ಚಾಮರಾಜನಗರ: ಕೆಲವೇ ತಾಸುಗಳ ಅಂತರದಲ್ಲಿ ಇಬ್ಬರ ಮೇಲೆ ಹುಲಿ ದಾಳಿ ಮಾಡಿ ಮಹಿಳೆಯನ್ನು ಬಲಿ ಪಡೆದ ಘಟನೆ ಚಾಮರಾಜನಗರ ತಾಲೂಕಿನ ಬೇಡಗುಳಿಯಲ್ಲಿ ಮಂಗಳವಾರ ನಡೆದಿದೆ. ಬೇಡಗುಳಿಯ ರಂಗಮ್ಮ ಎಂಬ ವೃದ್ಧೆ ಹುಲಿ ದಾಳಿಗೆ ಅಸುನೀಗಿದ್ದಾರೆ. ಇನ್ನು ರಾಮಯ್ಯನಪೋಡು ನಿವಾಸಿ ರವಿ(35) ತೀವ್ರವಾಗಿ ಗಾಯಗೊಂಡು ಸಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ರಂಗಮ್ಮ ಎಂಬವರ ಮೇಲೆ ಇಂದು ಬೆಳಗ್ಗೆ ಹುಲಿ ದಾಳಿ ಮಾಡಿದ್ದು ತಲೆ ಮತ್ತು ಹೊಟ್ಟೆ ಭಾಗವನ್ನು ತಿಂದಿತ್ತು. ಇದಕ್ಕೂ ಮುನ್ನ, ಸೋಮವಾರ ರಾತ್ರಿ ಬಹಿರ್ದೆಸೆಗೆಂದು ಬಂದಿದ್ದ ರಾಮಯ್ಯನಪೋಡಿನ ನಿವಾಸಿ ರವಿ(35) ಎಂಬಾತನ ಮೇಲೆ ಹುಲಿ ದಾಳಿ ಮಾಡಿ ಗಾಯಗೊಳಿಸಿತ್ತು.
ಹುಲಿ ದಾಳಿ ವೇಳೆ ರವಿ ಮತ್ತು ಸಂಬಂಧಿಕರ ಕಿರುಚಾಟಕ್ಕೆ ಹುಲಿ ಓಡಿ ಹೋಗಿತ್ತು. ಸದ್ಯ ರವಿ ಅವರನ್ನು ಸಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಲಾಗುತ್ತಿದೆ. ಇದಾದ ಬಳಿಕ, ಇಂದು ಬೆಳಗ್ಗೆ ಬೇಡಗುಳಿಯ ರಂಗಮ್ಮ ಎಂಬ ವೃದ್ಧೆ ಮೇಲೆ ಹುಲಿ ದಾಳಿ ಮಾಡಿದ್ದರಿಂದ ಅವರು ಮೃತಪಟ್ಟಿದ್ದಾರೆ.
ಈ ಕುರಿತು ರವಿ ತಾಯಿ ಜಯಮ್ಮ ಮಾತನಾಡಿ, ನಿನ್ನೆ ರಾತ್ರಿ ಸಂಬಂಧಿಕರ ಮನೆಗೆ ಹೋಗಿದ್ದ ರವಿಯು ಬಹಿರ್ದೆಸೆಗೆಂದು ಹೊರಕ್ಕೆ ಹೋದ ವೇಳೆ ಹುಲಿ ದಾಳಿ ಮಾಡಿದೆ. ಇದನ್ನು, ಗಮನಿಸಿದ ಸಂಬಂಧಿಕರು ಕೂಗಾಡಿ- ಕಿರುಚಾಡಿ ಹುಲಿಯನ್ನು ಓಡಿಸಿದರು, ಕಳೆದ 1 ತಿಂಗಳಿನಿಂದ ಹುಲಿ ಓಡಾಟವಿತ್ತು ಎಂದು ಹೇಳಿದರು.
