ಬಾಗಲಕೋಟೆ: ಮಲಪ್ರಭಾ ನದಿಯಲ್ಲಿ ಮುಳುಗಿ ಭಾರತೀಯ ಸೇನೆಯ ಯೋಧ ಸೇರಿ ಇಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮಣ್ಣೇರಿ ಗ್ರಾಮದಲ್ಲಿ ಶನಿವಾರ ನಡೆದಿದೆ. ಮೃತರನ್ನು ಬಾಲಕ ಶೇಖಪ್ಪ (15) ಮತ್ತು ಯೋಧ ಮಹಾಂತೇಶ (25) ಎಂದು ಗುರುತಿಸಲಾಗಿದೆ.
ಆಗಿದ್ದೇನು ? ನದಿಯಲ್ಲಿ ಮುಳುಗುತ್ತಿದ್ದ ಬಾಲಕನನ್ನು ರಕ್ಷಣೆ ಮಾಡಲು ಹೋಗಿ ಯೋಧ ಸಹ ನೀರುಪಾಲಾಗಿದ್ದಾರೆ. ಹಂಸನೂರು ಗ್ರಾಮದ ಶೇಖಪ್ಪ, ಗದಗ ಜಿಲ್ಲೆಯ ಬೇನಾಳ ಗ್ರಾಮದ ಯೋಧ ಮಹಾಂತೇಶ ಮೃತ ದುರ್ದೈವಿಗಳು. ಸ್ನಾನ ಮಾಡಲು ಮೊದಲು ನದಿಗೆ ಇಳಿದಿದ್ದ ಬಾಲಕ ಶೇಖಪ್ಪನು ಈಜು ಬಾರದೇ ಮುಳುಗುತ್ತಿದ್ದಾಗ ರಕ್ಷಣೆಗೆ ಎಂದು ಯೋಧ ಮಹಾಂತೇಶ ಧಾವಿಸಿದ್ದಾರೆ. ನೀರಿನ ಮಧ್ಯೆ ಯೋಧನ ಕೊರಳು ಹಿಡಿದು ಒದ್ದಾಡಿದ ಶೇಖಪ್ಪ, ನದಿಯ ದಡ ಸೇರಲಾರದೇ ಇಬ್ಬರು (ಶೇಖಪ್ಪ & ಮಹಾಂತೇಶ) ಸಲಸಮಾಧಿಯಾಗಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಮತ್ತು ಪೊಲೀಸರಿಂದ ಮೃತದೇಹಗಳನ್ನು ಹೊರೆತೆಗೆಯಲು ಶೋಧ ಕಾರ್ಯ ನಡೆದಿತ್ತು. ಶನಿವಾರ ರಾತ್ರಿ ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ: ಬಾಗಲಕೋಟೆ: ಜಿಲ್ಲಾಸ್ಪತ್ರೆಯಲ್ಲಿ 4 ದಿನದ ಮಗು ಸಾವು - ಸಿಬ್ಬಂದಿಯ ನಿರ್ಲಕ್ಷ್ಯ ಎಂದು ಕುಟುಂಬಸ್ಥರ ಆರೋಪ