ಹುಬ್ಬಳ್ಳಿ(ಧಾರವಾಡ): ಕನ್ಸ್ಟ್ರಕ್ಷನ್ ವ್ಯವಹಾರವೊಂದಕ್ಕೆ ಕಡಿಮೆ ಬಡ್ಡಿದರದಲ್ಲಿ ಹಣ ಕೊಡಿಸುವುದಾಗಿ ನಂಬಿಸಿದ್ದ ಆರೋಪಿಯೊಬ್ಬರಿಂದ ಬರೋಬ್ಬರಿ 1,87,45,000 ನಕಲಿ ನೋಟುಗಳನ್ನು ಜಪ್ತಿ ಮಾಡಿ ಬಂಧಿಸಲಾಗಿದೆ ಎಂದು ಹುಬ್ಬಳ್ಳಿ - ಧಾರವಾಡ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಹೇಳಿದ್ದಾರೆ.
ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, "ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡುವುದಾಗಿ ಹೇಳಿ ಸಾಲದ ರೂಪದಲ್ಲಿ ನಕಲಿ ನೋಟುಗಳನ್ನು ನೀಡಿ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸುಧೀರ್ ಮೆಹ್ತಾ ಅಲಿಯಾಸ್ ಮೊಹಮ್ಮದ್ ಆಸೀಫ್ ಎಂಬಾತನನ್ನು ಬಂಧನ ಮಾಡಿ ನಕಲಿ ಖೋಟಾ ನೋಟು ವಶಕ್ಕೆ ಪಡೆಯಲಾಗಿದೆ".
"ಪುಣೆ ಮೂಲದ ಅಶ್ವಿನಿ ಪೆದ್ದವಾಡ ಹಾಗೂ ಆಕೆಯ ಪುತ್ರಿ ಪೃಥಾಳಿಗೆ ವ್ಯವಹಾರವೊಂದಕ್ಕೆ ಆರೋಪಿ ಮೊಹಮ್ಮದ್ ಆಸೀಫ್ 50 ಕೋಟಿ ಸಾಲವನ್ನು ಕಡಿಮೆ ಬಡ್ಡಿದರದಲ್ಲಿ ಕೊಡಿಸುವುದಾಗಿ ನಂಬಿಸಿದ್ದ. ಅಲ್ಲದೇ ಪ್ರೋಸೆಸ್ಸಿಂಗ್ ಶುಲ್ಕ 60 ಲಕ್ಷ ರೂ. ನೀಡಬೇಕು ಎಂದು ನಂಬಿಸಿದ್ದ, 60 ಲಕ್ಷ ರೂ ಅಸಲಿ ಹಣ ಪಡೆದು ಎರಡು ಕೋಟಿ ನಕಲಿ ನೋಟು ನೀಡಿ ವಂಚನೆ ಎಸಗಿದ್ದ".

"ಈ ಮೂಲಕ ಅಸಲಿ ಹಣ ನೀಡಿ ನಕಲಿ ನೋಟು ಪಡೆದು ಮಹಿಳಾ ಉದ್ಯಮಿ ವಂಚನೆಗೆ ಒಳಗಾಗಿದ್ದಾರೆ. ಫೃಥಾಳ ತಾಯಿ ಅಶ್ವಿನಿ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದರು. ಇನ್ನು ಪೃಥಾಳನ್ನು ಸಂಪರ್ಕಿಸಲು ಪ್ರತ್ಯೇಕವಾದ ಮೊಬೈಲ್, ನಂಬರ್ ಬಳಕೆ ಮಾಡಿದ್ದ ಎಂಬುದು ಬೆಳಕಿಗೆ ಬಂದಿದೆ‘‘ ಎಂದು ಮಾಹಿತಿ ನೀಡಿದರು.

"ರಿಯಲ್ ಎಸ್ಟೇಟ್ ಉದ್ಯಮಿ ಹೆಸರಿನಲ್ಲಿ 500 ಮುಖ ಬೆಲೆಯ ನಕಲಿ ನೋಟುಗಳ ಜಪ್ತಿ ಮಾಡಿದ್ದು, ಅದರಲ್ಲಿ 5 ಸಾವಿರ ರೂ. ಮಾತ್ರ ಅಸಲಿ ನೋಟುಗಳು ಪತ್ತೆಯಾಗಿವೆ. ಒಟ್ಟು 1,87, 45,000 ರೂ. ನಕಲಿ ನೋಟ್ ಜೊತೆಗೆ ಒಂದು ಫೋರ್ಡ್ ಇಕೋ ಸ್ಪೋರ್ಟ್ಸ್ ಕಾರು ಜಪ್ತಿ ಮಾಡಲಾಗಿದೆ. ಈ ನಕಲಿ ನೋಟುಗಳ ಜಾಲದ ಬಗ್ಗೆ ತನಿಖೆ ಮುಂದುವರೆದಿದೆ. ಇವುಗಳನ್ನು ತಮಿಳುನಾಡಿನಿಂದ ತಂದಿದ್ದಾಗಿ ಆರೋಪಿ ಬಾಯಿಬಿಟ್ಟಿದ್ದು, ಆ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಈತ ಈ ಹಿಂದೆಯೂ ಇಂತದೆ ಪ್ರಕರಣದಲ್ಲಿ ಭಾಗಿಯಾಗಿದ್ದ. ಇದಲ್ಲದೆ ಈ ತರ ಯಾರಿಗಾದರೂ ವಂಚನೆ ಮಾಡಿದ್ದರೆ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬಹುದು" ಎಂದು ತಿಳಿಸಿದರು.
ಇದನ್ನೂ ಓದಿ: ಬಂಟ್ವಾಳ: ಅಡಿಕೆ ವ್ಯಾಪಾರಿಯಿಂದ ನಂಬಿಕೆದ್ರೋಹ ಆರೋಪ: 94 ಲಕ್ಷ ರೂ.ಗೂ ಅಧಿಕ ವಂಚನೆಯ ದೂರು, ಕೇಸ್ ದಾಖಲು