ಕೆಲವೇ ತಾಸುಗಳಲ್ಲಿ ಹುಲಿ ಸೆರೆ: ಹುಲಿ ದಾಳಿಯ ಮಾಹಿತಿಯಿಂದ ಎಚ್ಚೆತ್ತ ಬಿಆರ್ಟಿ ಅರಣ್ಯಾಧಿಕಾರಿಗಳು, ಭೀಮ ಮತ್ತು ಗಜೇಂದ್ರ ಎಂಬ ಆನೆಗಳನ್ನು ಬಳಸಿಕೊಂಡು ಕಾರ್ಯಾಚರಣೆ ನಡೆಸಿ ಹುಲಿ ಸೆರೆ ಹಿಡಿದಿದ್ದಾರೆ.
ಅರಣ್ಯ ಸಚಿವ ಈಶ್ವರ್ ಖಂಡ್ರೆ ಸಂತಾಪ: ಹುಲಿ ದಾಳಿಗೆ ರಂಗಮ್ಮ ಮೃತಪಟ್ಟಿರುವ ಬಗ್ಗೆ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ನಿನ್ನೆ ರಾತ್ರಿ ಇದೇ ಹಾಡಿಯಲ್ಲಿ ರವಿ ಎಂಬುವವರ ಮೇಲೆ ಹುಲಿ ದಾಳಿ ಮಾಡಿತ್ತು. ರವಿ ಅವರಿಗೆ ಚಿಕಿತ್ಸೆ ನೀಡಲಾಗಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ. ಆದರೆ, ಇಂದು ಬೆಳಗ್ಗೆ ಮಹಿಳೆ ರಂಗಮ್ಮ ಬಹಿರ್ದೆಸೆಗೆ ಹೋಗಿದ್ದಾಗ ಹುಲಿ ದಾಳಿ ಮಾಡಿದ್ದು ಅವರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಮನುಷ್ಯರ ರಕ್ತದ ರುಚಿ ಕಂಡ ಹುಲಿ ಅಪಾಯಕಾರಿ, ಹೀಗಾಗಿ ಕೂಡಲೇ ಹುಲಿಯನ್ನು ಸೆರೆ ಹಿಡಿಯಲು ಕಾರ್ಯಾಚರಣೆ ಆರಂಭಿಸುವಂತೆ ಸೂಚಿಸಿದ್ದೆ. ಅದರಂತೆ, ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಹುಲಿಯನ್ನು ಸೆರೆ ಹಿಡಿದಿದ್ದಾರೆ ಎಂದು ಹೇಳಿದ್ದಾರೆ.
ರವಿ ಅವರ ಚಿಕಿತ್ಸಾ ವೆಚ್ಚ ಭರಿಸಲು ಮತ್ತು ಮೃತರ ಹತ್ತಿರದ ಬಂಧುಗಳಿಗೆ ಪರಿಹಾರದ ಮೊತ್ತ ವಿತರಿಸುವಂತೆಯೂ ಅಧಿಕಾರಿಗಳಿಗೆ ಸೂಚಿಸಿರುವ ಈಶ್ವರ ಖಂಡ್ರೆ, ಕಾಡಿನಂಚಿನ ಜನರು ರಾತ್ರಿಯ ವೇಳೆ ಮತ್ತು ನಸುಕಿನ ಜಾವ ವನ ಪ್ರದೇಶದಲ್ಲಿ ಸಂಚರಿಸುವಾಗ ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಹುಲಿಗಳ ಸಂರಕ್ಷಣೆಗಾಗಿ ಸ್ವಯಂ ಇಚ್ಚೆಯಿಂದ ಕಾಡು ತೊರೆದ ಬುಡುಕಟ್ಟು ಕುಟುಂಬಗಳು!
ಇದನ್ನೂ ಓದಿ: ಚಾಮರಾಜನಗರ : ಹಂದಿಯನ್ನು ಬೇಟೆಯಾಡಿ ತಿಂದ ಹುಲಿ, ವ್ಯಾಘ್ರನ ಚಲನವಲನದ ದೃಶ್ಯ ಸೆರೆ