ಬೆಂಗಳೂರು: ಮಗಳೊಂದಿಗೆ ಸಲುಗೆಯಿಂದ ಇರಬೇಡ ಎಂದಿದ್ದಕ್ಕೆ ತಂದೆಯನ್ನು ಕೆಲಸಗಾರನೇ ಮಾರಕಾಸ್ತ್ರದಿಂದ ಹೊಡೆದು ಹತ್ಯೆಗೈದ ಘಟನೆ ಕುಮಾರಸ್ವಾಮಿ ಲೇಔಟ್ ಠಾಣಾ ವ್ಯಾಪ್ತಿಯ ಔಟರ್ ರಿಂಗ್ ರಸ್ತೆ ಬಳಿಯಿರುವ ಎಸ್.ಬಿ ಟಿಂಬರ್ ಅಂಗಡಿಯಲ್ಲಿ ನಡೆದಿದೆ.
ಟಿಂಬರ್ ಅಂಗಡಿ ಮಾಲೀಕ ಸೈಯ್ಯದ್ ಅಸ್ಲಮ್ (60) ಹತ್ಯೆಯಾದವರು. ಇಲಿಯಾಸ್ ನಗರದ 23 ವರ್ಷದ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ವಿವರ: ಸೈಯ್ಯದ್ ಅಸ್ಲಮ್ ತನ್ನ ಸಹೋದರನ ಟಿಂಬರ್ ಅಂಗಡಿಯ ಮೇಲ್ವಿಚಾರಣೆ ಮಾಡುತ್ತಿದ್ದ. ಅದೇ ಅಂಗಡಿಯಲ್ಲಿ ಕಳೆದ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದ 23 ವರ್ಷದ ಆರೋಪಿ, ಸೈಯ್ಯದ್ನ ಮಗಳೊಂದಿಗೆ ಸಲುಗೆಯಿಂದ ಇರುತ್ತಿದ್ದ. ಇದನ್ನು ಸಹಿಸದ ಸೈಯ್ಯದ್, "ನನ್ನ ಮಗಳ ತಂಟೆಗೆ ಬರಬೇಡ" ಎಂದು ಎರಡ್ಮೂರು ಬಾರಿ ಆರೋಪಿಗೆ ಎಚ್ಚರಿಸಿದ್ದ. ಇಂದು ಬೆಳಗ್ಗೆ ಪಾನಮತ್ತನಾಗಿ ಅಂಗಡಿ ಬಳಿ ಬಂದಿದ್ದ ಆರೋಪಿ ಹಾಗೂ ಸೈಯ್ಯದ್ ಅಸ್ಲಮ್ ನಡುವೆ ಇದೇ ವಿಚಾರವಾಗಿ ಮತ್ತೆ ಗಲಾಟೆಯಾಗಿತ್ತು. ಸಿಟ್ಟಿಗೆದ್ದ ಆರೋಪಿ, ಅಂಗಡಿಯಲ್ಲಿದ್ದ ಮಾರಕಾಸ್ತ್ರದಿಂದ ಹೊಡೆದು ಸೈಯ್ಯದ್‌ನನ್ನು ಹತ್ಯೆಗೈದಿರುವುದು ತನಿಖೆಯಿಂದ ತಿಳಿದು ಬಂದಿದೆ.
"ಬೆಳಗ್ಗೆ ಕೊಲೆ ನಡೆದಿರುವುದಾಗಿ ಮಾಹಿತಿ ಬಂದಿದ್ದು, ಅದರಂತೆ ಸ್ಥಳಕ್ಕೆ ತೆರಳಿ ಪರಿಶೀಲಿಸಲಾಯಿತು. ಮೃತನ ಹೆಸರು 60 ವರ್ಷದ ಸೈಯ್ಯದ್ ಅಸ್ಲಮ್ ಎಂದು ತಿಳಿದು ಬಂದಿದೆ. ಕೊಲೆಗೈದ 23 ವರ್ಷದ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ" ಎಂದು ಬೆಂಗಳೂರ ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಬಿ.ಜಗಲಾಸರ್ ತಿಳಿಸಿದ್ದಾರೆ.
ಇದನ್ನೂ ಓದಿ: ಹಣದಾಸೆಗೆ ಅಮಾಯಕನ ಹತ್ಯೆ: ಅಪ್ರಾಪ್ತ ಸಹಿತ ಇಬ್ಬರ ಬಂಧನ - MURDER ACCUSED ARRESTED