ಹಾಸನ: ಕಲ್ಲು ಗಣಿಗಾರಿಕೆ ವೇಳೆ ಅವಘಡ ಸಂಭವಿಸಿ ಓರ್ವ ಕಾರ್ಮಿಕ ಮೃತಪಟ್ಟು, ಐವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಹಾಸನ ತಾಲೂಕಿನ ದೂಮಗೆರೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಗ್ರೀನ್ ಗ್ರಾನೈಟ್ ಕ್ವಾರಿಯಲ್ಲಿ ಈ ದುರಂತ ನಡೆದಿದೆ.
ಬಂಡೆ ಮತ್ತು ಮಣ್ಣು ಕುಸಿದು ಬಿದ್ದು ಈ ದುರಂತ ಸಂಭವಿಸಿದೆ. ಕ್ವಾರಿಯ ಮಾಲೀಕ ದೇವರಾಜ್, ಅವರ ಪುತ್ರ ಅರ್ಜುನ್ ಮತ್ತು ಕ್ವಾರಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಪ್ರಕಾಶ್ ಎಂಬ ಮೂವರನ್ನು ಈ ಸಂಬಂಧ ವಶಕ್ಕೆ ಪಡೆಯಲಾಗಿದೆ.
ಘಟನೆ ನಡೆದ ತಕ್ಷಣ ಎಲ್ಲಾ ಗಾಯಾಳುಗಳನ್ನು ಹಾಸನದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಆದರೆ, ಮಣಿ ಎಂಬ ಕಾರ್ಮಿಕನನ್ನು ಚಿಕಿತ್ಸೆಗಾಗಿ ಬೆಂಗಳೂರಿಗೆ ಸಾಗಿಸುವಾಗ ದಾರಿ ಮಧ್ಯೆಯೇ ಮೃತಪಟ್ಟಿದ್ದಾನೆ ಎಂದು ಶಾಂತಿಗ್ರಾಮ ಪೊಲೀಸರು ತಿಳಿಸಿದ್ದಾರೆ.
ರಹಸ್ಯವಾಗಿ ಮೃತದೇಹ ರವಾನೆಗೆ ಯತ್ನ: ಕಾರ್ಮಿಕನ ಸಾವಿನ ವಿಷಯ ಮುಚ್ಚಿಟ್ಟು, ರಹಸ್ಯವಾಗಿ ಆತನ ಶವವನ್ನು ಕೊಳ್ಳೆಗಾಲಕ್ಕೆ ಸಾಗಿಸುವ ಯತ್ನ ನಡೆಸಿದ್ದಾನೆ ಎಂಬ ಆರೋಪದಡಿ ಕ್ವಾರಿ ಮಾಲೀಕ ಅರ್ಜುನ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಬಗ್ಗೆ ಮಾಹಿತಿ ಪಡೆಯಲು ಶಾಂತಿಗ್ರಾಮ ಪೊಲೀಸರು ಕೊಳ್ಳೆಗಾಲಕ್ಕೂ ತೆರಳಿದ್ದಾರೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜಿತಾ ಮತ್ತು ಜಿಲ್ಲಾಧಿಕಾರಿ ಸತ್ಯಭಾಮ ಅವರು ನಿನ್ನೆ ಮಧ್ಯರಾತ್ರಿಯೇ ಕ್ವಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕ್ವಾರಿ ಮಾಲೀಕರ ನಿರ್ಲಕ್ಷ್ಯದಿಂದಾಗಿ ಈ ದುರಂತ ಸಂಭವಿಸಿರುವ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇವರಾಜ್ ವಿರುದ್ಧ ದೂರು ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಶಾಂತಿಗ್ರಾಮ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ದಾವಣಗೆರೆ: ನರೇಗಾ ಕೆಲಸಕ್ಕೆ ಹೋದ ವೇಳೆ ರಕ್ತ ವಾಂತಿ ಮಾಡಿ ಕೂಲಿ ಕಾರ್ಮಿಕ ಸಾವು! - WAGE LABORER DIES