನುರಿತ ಯೋಗ ತಜ್ಞರ ಜೊತೆ ರೂಪುರೇಷಗಳ ಬಗ್ಗೆ ಚರ್ಚಿಸಲಾಗುವುದು. ಬಳಿಕ ಕ್ರಿಯಾಯೋಜನೆ ಸಿದ್ಧಪಡಿಸಿ ಇಲ್ಲಿನ ಪ್ರವಾಸೋಧ್ಯಮಕ್ಕೆ ಒತ್ತು ನೀಡಿ ಯೋಗದ ಡಿಪ್ಲೋಮಾ ಕೋರ್ಸ್ಗಳನ್ನು ಆರಂಭಿಸುವ ಚಿಂತನೆ ಇದೆ. ಈಗಾಗಲೇ ಮಂಗಳೂರು, ಕುಶಾಲನಗರಗಳಲ್ಲಿ ಕಲಿಕಾ ಪ್ರಮಾಣಪತ್ರ ಹೊಂದಿದ್ದ ಶಾಲೆಗಳು ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಕೆಲವು ಯೂನಿವರ್ಸಿಟಿ ಜೊತೆ ಒಪ್ಪಂದ ಮಾಡಿಕೊಂಡು ಯೋಗ ಕಲಿಕೆಗೆ ಒತ್ತು ನೀಡಲಾಗುವುದು ಎಂದು ಡಾ. ರೇಣುಕಾದೇವಿ ಸಿಂಗ್ ಹೇಳಿದ್ದಾರೆ.

ರಾಜ್ಯ ಸರ್ಕಾರ ಮೈಸೂರು ಜಿಲ್ಲೆಯನ್ನು ಯೋಗ ಜಿಲ್ಲೆಯನ್ನಾಗಿ ಮಾಡುವ ಪ್ರಸ್ತಾವನೆ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಆದರೆ, ಕೇಂದ್ರ ಸರ್ಕಾರದ ಯೋಜನೆಯಡಿ ಯೋಗನಗರಿಯನ್ನು ಯೋಗ ಹಬ್ ಆಗಿ ಮಾಡುವ ಚಿಂತನೆ ಇದೆ ಎಂದು ಅವರು ಇದೇ ವೇಳೆ ಹೇಳಿದರು.